

ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗದಿಂದ ಗ್ರೂಪ್ 'ಎ', 'ಬಿ' ವೃಂದದ ಗೆಜೆಟೆಡ್ ಪ್ರೊಬೇಷನರ್‌ಗಳ 384 ಹುದ್ದೆಗಳಿಗೆ ಮಂಗಳವಾರ ನಗರದಲ್ಲಿ ಲಿಖಿತ ಪರೀಕ್ಷೆ ಸುಗಮವಾಗಿ ನಡೆಯಿತು.
ನಗರದ ಬಿಐಇಟಿ, ಜಿಎಂಐಟಿ, ಜಿಎಂಎಸ್ ಕಾಲೇಜು. ಸರ್ಕಾರಿ ಪಪೂ ಕಾಲೇಜು, ಮೋತಿ ವೀರಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎಆರ್‌ಜಿ, ಎವಿ ಕಮಲಮ್ಮ, ಎಕ್ಸ್ ಮುನ್ಸಿಪಲ್, ಸೇಂಟ್ ಜಾನ್ಸ್, ಮಹಿಳಾ ಪ್ರಥಮ ದರ್ಜೆ ಕಾಲೇಜು, ಜೈನ್ ಕಾಲೇಜು ಸೇರಿದಂತೆ 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು.
ಪರೀಕ್ಷೆಗೆ ಒಟ್ಟು 7501 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಬೆಳಗ್ಗೆ 10 ರಿಂದ 12 ಗಂಟೆಯವರೆಗೆ ನಡೆದ ಮೊದಲ ಪರೀಕ್ಷೆಯಲ್ಲಿ 4581 ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದು, 2920 ಮಂದಿ ಗೈರು ಹಾಜರಾದರು.
ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆಯವರೆಗೆ ಆಯೋಜಿಸಿದ್ದ ಎರಡನೇ ಪರೀಕ್ಷೆಯಲ್ಲಿ 3121 ಅಭ್ಯರ್ಥಿಗಳು ಹಾಜರಾದರು. 4380 ಮಂದಿ ಗೈರು ಹಾಜರಾಗಿದ್ದರು.
ಎಲ್ಲಾ ಕೇಂದ್ರದ ಕೊಠಡಿಗಳ ಆವರಣದಲ್ಲಿ ಬಾಡಿ ಕ್ಯಾಮರಾಗಳ ಮೂಲಕ ಅಭ್ಯರ್ಥಿಗಳ ತಪಾಸಣೆ ನಡೆಸಲಾಯಿತು. ಮಹಿಳಾ ಪೊಲೀಸರು, ಎಲೆಕ್ಟ್ರಾನಿಕ್ಸ್ ಡಿವೈಸ್, ಮೈಕ್ರೋ ಫೋನ್ ಬಳಸಲಾಗಿದೆಯೇ ಎಂಬುದನ್ನು ವಿದ್ಯಾರ್ಥಿನಿಯ ಕಿವಿ ಪರೀಕ್ಷಿಸಿ ಒಳಬಿಟ್ಟರು. ಆಯಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಆಯಾ ಕೊಠಡಿ ಹೊರಗೆ ಮೊಬೈಲ್, ಎಲೆಕ್ಟ್ರಾನಿಕ್ ವಸ್ತುಗಳನ್ನು ಇರಿಸಲಾಯಿತು.
ಪ್ರಶ್ನೆಪತಿಕೆಗಳ ಪೂರೈಕೆಗೆ ಐದು ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಐವರು ಮಾರ್ಗಾಧಿಕಾರಿ, 14 ಮಂದಿ ಸ್ಥಳೀಯ ತಪಾಸಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರು ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳ ಸಂಖ್ಯೆಗೆ ತಕ್ಕಂತೆ ತಲಾ 2ರಿಂದ ನಾಲ್ವರು ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಿದರು.