ಕುಂಬ್ರಿ ಮರಾಠಿಗರಿಗೆ ರಾಜಕೀಯ ಮೀಸಲಾತಿ ನೀಡಲಿ

17sirsi2 MANAVI
Published on

ಶಿರಸಿ: ಕುಂಬ್ರಿ ಮರಾಠಿಗರಿಗೆ ರಾಜಕೀಯ ಮೀಸಲಾತಿ ಮುಂದಿನ ಮೂರು ತಿಂಗಳಲ್ಲಿ ಘೊಷಿಸಬೇಕು. ಇಲ್ಲದಿದ್ದರೆ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು ಎಂದು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕುಂಬ್ರಿ ಮರಾಠಿ ಸಮಾಜದ ಸಭೆಯಲ್ಲಿ ನಿರ್ಣಯಿಸಲಾಯಿತು.

ಇಲ್ಲಿಯ ಅಂಬೇಡ್ಕರ್ ಸಭಾಭವನದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜರುಗಿದ ‘ಕುಂಬ್ರಿ ಮರಾಠಿ ಮೀಸಲಾತಿ ಎರಡು ದಶಕ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಮರಾಠಿ ನಿಗಮ ವ್ಯಾಪ್ತಿಯಲ್ಲಿ ಕುಂಬ್ರಿ ಮರಾಠಿ ಸಮಾಜ ಸೇರ್ಪಡಿಸುವುದು, ಪರಿಶಿಷ್ಟ ಪಂಗಡಕ್ಕೆ ಪರಿಗಣಿಸುವುದು, ಅರಣ್ಯ ಭೂಮಿ ಅತಿಕ್ರಮಣದಾರರಿಗೆ ಹಕ್ಕು ನೀಡುವುದು ಮತ್ತು ನಾಟಿ ವೈದ್ಯಪದ್ದತಿ ಪ್ರೋತ್ಸಾಹಿಸುವುದು ಇನ್ನಿತರ ನಿರ್ಣಯಗಳನ್ನು ಸಭೆಯಲ್ಲಿ ಸ್ವೀಕರಿಸಲಾಯಿತು.

ಸಭೆಯಲ್ಲಿ ರಾಜ್ಯ ಮಾನವ ಬಂಧು ವೇದಿಕೆ ಸಂಯೋಜಕ ಪ್ರೊ.ಎ.ಬಿ. ರಾಮಚಂದ್ರಪ್ಪ, ರಾಜ್ಯ ಸಂಚಾಲಕ ತೋಳಿ ಭರ್ಮಣ್ಣ, ಜಿಲ್ಲಾ ಕುಂಬ್ರಿ ಮರಾಠಿ ಅಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ಮರಾಠಿ, ಗೌರವಾಧ್ಯಕ್ಷ ದೇವರಾಜ ಮರಾಠಿ ಮಾತನಾಡಿದರು. ಮೀಸಲಾತಿ ಪೂರ್ವ ಸಂಘಟನೆ ಮತ್ತು ಕಾನೂನು ಹೋರಾಟ, ಮೀಸಲಾತಿ ನಂತರ ಎರಡು ದಶಕದ ಚಿಂತನೆ ಮತ್ತು ಸಮಾಜದ ಮುಂದಿರುವ ಮುಂದಿನ ಸಮಸ್ಯೆಗಳು ಎಂಬ ವಿಷಯಗಳ ಕುರಿತು ರ್ಚಚಿಸಿದರು.

ಹಿಂದುಳಿದ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ, ಪ್ರಮುಖರಾದ ಗಣಪತಿ ದೇವು ಮರಾಠಿ, ಮಂಜುನಾಥ ಮರಾಠಿ ನಾಗೂರು, ವಿಶ್ವನಾಥ ಮರಾಠಿ, ಪುರುಷೋತ್ತಮ್ ಮರಾಠಿ, ರುಕ್ಮಾ ಮರಾಠಿ, ಉಮಾ ಗಣಪತಿ ಮರಾಠಿ, ಲಕ್ಷ್ಮಣ ಶೇಷ ಮರಾಠಿ, ಶಿವಾನಂದ ಮರಾಠಿ, ಇತರರು ಉಪಸ್ಥಿತರಿದ್ದರು. ಮೀಸಲಾತಿಗೆ ಸಹಕರಿಸಿದ ಹಿಂದುಳಿದ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರನ್ನು ಈ ಸಭೆಯಲ್ಲಿ ಸನ್ಮಾನಿಸಲಾಯಿತು.

ಕಳೆದ ನಾಲ್ಕು ದಶಕದಿಂದ ಜಿಲ್ಲೆಯ ಸಾಮಾಜಿಕ ಸಂಘಟನೆ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಹೋರಾಟಕ್ಕೆ ದ್ವನಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ನನ್ನ ಹೋರಾಟದ ನಡೆ ತೃಪ್ತಿ ತಂದಿದೆ. | ರವೀಂದ್ರ ನಾಯ್ಕ ಅಧ್ಯಕ್ಷ, ಹೋರಾಟಗಾರರ ವೇದಿಕೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net