

ದಾವಣಗೆರೆ: ಪೊಲೀಸರು ಆಸಕ್ತಿ, ಅನ್ವೇಷಣಾ ಗುಣ, ಗ್ರಹಿಕೆ ಮತ್ತು ವೈಜ್ಞಾನಿಕ ಮನೋಭಾವನೆಯಿಂದ ಕೆಲಸ ಮಾಡಿದರೆ ಪ್ರಕರಣಗಳ ತನಿಖೆ ಯಶಸ್ವಿಯಾಗುತ್ತದೆ ಎಂದು ಎಸ್ಪಿ ಹನುಮಂತರಾಯ ಹೇಳಿದರು.
ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಇತ್ತೀಚೆಗೆ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದ್ದು, ಅದನ್ನು ಬಳಸಿಕೊಳ್ಳಬೇಕು. ಕಳೆದ 6 ತಿಂಗಳಲ್ಲಿ ಬೆರಳಚ್ಚು ಮುದ್ರೆಯ ಸಹಾಯದಿಂದ ಏಳೆಂಟು ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ವಿಶ್ವನಾಥ ಪಿ.ಮುದಜ್ಜಿ ಮಾತನಾಡಿ, ಪೊಲೀಸರು ತನಿಖೆಯಲ್ಲಿ ಪರಿಣಿತರಾಗಲು ಕೌಶಲ ತರಬೇತಿ ಅಗತ್ಯ. ಇಂಥ ಕರ್ತವ್ಯ ಕೂಟಗಳು ಅದಕ್ಕೆ ಪೂರಕವಾಗಿವೆ ಎಂದರು.
ಕಳೆದ ಸಾಲಿನ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟದಲ್ಲಿ ವಿಜೇತರಾದ ದುಗ್ಗೇಶ್ ಹಾಗೂ ಕಿರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಅಭಿಯೋಗ ಉಪ ನಿರ್ದೇಶಕಿ ಕೆ.ಜೆ. ಕಲ್ಪನಾ, ವಿಧಿವಿಜ್ಞಾನ ವಿಭಾಗದ ಉಪನಿರ್ದೇಶಕಿ ಛಾಯಾಕುಮಾರಿ ಉಪಸ್ಥಿತರಿದ್ದರು.