

ಹರಿಹರ: ಸ್ವಚ್ಛತೆಯಿಲ್ಲದ ಚರಂಡಿಗಳು, ಬೀದಿ ದೀಪಗಳ ಅವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಕೊರತೆ ಸೇರಿ ವಿವಿಧ ಮೂಲಸೌಕರ್ಯಗಳ ಸಮಸ್ಯೆಗಳನ್ನು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಅನಾವರಣಗೊಳಿಸಿದ ಘಟನೆ ತಾಲೂಕಿನ ಹನಗವಾಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವಾ ಆಂದೋಲನದಲ್ಲಿ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲೇ ಗ್ರಾಮಸ್ಥರು ತಹಸೀಲ್ದಾರ್ ಜಿ. ಸಂತೋಷ್ ಕುಮಾರ್ ಅವರನ್ನು ಪ್ರಶ್ನಿಸಿದರು. ಗ್ರಾಪಂ ಅವಧಿ ಮುಗಿದಿದ್ದು, ತಾವೇ ಆಡಳಿತಾಧಿಕಾರಿಯಾಗಿದ್ದರೂ ಇಲ್ಲಿಯವರೆಗೆ ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ತಾಲೂಕಿನಲ್ಲೇ ಅತಿ ಹೆಚ್ಚು ಕಂದಾಯ ಸಂಗ್ರಹವಾಗುವ ಪಂಚಾಯಿತಿ ಇದಾಗಿದ್ದರೂ ಮೂಲಸೌಕರ್ಯ ಕಲ್ಪಿಸುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದರು.
ಗ್ರಾಪಂ ಮಾಜಿ ಸದಸ್ಯರೊಬ್ಬರು ಮಾತನಾಡಿ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಗೊಂಡಿದ್ದು, ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲ. ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಖಾರವಾಗಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಮಾತನಾಡಿ, ಮುಂದಿನ 15 ದಿನಗಳಲ್ಲಿ ಶಿಥಿಲ ಕಟ್ಟಡ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮದ ಸೂಳೆಕೆರೆ ಹಳ್ಳದಲ್ಲಿ ಹೂಳು ತುಂಬಿ ನೀರು ಶೇಖರಣೆ ಕಡಿಮೆಯಾಗಿದೆ. ಕೂಡಲೇ ಹೂಳು ತೆಗೆಸಿ ಅಥವಾ ನಮಗೇ ಅನುಮತಿ ನೀಡಿ ಎಂದು ರೈತರು ಮನವಿ ಮಾಡಿದರು. ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಪಿ. ಹರೀಶ್, ಗ್ರಾಮಗಳಲ್ಲಿ ಇ-ಸ್ವತ್ತು ಸಮಸ್ಯೆ ಹೆಚ್ಚಾಗಿದೆ. ಬೇಸಿಗೆ ಸಮೀಪಿಸುತ್ತಿರು ವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗದಂತೆ ಎಚ್ಚರ ವಹಿಸಿ, ಸಾರ್ವಜನಿಕರ ಅಹವಾಲುಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವೀರೇಶ್ ಪೂಜಾರ್, ರುದ್ರಮುನಿ ಕೂನರ್, ಬಸವರಾಜ್ ಸಣ್ಣಮನಿ, ಕುಮಾರ್ ಡಿ., ರೇವಣಸಿದ್ದೇಶ ಎಸ್.ಎಂ., ವೀರೇಶ್ ಅಂಗಡಿ, ರಮೇಶ್ ಗೋಪನಾಳ್ ಗ್ರಾಮದ ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದರು. ಸಲ್ಲಿಕೆಯಾದ 62 ಅರ್ಜಿಗಳಲ್ಲಿ ಕೆಲವೊಂದನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದ್ದು, ಉಳಿದವುಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ಶೀಘ್ರ ಬಗೆಹರಿಸಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.
ತಾಪಂ ಇಒ ಸುಮಲತಾ, ಮಲೆಬೆನ್ನೂರು ಪುರಸಭೆ ಮುಖ್ಯಾಧಿಕಾರಿ ರವಿಪ್ರಕಾಶ್, ಕೃಷಿ ಇಲಾಖೆ ಅಧಿಕಾರಿ ನಟರಾಜ್, ಬೆಸ್ಕಾಂ ಎಇಇ ಲಕ್ಷ್ಮಪ್ಪ, ಆರೋಗ್ಯ ಇಲಾಖೆಯ ಎಂ. ಉಮ್ಮಣ್ಣ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.