

ಮಾಯಕೊಂಡ: ಸಹಕಾರ ಸಂಘಗಳು ಗ್ರಾಮದ ಹಿಂದುಳಿದವರಿಗೂ ಆರ್ಥಿಕ ನೆರವು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಶಕ್ತಿಯಾಗಬೇಕು ಎಂದು ಸಚಿವ ಕೆ.ಎಸ್.ಬಸವಂತಪ್ಪ ಆಶಿಸಿದರು.
ದಾವಣಗೆರೆ ತಾಲೂಕು ಬಾಡ ಗ್ರಾಮದಲ್ಲಿ ಭಾನುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಉಗ್ರಾಣ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳ ಬಲವರ್ಧನೆಗೆ ಸರ್ಕಾರದಿಂದ ಹೆಚ್ಚಿನ ಅನುದಾನ ದೊರಕಿಸಲು ಪ್ರಯತ್ನಿಸಲಿದ್ದು, ಈ ವರ್ಷ ಬಾಡ ಗ್ರಾಮಕ್ಕೆ 4-5 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದರು.
ಬಾಡ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘ ಮಿನಿ ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘಗಳು ಹೇಗಿರಬೇಕು ಎಂಬುದಕ್ಕೆ ಮಾದರಿ ಆಗಬೇಕೇ ಹೊರತು ಹೇಗಿರಬಾರದು ಎಂಬುದಕ್ಕೆ ಮಾದರಿ ಯಾಗಬಾರದು ಎಂದರು.
ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಸದಸ್ಯರು ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಸಂಘ ಬೆಳೆಸುತ್ತಿರುವುದು ಶ್ಲಾಘನೀಯ. 50 ಮಹಿಳೆಯರು ಸಂಘದ ಜವಾಬ್ದಾರಿ ಹೊತ್ತು ಠೇವಣಿ ಸಂಗ್ರಹಿಸುವುದರ ಜತೆ ಜನರಿಗೆ ಸಾಲ ಸೌಲಭ್ಯ ಕಲ್ಪಿಸುವ ಕಾರ್ಯದಲ್ಲಿ ತೊಡಗಿರುವುದು ಹೆಮ್ಮೆಯ ವಿಚಾರ ಎಂದರು.
ಬಾಡ ಗ್ರಾಮ ವಾಣಿಜ್ಯ ಚಟುವಟಿಕೆಗಳ ಕೇಂದ್ರವಾಗಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ವ್ಯಾಪಾರ, ಕೃಷಿ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.
ದಾವಣಗೆರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಜೆ.ಆರ್. ಷಣ್ಮುಖಪ್ಪ, ಉಪಾಧ್ಯಕ್ಷ ಬಿ. ಕುಮಾರ್, ಬಾಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ. ಪ್ರಕಾಶ್, ರುದ್ರಸ್ವಾಮಿ, ಬಸವಲಿಂಗಪ್ಪ, ಎಂ.ಡಿ. ಸುರೇಶ್, ಸೈಫುಲ್ಲಾ ಖಾನ್, ಎ. ನಾಗರಾಜ್ ಇತರರು ಇದ್ದರು.
ಡಿಸೆಂಬರ್ ಮೊದಲ ವಾರದಲ್ಲಿ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಯಲಿದ್ದು, ಬೇಸಿಗೆ ಬೆಳೆಗೆ ನೀರು ಹರಿಸುವ ವೇಳಾಪಟ್ಟಿ ನಿರ್ಧರಿಸಲಾಗುತ್ತದೆ ಎಂದು ಬಸವಂತಪ್ಪ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲೆಯ ಶಾಸಕರು ಸಭೆಯಲ್ಲಿ ಚರ್ಚಿಸಿ ಕಾಲುವೆ ನೀರು ಹರಿಸುವ ದಿನಾಂಕ ಪ್ರಕಟಿಸಲಿದ್ದಾರೆ. ಕಾಲುವೆಗಳಿಗೆ ನೀರು ಹರಿಸಿದ ವೇಳೆ ರೈತರು ತಮ್ಮ ವ್ಯಾಪ್ತಿಯ ಕೆರೆ ತುಂಬಿಸಿಕೊಳ್ಳಲು ಆದ್ಯತೆ ನೀಡಬೇಕು. ಕೆರೆಗಳು ಭರ್ತಿಯಾದರೆ ನೀರಿನ ಸಮಸ್ಯೆ ನಿವಾರಿಸಬಹುದು ಎಂದು ಸಲಹೆ ನೀಡಿದರು.
ಮುಂಬರುವ ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾಗುವ ಸಾಧ್ಯತೆ ಇದ್ದು ಸಾರ್ವಜನಿಕರು ಇತಿಮಿತಿಯಿಂದ ನೀರನ್ನು ಬಳಸಬೇಕು. ಲಭ್ಯವಿರುವ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು ಎಂದು ಸಚಿವ ಕೆ.ಎಸ್. ಬಸವಂತಪ್ಪ ಸಲಹೆ ಮಾಡಿದ್ದಾರೆ.ಈಗಾಗಲೇ ಗುಡಾಳು, ಕಂದನಕೋವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಗೊಂಡಿದ್ದು, ಖಾಸಗಿ ಬೋರ್‌ವೆಲ್ ಬಾಡಿಗೆ ಪಡೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಭವಿಷ್ಯದಲ್ಲಿ ನೀರಿನ ಅಭಾವ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನೀರಿನ ಮಿತ ಬಳಕೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು ಎಂದರು.
ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಜಾರಿಗೊಳಿಸಿರುವ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನದಲ್ಲಿ ಕಂಡುಬರುತ್ತಿರುವ ಲೋಪಗಳ ಬಗ್ಗೆ ಸಚಿವ ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿಗೆ ಪೂರ್ಣ ಪ್ರಮಾಣದ ಹಣ ಪಾವತಿಯಾಗಿದ್ದರೂ ಮನೆಗಳಿಗೆ ನೀರು ತಲುಪಿಲ್ಲ. ಗ್ರಾಮಸ್ಥರು ಹಳ್ಳದ ನೀರನ್ನೇ ಅವಲಂಬಿಸುವ ಪರಿಸ್ಥಿತಿ ದುರದೃಷ್ಟಕರ. ಸಾರ್ವಜನಿಕರ ತೆರಿಗೆ ಹಣ ವ್ಯಯಿಸಿ ಮಾಡಿದ ಯೋಜನೆಯಿಂದ ಉಪಯೋಗವಾಗದಿದ್ದರೆ ಏನು ಲ? ಅಧಿಕಾರಿಗಳು ಇಂತಹ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಸರಿಪಡಿಸಬೇಕಾಗಿದೆ ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿರುವ ಜಲಜೀವನ್ ಮಿಷನ್ ಯೋಜನೆ ಸಮರ್ಪಕವಾಗಿ ಜಾರಿಗೊಳಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮನೆಮನೆಗೂ ಶುದ್ಧ ಕುಡಿಯುವ ನೀರು ತಲುಪಿಸುವ ಉದ್ದೇಶ ಸಾಕಾರಗೊಳ್ಳಬೇಕು ಎಂದರು.
ಮಾಯಕೊಂಡ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಬಾಡದಿಂದ ಶಂಕರನಹಳ್ಳಿ ಮಾರ್ಗವಾಗಿ ಮಾಯಕೊಂಡಕ್ಕೆ ತೆರಳುವ ರಸ್ತೆಯ ಡಾಂಬರೀಕರಣ, ಸಿಸಿ ರಸ್ತೆ ಹಾಗೂ ಕಬ್ಬೂರು ರಸ್ತೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ವಿಠಲಾಪುರ ಗ್ರಾಮದಿಂದ ಮಾಯಕೊಂಡ ಗಡಿಯವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು.ಸರ್ಕಾರಿ ಶಾಲೆಗಳ ಉನ್ನತೀಕರಣ, ಕೆಪಿಎಸ್ ಶಾಲೆ ಮಂಜೂರಾತಿಗೆ ಪ್ರಯತ್ನಿಸಲಾಗುವುದು. ಗ್ರಾಮಗಳ ದೇವಾಲಯ ಪಟ್ಟಿ ಸಲ್ಲಿಸಿದರೆ ಅನುದಾನ ಒದಗಿಸಲಾಗುವುದು. ಮೀನುಗಾರಿಕೆ, ಕೆರೆಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಬಸವಂತಪ್ಪ ಹೇಳಿದರು.