ಮುಳಬಾಗಿಲು: ರಸ್ತೆ ಮಧ್ಯದಲ್ಲೇ ಬೃಹತ್ ರಂಧ್ರ, ಹೊರ ಬಂದಿರುವ ಕಬ್ಬಿಣದ ಸರಳುಗಳು, ಅಲ್ಲಲ್ಲಿ ನಿರ್ವಾಣವಾಗಿರುವ ಗುಂಡಿಗಳು. ಇದು ಪಾಲಾರ್ ನದಿ ಮೇಲಿನ ಕಿರು ಸೇತುವೆಯ ದುಸ್ಥಿತಿ. ಪ್ರತಿನಿತ್ಯ ನೂರಾರು ವಾಹನಗಳು ಸಂಚರಿಸುವ ಈ ವಾರ್ಗ ಇದೀಗ ವಾಹನ ಸವಾರರಿಗೆ ಅಪಾಯದ ಹಾದಿಯಾಗಿ ಪರಿಣಮಿಸಿದೆ.
ಕೋಲಾರ-ಶ್ರೀನಿವಾಸಪುರ ರಸ್ತೆಯಿಂದ ಮುದುವಾಡಿ, ಎಂ.ಅಗ್ರಹಾರ ಕ್ರಾಸ್, ಕೊತ್ತಮಂಗಲ ವಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ75ರ ಮುಳಬಾಗಿಲು-ಕೋಲಾರ ರಸ್ತೆ ಸಂಪರ್ಕಿಸುವ ಪ್ರಮುಖ ವಾರ್ಗವಾಗಿದೆ. ಆದರೆ ಸೇತುವೆ ಮಧ್ಯಭಾಗದಲ್ಲಿ ರಸ್ತೆ ಕುಸಿದು ದೊಡ್ಡ ರಂಧ್ರ ಉಂಟಾಗಿದ್ದು, ಒಳಗಿನ ಕಬ್ಬಿಣದ ಸರಳುಗಳು ಹೊರಗೆ ಕಾಣಿಸುತ್ತಿವೆ. ಸೇತುವೆಯ ಮೇಲ್ಮೈ ಸಿಮೆಂಟ್ ಕಾಂಕ್ರೀಟ್ ಕಿತ್ತುಹೋಗಿದ್ದು, ಡಾಂಬರು ಕಳಚಿ ಜಲ್ಲಿ-ಮಣ್ಣು ಹರಡಿಕೊಂಡಿದೆ.
ಮಳೆ ಬಂದರೆ ಮತ್ತಷ್ಟು ಅಪಾಯ: ಪಾಲಾರ್ ನದಿಯಲ್ಲಿ ಮಳೆ ನೀರಿನ ಹರಿವು ಹೆಚ್ಚಾದಾಗ ಸೇತುವೆಯ ಮೇಲೆಯೂ ನೀರು ಹರಿಯುತ್ತದೆ. ಈ ವೇಳೆ ರಸ್ತೆ ಮಧ್ಯದ ರಂಧ್ರ, ಗುಂಡಿಗಳ ಆಳ ಸವಾರರಿಗೆ ಗೋಚರಿಸದಿರುವ ಸಾಧ್ಯತೆಯಿದ್ದು, ವಾಹನಗಳು ನಿಯಂತ್ರಣ ತಪ್ಪುವ ಆತಂಕ ಎದುರಾಗಿದೆ. ಸೇತುವೆಯ ಕೆಳಭಾಗದ ಮಣ್ಣು ಕೊಚ್ಚಿ ಹೋದರೆ ರಸ್ತೆ ಮತ್ತಷ್ಟು ಕುಸಿಯುವ ಅಪಾಯವೂ ಇದೆ. ಜತೆಗೆ ದ್ವಿಚಕ್ರ ವಾಹನ ಸವಾರರು, ರಾತ್ರಿ ವೇಳೆ ಸಂಚರಿಸುವವರಿಗೆ ಅಪಾಯ ಹೆಚ್ಚಾಗಿದ್ದು, ಗುಂಡಿ ತಪ್ಪಿಸಲು ವಾಹನಗಳು ಏಕಾಏಕಿ ದಿಕ್ಕು ಬದಲಿಸುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ.
ಗಡಿ ಗೊಂದಲದಲ್ಲಿ ಸೇತುವೆ: ಸೇತುವೆ ಕೋಲಾರ-ಮುಳಬಾಗಿಲು ತಾಲೂಕುಗಳ ಗಡಿ ಭಾಗದಲ್ಲಿರುವುದರ ಜತೆಗೆ ಶ್ರೀನಿವಾಸಪುರ, ಮುಳಬಾಗಿಲು ವಿಧಾನಸಭಾ ಕ್ಷೇತ್ರಗಳ ಗಡಿಯಲ್ಲಿದೆ. ಮುಳಬಾಗಿಲು ತಾಲೂಕಿನ ಎಂ.ಅಗ್ರಹಾರ ಕ್ರಾಸ್‌ನಿಂದ ಕೋಲಾರ ತಾಲೂಕಿನ ಗಂಗಾರಸನಹಳ್ಳಿ ಗಡಿಯವರೆಗಿನ ಈ ಪ್ರದೇಶದ ನಿರ್ವಹಣೆ ಯಾರ ವ್ಯಾಪ್ತಿಗೆ ಎಂಬ ಗೊಂದಲದಿಂದ ಸೇತುವೆ ನಿರ್ಲಕ್ಷ್ಯಕ್ಕೊಳಗಾಗಿದೆ ಎಂಬುದು ಸ್ಥಳೀಯರ ಆರೋಪ.
ಆ ಪ್ರದೇಶ ಕೋಲಾರ ತಾಲೂಕಿನಲ್ಲಿದ್ದರೂ ವಿಧಾನಸಭಾ ಕ್ಷೇತ್ರ ಶ್ರೀನಿವಾಸಪುರ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ನೇರವಾಗಿ ಅನುದಾನ ಒದಗಿಸಲು ಸಾಧ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳ ಮೂಲಕ ಸರ್ಕಾರದ ಗಮನ ಸೆಳೆಯಲು ಸೂಚಿಸಲಾಗುವುದು.
- ಕೊತ್ತೂರು ಜಿ. ಮಂಜುನಾಥ್, ಕೋಲಾರ ಶಾಸಕ
ಶ್ರೀನಿವಾಸಪುರ, ಮುಳಬಾಗಿಲು ವಿಧಾನಸಭಾ ಕ್ಷೇತ್ರಗಳ ಗಡಿ ಪ್ರದೇಶವಾಗಿರುವುದರಿಂದ ಕೋಲಾರ, ಮುಳಬಾಗಿಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ರಸ್ತೆ ಹಾಗೂ ಸೇತುವೆ ಪರಿಶೀಲಿಸಿ ದುರಸ್ತಿ ಕೈಗೊಳ್ಳುವಂತೆ ಸೂಚಿಸಲಾಗುವುದು.
- ಸಮೃದ್ಧಿ ವಿ. ಮಂಜುನಾಥ್, ಮುಳಬಾಗಿಲು ಶಾಸಕ