

ಚನ್ನಗಿರಿ: ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ ನಾಡಿನ ಪ್ರಥಮ ವೀರ ಸ್ವಾತಂತ್ರ್ಯ ಹೋರಾಟಗಾರ್ತಿ. ಅವರ ಶೌರ್ಯ ಹಾಗೂ ಆದರ್ಶಗಳನ್ನು ಇಂದಿನ ಮಹಿಳೆಯರು ಅಳವಡಿಸಿಕೊಳ್ಳಬೇಕಿದೆ ಎಂದು ತಹಸೀಲ್ದಾರ್ ಎನ್.ಜೆ. ನಾಗರಾಜ್ ಹೇಳಿದರು.
ತಾಲೂಕು ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಮಹಿಳೆಯರು ಸೇರುವ ಕಡೆಗಳಲ್ಲಿ ಅವರ ಶೌರ್ಯದ ಗುಣಗಾನ ಮಾಡಲಾಗುತ್ತದೆ. ಆದರೆ, ಅವರನ್ನು ಕೇವಲ ವರ್ಷಕ್ಕೊಮ್ಮೆ ಸ್ಮರಿಸುವ ಇತಿಹಾಸದ ಪುಟಗಳಾಗಿ ಮಾಡಿದ್ದೇವೆಯೇ ವಿನಃ ಅವರ ಆದರ್ಶಗಳನ್ನು ನಿಜ ಜೀವನದಲ್ಲಿ ಪಾಲಿಸುತ್ತಿದ್ದೇವೆಯೇ ಎನ್ನುವ ಅನುಮಾನ ಮೂಡುತ್ತದೆ. ಚನ್ನಮ್ಮ ಅವರ ತತ್ವಗಳನ್ನು ಅಳವಡಿಸಿಕೊಳ್ಳುವಲ್ಲಿ ನಾವಿನ್ನೂ ಹಿಂದೆ ಬಿದ್ದಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿದ್ದು ಕೇವಲ ತಮ್ಮ ಸಂಸ್ಥಾನದ ಭೂಮಿಗಾಗಿ ಮಾತ್ರವಲ್ಲ, ಕನ್ನಡ ನಾಡಿನ ಸ್ವಾಭಿಮಾನ, ಹಕ್ಕು ಮತ್ತು ಸ್ವಾತಂತ್ರ್ಯದ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ. ಬ್ರಿಟಿಷರ ಸಾಮ್ರಾಜ್ಯಶಾಹಿ ಧೋರಣೆಯೆದುರು ತಲೆಬಾಗದ ಅವರ ಹೋರಾಟ, ಅನ್ಯಾಯದ ಮುಂದೆ ಯಾವ ಶಕ್ತಿಯೂ ನಮ್ಮ ಸ್ವಾಭಿಮಾನವನ್ನು ಮಣಿಸಲಾರದು ಎಂಬ ಸಂದೇಶವನ್ನು ನೀಡಿದೆ ಎಂದರು.
ಇಂದಿಗೂ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ, ಭ್ರಷ್ಟಾಚಾರ, ಜಾತಿ ತಾರತಮ್ಯ ಹಾಗೂ ಅನ್ಯಾಯದಂತಹ ಸಮಸ್ಯೆಗಳು ಜೀವಂತವಾಗಿವೆ. ಅನ್ಯಾಯ ಕಣ್ಣೆದುರು ನಡೆದರೂ ತಮಗೆ ಸಂಬಂಧವಿಲ್ಲದಂತೆ ಮೌನವಾಗಿರುವ ಮನೋಭಾವ ಕಂಡುಬರುತ್ತಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಚನ್ನಮ್ಮಳ ಧೈರ್ಯ ಇಂದಿನ ಹೆಣ್ಣುಮಕ್ಕಳಲ್ಲಿ ಬರಬೇಕಿದೆ. ಪ್ರತಿಯೊಬ್ಬ ಹೆಣ್ಣುಮಗಳಿಗೂ ಧೈರ್ಯವಾಗಿ ಬದುಕುವ ಸ್ವಾತಂತ್ರ್ಯ, ಶಿಕ್ಷಣ ಮತ್ತು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅವಕಾಶ ಕಲ್ಪಿಸಿಕೊಡಬೇಕಿದೆ ಎಂದು ತಿಳಿಸಿದರು.
ರುದ್ರಸ್ವಾಮಿ, ಚುನಾವಣೆ ಶಿರಸ್ತೇದಾರ್ ಕೆ.ಜೆ. ಜಗದೀಶ್, ಸುವರ್ಣ, ಅಕ್ಷತಾ, ಸರಸ್ವತಿ, ಶ್ರೀನಿವಾಸ್, ಪ್ರಕಾಶ್, ಪ್ರಜ್ವಲ್, ಉಲ್ಲಾಸ್ ಇತರರು ಇದ್ದರು.