ಮರಾಠ ಸಮಾಜದ ಅಭಿವೃದ್ಧಿಗೆ 185 ಕೋ. ರೂ. land worship

ಚನ್ನಗಿರಿ ತಾಲೂಕು ಹೊದಿಗೆರೆ ಗ್ರಾಮದಲ್ಲಿ ಸೋಮವಾರ ಅಭಿವೃದ್ಧಿ ಕಾಮಗಾರಿಯ ಗುದ್ದಲಿಪೂಜೆಯನ್ನು ಶಾಸಕ ಬಸವರಾಜ್ ಶಿವಗಂಗಾ ನೆರವೇರಿಸಿದರು. ವಡ್ನಾಳ್ ಜಗದೀಶ್, ಹೊದಿಗೆರೆ ರಮೇಶ್, ಎಂ.ಸಿ. ಮೋಳೆ ಬೆಳಗಾವಿ, ವೈ.ಮಲ್ಲೇಶ್ ಇದ್ದರು.land worship
ಚನ್ನಗಿರಿ ತಾಲೂಕು ಹೊದಿಗೆರೆ ಗ್ರಾಮದಲ್ಲಿ ಸೋಮವಾರ ಅಭಿವೃದ್ಧಿ ಕಾಮಗಾರಿಯ ಗುದ್ದಲಿಪೂಜೆಯನ್ನು ಶಾಸಕ ಬಸವರಾಜ್ ಶಿವಗಂಗಾ ನೆರವೇರಿಸಿದರು. ವಡ್ನಾಳ್ ಜಗದೀಶ್, ಹೊದಿಗೆರೆ ರಮೇಶ್, ಎಂ.ಸಿ. ಮೋಳೆ ಬೆಳಗಾವಿ, ವೈ.ಮಲ್ಲೇಶ್ ಇದ್ದರು.land worship
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸವರಾಜ್ ಶಿವಗಂಗಾ ಭರವಸೆ
  • ಹೊದಿಗೆರೆ ಗ್ರಾಮದಲ್ಲಿ ಗುದ್ದಲಿಪೂಜೆ
ಚನ್ನಗಿರಿ: ಕಾಂಗ್ರೆಸ್ ಸರ್ಕಾರ ಮರಾಠ ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ರಚಿಸಿ 185 ಕೋಟಿ ರೂ. ನೀಡಿದೆ ಎಂದು ಶಾಸಕ ಬಸವರಾಜ್ ಶಿವಗಂಗಾ ಹೇಳಿದರು.
ತಾಲೂಕು ಹೊದಿಗೆರೆ ಗ್ರಾಮದ ಶ್ರೀ ಷಹಾಜಿ ರಾಜೇ ಬೊಸ್ಲೆ ಸ್ಮಾರಕ ಬಳಿ ಸೋಮವಾರ 2024-25ನೇ ಸಾಲಿನ 5054 ಅಪೆಂಡಿಕ್ಸ್ ಇ ಜಿಲ್ಲಾ ಮತ್ತು ಇತರ ರಸ್ತೆ ಸುಧಾರಣೆ ಯೋಜನೆಯಡಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಹಿಂದುಗಳ ರಕ್ಷಣೆ ಮಾಡಿದ ಶಿವಾಜಿ ತಂದೆ ಷಹಾಜಿ ಬೊಸ್ಲೆ ಅವರ ಸಮಾಧಿ ತಾಲೂಕಿನಲ್ಲಿರುವುದು ನಮ್ಮ ಪುಣ್ಯ. ಈ ಸ್ಥಳವನ್ನು ಪ್ರವಾಸಿ ತಾಣವನ್ನಾಗಿಸಲು ಈಗಾಗಲೇ 135 ಕೋಟಿ ರೂ. ವೆಚ್ಚ ಯೋಜನೆಯ ಡಿಪಿಆರ್ ತಯಾರಿಸಲಾಗಿದೆ. ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ, ಅನುದಾನವನ್ನು ತಂದು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈಗಾಗಲೇ ಸಮಾಧಿಯ ಸುತ್ತಮುತ್ತಲ ಪ್ರದೇಶವನ್ನು ಅಭಿವೃದ್ಧಿಪಡಿಸಲು ಸಚಿವ ಸತೀಶ್ ಜಾರಕಿಹೊಳಿ ಅವರು 5 ಕೋಟಿ. ರೂ. ಅನುದಾನ ನೀಡಿದ್ದಾರೆ. ಜತೆಗೆ ನಾನು ಕೂಡ 25 ಲಕ್ಷ ರೂ. ನೀಡಿದ್ದೇನೆ ಎಂದು ತಿಳಿಸಿದರು.
ರಾಜ್ಯದ ಮರಾಠ ಸಮಾಜದವರು ಬಿಜೆಪಿ ಕಡೆಗೆ ಒಲವು ತೋರಿಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ಚನ್ನಗಿರಿ ಕ್ಷೇತ್ರದ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಪಕ್ಷದ ಪರವಾಗಿ ಇದ್ದಾರೆ. ಸಮಾಧಿ ಸ್ಥಳಕ್ಕೆ ಪ್ರವಾಸಿಗರು ಸುಲಭವಾಗಿ ಬರಲೆಂದು ಹೊದಿಗೆರೆ ಪ್ರಾರಂಭದಿಂದ ನೀತಿಗೆರೆ ಗ್ರಾಮದವರೆಗೆ ಸಿಸಿ ರಸ್ತೆ ಮಾಡಿಸಲಾಗುತ್ತದೆ ಎಂದರು.
ಮರಾಠ ಸಮಾಜ ನಿಗಮದ ಅಧ್ಯಕ್ಷ ಮರಿಯೋಜಿರಾವ್ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಹೆಚ್ಚಿನ ವ್ಯಾಸಂಗ ಮಾಡಿಸಲು ವಿದೇಶಕ್ಕೆ ಕಳುಹಿಸಿದವರು ಮರಾಠ ಸಮಾಜದ ಶಾಹು ಮಹಾರಾಜರು. ಅಂದಿನಿಂದ ಇಂದಿನವರೆಗೆ ಸಮಾಜದವರು ಸಮಾಜಮುಖಿ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಹೊದಿಗೆರೆ ಗ್ರಾಮದಲ್ಲಿ ಷಹಾಜಿಯವರ ನೆನಪಿಗಾಗಿ ಟ್ರೈನಿಂಗ್ ಸೆಂಟರ್ ಪ್ರಾರಂಭಿಸಬೇಕಿದೆ. ಈಗಾಗಲೇ ಸೈನಿಕ ಶಾಲೆಯನ್ನು ಪ್ರಾರಂಭಿಸುವ ಯೋಜನೆಯನ್ನು ಮಾಡಿ ತಾತ್ಕಲಿಕವಾಗಿ ನಿಲ್ಲಿಸಲಾಗಿದೆ. ಆ ಯೋಜನೆಯನ್ನು ಮುಂದುವರಿಸಬೇಕು. ಭವನದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಸರ್ಕಾರದಿಂದ 2.5 ಕೋಟಿ ಅನುದಾನ ಮಂಜೂರು ಮಾಡಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದರು.
ಜೀವ ವೈವಿಧ್ಯ ನಿಗಮ ಅಧ್ಯಕ್ಷ ವಡ್ನಾಳ್ ಜಗದೀಶ್, ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್, ವಿಧಾನ ಪರಿಷತ್ ಸದಸ್ಯ ಎಂ.ಸಿ. ಮೋಳೆ ಬೆಳಗಾವಿ, ಸ್ವಾಭಿಮಾನಿ ಸಮಿತಿ ಅಧ್ಯಕ್ಷ ವೈ. ಮಲ್ಲೇಶ್, ಭದ್ರಾವತಿ ಮರಾಠ ಸಮಾಜದ ಅಧ್ಯಕ್ಷ ಲೋಕೇಶಪ್ಪ, ಚನ್ನಗಿರಿ ಸಮಾಜದ ಅಧ್ಯಕ್ಷ ಎಂ.ಬಿ. ಶಿವಾಜಿರಾವ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net