

ಎನ್.ಆರ್.ಪುರ: ಸೀತೂರು ಗ್ರಾಪಂಗೆ ಸೇರಿದ ಒಂಭತ್ತು ಸರ್ಕಾರಿ ಶಾಲೆಗಳು ಉತ್ತಮವಾಗಿ ನಡೆಯುತ್ತಿದೆ. ಎಲ್ಲ ಶಾಲೆಗಳಲ್ಲೂ ಬಿಸಿಯೂಟ, ಸಮವಸ್ತ್ರ ನೀಡಲಾಗುತ್ತಿದೆ. ಉತ್ತಮ ಶಿಕ್ಷಕರಿದ್ದಾರೆ. ಆದರೂ ಸರ್ಕಾರಿ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಸೀತೂರು ಗ್ರಾಪಂ ಸದಸ್ಯ ಎಚ್.ಇ.ದಿವಾಕರ ಹೇಳಿದರು.
ಶುಕ್ರವಾರ ರಾತ್ರಿ ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆರಂಭವಾಗಿ 64 ವರ್ಷ ಕಳೆದಿದೆ. ಇಂದಿಗೂ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಗ್ರಾಪಂ. ಸದಸ್ಯ ಎನ್.ಪಿ.ರಮೇಶ್ ಮಾತನಾಡಿ, ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳು ಪ್ರಸ್ತುತ ಉತ್ತಮವಾಗಿ ನಡೆಯುತ್ತಿದೆ. ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಕಾರ ಅಗತ್ಯ. ಮಕ್ಕಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳೂ ಅಗತ್ಯ ಎಂದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ಮಾತನಾಡಿ,ಸರ್ಕಾರಿ ಶಾಲೆಗಳ ಶಿಕ್ಷಕರು ಕ್ರಿಯಾತ್ಮಕವಾಗಿ ಪಾಠ ಮಾಡುತ್ತಿದ್ದಾರೆ. ಇಲ್ಲಿನ ಶಿಕ್ಷಕರು ಚಟುವಟಿಕೆ ಆಧಾರಿತವಾಗಿ ಪಾಠ ಮಾಡುವುದರಿಂದ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಮಟ್ಟದ 600 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಹಳ್ಳಿಬೈಲು ಶಾಲೆ ವಿದ್ಯಾರ್ಥಿನಿ ಮಧುರ ಅವರನ್ನು ಸನ್ಮಾನಿಸಲಾಯಿತು. ಹಳ್ಳಿಬೈಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಅಕ್ಬರ್‌ಆಲಿ, ಗ್ರಾಪಂ ಸದಸ್ಯ ವಿಜಯ, ಮುಖ್ಯಶಿಕ್ಷಕ ಬಸವರಾಜು, ಸಿಆರ್‌ಪಿ ಓಂಕಾರಪ್ಪ, ಸೇವಾ ಪ್ರತಿನಿಧಿ ಪ್ರಕಾಶ, ಸಂಜೀವ ಪೂಜಾರಿ, ಶ್ರೀನಿವಾಸ್, ತಿಮ್ಮೇಶ್, ನಾಗರಾಜ, ದೇವರಾಜ, ಮಹೇಶ ಇದ್ದರು.