ದೈವ, ಗುರು ಬಲದಿಂದ ಸಾಧನೆ ಹಾದಿ ಸುಲಭ

ಪಾಂಡೋಮಟ್ಟಿ ವಿರಕ್ತಮಠದಲ್ಲಿ 888ನೇ ಮಾಸಿಕ ಶಿವಾನುಭವ
Shivanubhava
ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಡಾ.ಎಂ.ಎಸ್. ಗಿರೀಶ್ ಅವರನ್ನು ಸನ್ಮಾನಿಸಲಾಯಿತು. ಡಾ. ಗುರುಬಸವ ಸ್ವಾಮೀಜಿ, ಸುನಿಲ್ ಕ್ರಿಸ್ಟೋಫರ್, ಬೇಲೂರು ಮಂಜುಳಾ ಯೋಗೀಶ್, ಡಾ. ಇಂಚರಾ ಇತರರಿದ್ದರು.Shivanubhava
Published on: 

ಚನ್ನಗಿರಿ: ಬ್ರಹ್ಮಾಂಡದ ಸಕಲ ಜೀವರಾಶಿಗಳಿಗೂ ಜ್ಞಾನ ನೀಡುವುದು ಗುರುಗಳು. ದೈವ ಹಾಗೂ ಗುರುಗಳ ಬಲದಿಂದ ಮನುಷ್ಯ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಮೂತ್ರಪಿಂಡ ತಜ್ಞ ಬೆಂಗಳೂರಿನ ಡಾ. ಎಂ.ಎಸ್. ಗಿರೀಶ್ ಹೇಳಿದರು.

ತಾಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಶರಣ ಹರಳಯ್ಯ, ಮಧುವರಸರ ಸ್ಮರಣೋತ್ಸವ ಹಾಗೂ 888ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅಕ್ಷರಸ್ಥರೆಲ್ಲರೂ ವಿದ್ಯಾವಂತರು ಅಥವಾ ಜ್ಞಾನಿಗಳಾಗಲು ಸಾಧ್ಯವಿಲ್ಲ. ಅಕ್ಷರ, ವಿದ್ಯೆ ಹಾಗೂ ಜ್ಞಾನ ಪಡೆಯಲು ಗುರುವಿನಿಂದ ಮಾತ್ರ ಸಾಧ್ಯ. 12ನೇ ಶತಮಾನದ ಜಗಜ್ಯೋತಿ ಬಸವಣ್ಣನವರು ಜನರ ಮನಸ್ಸು ಗೆಲ್ಲಲು ಯಾವುದೇ ಪವಾಡಗಳನ್ನು ಮಾಡಲಿಲ್ಲ. ಬದಲಾಗಿ ಸಮಾಜದಲ್ಲಿ ಶುದ್ಧ ಮನಸ್ಸು, ಸತ್ಚಿಂತನೆ, ಕಾಯಕ ಹಾಗೂ ದಾಸೋಹದ ಮೂಲಕ ಪ್ರತಿಯೊಬ್ಬರ ಮನೆ ತಲುಪಿದರು. ಅವರು ಸ್ವಾರ್ಥವಿಲ್ಲದೆ ಸಮಾನತೆ ಹಾಗೂ ಜಾತಿ ಪದ್ಧತಿಯ ನಿರ್ಮೂಲನೆಯ ಮಹತ್ವವನ್ನು ಜಗತ್ತಿಗೆ ಸಾರಿದರು ಎಂದರು.

ವಿಶ್ವವೇ ಒಂದು ಕುಟುಂಬ ಎಂದು ಸಾರುವ ಹಿಂದೂ ಧರ್ಮವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜನರು ದೈಹಿಕ, ಮಾನಸಿಕ, ಸಾಂಸ್ಕೃತಿಕ, ಸಾಮಾಜಿಕ, ಆಧ್ಯಾತ್ಮಿಕ ಹಾಗೂ ಆರ್ಥಿಕವಾಗಿ ಸಬಲರಾಗಿದ್ದಾಗ ಮಾತ್ರ ಪೂರ್ಣ ಆರೋಗ್ಯದಿಂದಿರಲು ಸಾಧ್ಯ. ನಮ್ಮ ವೈದ್ಯಕೀಯ ಕಾಯಕದಲ್ಲಿ ಶೇಕಡಾ 90ರಷ್ಟು ಯಶಸ್ಸು ವೈದ್ಯಕೀಯ ಶ್ರಮವಾದರೆ, ಶೇಕಡಾ 10ರಷ್ಟು ಯಶಸ್ಸು ದೈವ ಹಾಗೂ ಗುರುಬಲದಿಂದ ಸಿಗುತ್ತದೆ ಎಂದು ಪ್ರತಿಪಾದಿಸಿದರು. ಕಾರ್ಯಕ್ರಮದಲ್ಲಿ ಸಿದ್ದನಮಠದ ಸಿದ್ದೇಶ್ ಅವರು ರಚಿಸಿದ ಚಿತಾಗಾರ, ಬದುಕಿನ ಕನ್ನಡಿ ಹಾಗೂ ಆಧುನಿಕ ವಚನಗಳು ಎಂಬ ಮೂರು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ಡಾ.ಎಂ.ಎಸ್. ಗಿರೀಶ್ ಹಾಗೂ ಕಿಡ್ನಿ ದಾನಿ ಆಶಾ ಅವರನ್ನು ಜಿಲ್ಲೆ ಹಾಗೂ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಗೌರವಿಸಲಾಯಿತು. ನಂತರ ಅನಸೂಯಮ್ಮ ಅವರ ನೇತೃತ್ವದಲ್ಲಿ ಬೇಲೂರು ತಾಲೂಕಿನ ಮಹಿಳಾ ತಂಡದಿಂದ ಕಲ್ಯಾಣ ಪತನ ನಾಟಕ ಪ್ರದರ್ಶನಗೊಂಡಿತು.

ಬೆಂಗಳೂರಿನ ಫೌಂಡರ್ ಹೆಲ್ತ್ ಸಂಸ್ಥಾಪಕ ಸುನಿಲ್ ಕ್ರಿಸ್ಟೋಫರ್, ಬೇಲೂರು ಮಂಜುಳಾ ಯೋಗೀಶ್, ಡಾ. ಇಂಚರಾ ಇತರರಿದ್ದರು.

ದೃಢ ನಿಲುವಿನಿಂದ ಯಶಸ್ಸು

ಕರೊನಾ ಸಮಯದಲ್ಲಿ ನಮ್ಮ ಎರಡೂ ಕಿಡ್ನಿಗಳು ವೈಫಲ್ಯಗೊಂಡು, ಚಿಕಿತ್ಸೆಯ ನಂತರ ಪಾರ್ಶ್ವವಾಯು ಪೀಡಿತರಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದೆವು. ಆದರೆ ಆತ್ಮಬಲ, ಗುರುಬಲ, ದೈವಬಲ ಹಾಗೂ ಭಕ್ತಾದಿಗಳ ನಿರಂತರ ಪ್ರಾರ್ಥನೆಯಿಂದ ಇಂದು ಮತ್ತೆ ನಿಮ್ಮೆದುರಿಗೆ ಬಂದಿದ್ದೇವೆ ಎಂದು ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಭಾವುಕರಾದರು. ತಮಗೆ ಕಿಡ್ನಿ ದಾನ ಮಾಡಿದ ಆಶಾ, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡ ಹಾಗೂ ಹಾರೈಸಿದ ಭಕ್ತ ಸಮೂಹಕ್ಕೆ ಶ್ರೀಗಳು ಪ್ರಣಾಮ ಸಲ್ಲಿಸಿದರು. ದೃಢ ನಿಲುವು ಮನುಷ್ಯನಿಗೆ ಖಚಿತ ಯಶಸ್ಸನ್ನು ತರುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net