ಬೈಕ್ ಮೇಲೆ ಕಾಡಾನೆ ದಾಳಿ

ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇಬ್ಬರಿಗೆ ಗಾಯ
Wild Elephant Attack
ದಾಳಿ ಮಾಡಿದ ಕಾಡಾನೆWild Elephant Attack
Published on: 

ಚನ್ನಗಿರಿ: ಬೈಕ್‌ನಲ್ಲಿ ತೋಟಕ್ಕೆ ತೆರಳುತ್ತಿದ್ದ ತಾಲೂಕಿನ ಉಬ್ರಾಣಿ ಗ್ರಾಮದ ರೈತ ಯುವಕರ ಮೇಲೆ ಸೋಮವಾರ ಕಾಡಾನೆ ದಾಳಿ ಮಾಡಿದ್ದು, ಅಪಾಯದಿಂದ ಪಾರಾಗಲೆತ್ನಿಸಿದ ಬೈಕ್‌ಸವಾರರು ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ.

ತೋಟಗಳಿಗೆ ರಾತ್ರಿ ವಿದ್ಯುತ್ ನೀಡುವ ಕಾರಣ ಉಬ್ರಾಣಿ ಗ್ರಾಮದ ಕೃಷಿಕರಾದ ಅಂಜನೇಯ ಮತ್ತು ಮಂಜಪ್ಪ ಅವರು ತೋಟದ ಬೆಳೆಗೆ ನೀರು ಹಾಯಿಸಲೆಂದು ಬೈಕ್‌ನಲ್ಲಿ ತೆರಳುತ್ತಿದ್ದರು. ಗ್ರಾಮದ ಸಿಹಿನೀರಿನ ಕೆರೆ ಪಕ್ಕದ ಕೆಂಗಡೆ ಬಸಪ್ಪ ದೇವಸ್ಥಾನದ ರಸ್ತೆಯಲ್ಲಿ ಹೋಗುವಾಗ ಮರದ ಪಕ್ಕದಲ್ಲಿ ನಿಂತಿದ್ದ ಕಾಡಾನೆ ಇವರ ಮೇಲೆ ದಾಳಿ ನಡೆಸಿದೆ. ಗಾಬರಿಗೊಂಡ ಸವಾರರು ಬೈಕ್‌ನ್ನು ಜೋರಾಗಿ ಓಡಿಸಿದ್ದು ನಿಯಂತ್ರ ತಪ್ಪಿ ಗುಂಡಿಯಲ್ಲಿ ಬಿದ್ದಿದ್ದಾರೆ. ಸ್ವಲ್ಪ ದೂರ ಓಡಿಸಿಕೊಂಡು ಬಂದ ಆನೆ ಅರಣ್ಯಕ್ಕೆ ಹೋಗಿದೆ. ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಗ್ರಾಮಕ್ಕೆ ಕರೆತಂದಿದ್ದಾರೆ.

ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಗಾಯಾಳು ಗಳನ್ನು ಚನ್ನಗಿರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಎರಡು ತಿಂಗಳ ಹಿಂದೆ ರೈತರನ್ನು ಕಾಡಿದ್ದ ಆನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದು ದೂರದ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದು, ಅದೇ ಆನೆ ಮತ್ತೆ ಉಬ್ರಾಣಿ ಅರಣ್ಯ ಪ್ರದೇಶಕ್ಕೆ ಮರಳಿರಬಹುದೆಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಕಳೆದ ಒಂದು ತಿಂಗಳಿಂದ ಗಂಡು ಕಾಡಾನೆಯೊಂದು ಕಾಡಿನಿಂದ ನಾಡಿಗೆ ಅಹಾರ ಮತ್ತು ನೀರನ್ನು ಅರಸಿಕೊಂಡು ಬರುತ್ತಿದೆ. ತಾಲೂಕಿನ ಉಬ್ರಾಣಿ, ದುರ್ವಿಗೆರೆ, ಬಸವಾಪುರ, ಮಾನಮಟ್ಟಿ, ಕಗ್ಗಿ, ಮುಗಳಿಹಳ್ಳಿ, ಚಿಕ್ಕಮಳಲಿ ತಾಂಡ. ಚಿಕ್ಕಮಳಲಿ, ಬಂಡೀಗುಡ್ಡ, ಚಿಕ್ಕಸಂದಿ, ಕೊಡಕಿಕೆರೆ, ಬಸವಾಪುರ ಸೇರಿದಂತೆ ಅರಣ್ಯ ಪ್ರದೇಶದ ಹಂಚಿನ ಗ್ರಾಮಗಳಿಗೆ ಬಂದು ರಾಗಿ, ಭತ್ತ, ಬಾಳೆ, ಅಡಿಕೆ, ತೆಂಗು ಇತರೆ ಬೆಳೆಯನ್ನು ನಾಶಮಾಡುತ್ತಿದೆ. ಉಬ್ರಾಣಿ ಗ್ರಾಮದ ರೈತರ 2 ಎರೆ ಜಮೀನಿನಲ್ಲಿ ಬೆಳೆದಿದ್ದ ರಾಗಿಯನ್ನು ಅನೆ ತುಳಿದು ಸುಮಾರು ಒಂದು ಎಕರೆ ಪ್ರದೇಶದ ಬೆಳೆ ನಾಶ ಮಾಡಿದೆ.

ಪುಂಡಾನೆ ಅಲ್ಲ

ಉಬ್ರಾಣಿ ಭಾಗದಲ್ಲಿ ಕಾಡಾನೆ ಇರುವುದು ನಿಜ. ಈ ಹಿಂದೆ ಕಾಟ ನೀಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಈಗ ಬೇರೆ ಆನೆ ಬಂದಿರಬಹುದು ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ತಿಳಿಸಿದರು. ಮಳೆ ಇಲ್ಲದ ಕಾರಣ ನೀರು, ಆಹಾರ ಹರಸಿ ನಾಡಿನ ಕಡೆಗೆ ಆನೆಗಳು, ಚಿರತೆ, ಕರಡಿ, ಜಿಂಕೆ ಬರುತ್ತಿವೆ. ಗ್ರಾಮಸ್ಥರು ಎಚ್ಚರವಹಿಸಬೇಕು. ರಾತ್ರಿ ವೇಳೆ ತೋಟಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು. ಇಲಾಖೆಯಿಂದ ನಿರಂತರ ಗಸ್ತು ಮತ್ತು ಕೂಬಿಂಗ್ ಕಾರ್ಯಚರಣೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರ ಆಕ್ಷೇಪ

ಉಬ್ರಾಣಿ ಅರಣ್ಯ ಆನೆ ಕಾರಿಡಾರ್ ಆಗಿರುವುದ ರಿಂದ ಕಾಡಾನೆಗಳು ಆಹಾರ ಹರಸಿ ಗ್ರಾಮದ ಕಡೆ ಬರುತ್ತವೆ. ಅರಣ್ಯ ಪ್ರದೇಶದ ಅಂಚಿನಂಲ್ಲಿರುವ ತೋಟಗಳಿಗೆ ರಾತ್ರಿ ವೇಳೆ ಕಾಡಾನೆ ಬರುತ್ತಿದ್ದು ಅಡಿಕೆ ಮರ, ಬಾಳೆ ಗಿಡಗಳನ್ನು ನಾಶ ಮಾಡು ತ್ತಿದೆ. ಬೆಳಗ್ಗೆಯಾಗುತ್ತಿದ್ದಂತೆ ಕಾಡಿಗೆ ವಾಪಾಸು ಹೋಗುತ್ತದೆ. ರೈತರು ಹಗಲಲ್ಲಿ ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ. ಸುತ್ತಲಿನ ಗ್ರಾಮದ ಜನರಲ್ಲಿ ಭೀತಿ ಉಂಟಾಗಿದೆ. ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂಷಿಸುತ್ತಿದ್ದಾರೆ.