

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿನ ಸೋಲನ್ನು ಒಪ್ಪಿಕೊಳ್ಳಬೇಕು. ಹಾಗೆಂದು ಅದರ ಬಗ್ಗೆಯೇ ಪಕ್ಷದ ಕಾರ್ಯಕರ್ತರು ಯೋಚನೆ ಮಾಡುತ್ತ ಕೂರುವುದು ಬೇಡ, 2028ಕ್ಕೆ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಕಬ್ಬನ್ ಉದ್ಯಾನದ ಬಾಲ ಭವನದಲ್ಲಿ ಶುಕ್ರವಾರ ನಡೆದ ‘ಬ್ರಾಂಡ್ ಬೆಂಗಳೂರು ಹಸಿರುಕರಣ’ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಏಕೆ ಈ ರೀತಿ ಮತದಾನವಾಗಿದೆ, ಕಾರಣ ಏನು ಎಂಬುದರ ಬಗ್ಗೆ ಕಾಂಗ್ರೆಸ್‌ನ ಒಕ್ಕಲಿಗ ನಾಯಕರ ಜತೆಗೆ ಸಭೆ ನಡೆಸಿ ಚರ್ಚಿಸಲಾಗಿದೆ. ರಾಜಕಾರಣ ಯಾವಾಗಲೂ ಒಂದೇ ರೀತಿ ಇರುವುದಿಲ್ಲ. ಈ ಹಿಂದೆ ಚೆಲುವರಾಯಸ್ವಾಮಿ, ಬಾಲಕೃಷ್ಣ, ಇವರೆಲ್ಲರೂ 50 ಸಾವಿರ ಮತದ ಅಂತರದಲ್ಲಿ ಸೋತಿದ್ದರು. ಇದೀಗ ಪುನಃ ವಾಪಸ್ ಗೆದ್ದು ಬಂದಿದ್ದಾರೆ. ಯಾವುದೂ ಶಾಶ್ವತವಲ್ಲ. 6 ತಿಂಗಳಿಗಳಲ್ಲಿ ಜನರ ಭಾವನೆ ಬದಲಾವಣೆ ಆಗುತ್ತದೆ ಎಂದರು.
2019ರ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದೆವು. ಆದರೆ ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ನಿರೀಕ್ಷೆಗಿಂತ ನಾಲ್ಕೈದು ಸ್ಥಾನ ಕಡಿಮೆಯಾಗಿದೆ. ಪಕ್ಷದ ಕಾರ್ಯಕರ್ತರು ಚಿಂತೆ ಮಾಡುವುದು ಬೇಡ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ದುಡಿದು 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು.