ಹರಿಹರದಲ್ಲಿ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ಬ್ರೇಕ್!

ಪ್ರಭಾವಿಗಳ ಒತ್ತಡಕ್ಕೆ ಮಣಿದರೇ ಅಧಿಕಾರಿಗಳು?
Removal of encroachments
ಕಳೆದ ತಿಂಗಳು ನಗರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಳೇ ಪಿ.ಬಿ ರಸ್ತೆಯಲ್ಲಿ ಫುಟ್‌ಪಾತ್ ತೆರವು ಕಾರ್ಯ ಮಾಡುತ್ತಿರುವುದು.Removal of encroachments
Published on: 

ಕೀರ್ತಿಕುಮಾರ್ ಹರಿಹರ

ನಗರದ ಸೌಂದರ್ಯೀಕರಣ ಹೆಚ್ಚಳ ಮತ್ತು ಸುಗಮ ಸಂಚಾರಕ್ಕೆ ದೊಡ್ಡ ಕಂಟಕವಾಗಿದ್ದ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆಗೆ ನಗರಸಭೆ ತೋರಿದ ಆಸಕ್ತಿಗೆ ನಾಗರಿಕರು ಖುಷಿಪಟ್ಟಿದ್ದರು. ಸಾರ್ವಜನಿಕರು ಇನ್ನು ಮುಂದೆ ರಸ್ತೆಗಳ ಬದಲಿಗೆ ಪಾದಚಾರಿ ಮಾರ್ಗಗಳಲ್ಲಿಸ ಸಂಚರಿಸಬಹುದು ಎಂದು ನಂಬಿ ಕೊಂಡಿದ್ದರು. ಆದರೆ ಒತ್ತುವರಿ ತೆರವು ಕಾರ್ಯಾಚರಣೆ ಕೇವಲ ಆರಂಭ ಶೂರತ್ವ ಎನ್ನು ವಂತಾಗಿದ್ದು, ನಗರಸಭೆ ಆಡಳಿತ ನಗೆಪಾಟಲಿಗೆ ಗುರಿಯಾಗಿದೆ.

ಹಳೇ ಪಿಬಿ ರಸ್ತೆ (ಬಿರೂರು ಸಮ್ಮಸಗಿ) ಒತ್ತುವರಿ ತೆರವು ಕಾರ್ಯಾಚರಣೆ ಮುಗಿಸಿ, ನೇರವಾಗಿ ಶಿವಮೊಗ್ಗ ರಸ್ತೆಯತ್ತ ತೆರಳಬೇಕಾಗಿದ್ದ ಬುಲ್ಡೋಜರ್‌ಗಳು, ಹಬ್ಬಗಳ ನೆಪವೊಡ್ಡಿ ಮೂಲೆ ಸೇರಿವೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಅಧಿಕಾರಿಗಳು ರಾಜಕೀಯ ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕಾರ್ಯಾಚರಣೆಯನ್ನು ಕೈಬಿಟ್ಟರೇ? ಎಂಬ ಪ್ರಶ್ನೆ ಕಾಡಲಾರಂಭಿಸಿದೆ. ನಗರಸಭೆಯ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದಿದ್ದಾರೆ ಎಂಬ ಅಪವಾದ ತೊಡೆದುಹಾಕಬೇಕಾದರೆ, ತಕ್ಷಣವೇ ಯಾವುದೇ ಮುಲಾಜಿಲ್ಲದೆ ಶಿವಮೊಗ್ಗ ರಸ್ತೆಯ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಬೇಕು. ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಅಧಿಕಾರಿಗಳು ಕೃತಿಯಲ್ಲಿ ತೋರಿಸಬೇಕಿದೆ. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಸಾರ್ವಜನಿಕರೇ ಬೀದಿಗಿಳಿದು ನಗರಸಭೆಯ ತಾರತಮ್ಯ ನೀತಿಯ ವಿರುದ್ಧ ಹೋರಾಟ ಮಾಡುವುದು ನಿಶ್ಚಿತ.

ಒತ್ತುವರಿ ರಾಜಕಾರಣ

ಹಳೇ ಪಿಬಿ ರಸ್ತೆಗೊಂದು ನ್ಯಾಯ, ಶಿವಮೊಗ್ಗ ರಸ್ತೆಗೊಂದು ನ್ಯಾಯವೇ? ಹಳೇ ಪಿಬಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಹಾಗೂ ರಸ್ತೆ ಒತ್ತುವರಿ ಮಾಡಿಕೊಂಡಿದ್ದ ಸಣ್ಣಪುಟ್ಟ ಅಂಗಡಿ ಮುಂಗಟ್ಟುಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿದ ನಗರಸಭೆ ಆಡಳಿತ, ಅದೇ ಇಚ್ಛಾಶಕ್ತಿಯನ್ನು ಶಿವಮೊಗ್ಗ ರಸ್ತೆಯಲ್ಲಿ ಏಕೆ ತೋರುತ್ತಿಲ್ಲ ಎಂಬ ಅನುಮಾನ ಸಹಜವಾಗಿದೆ. ಶಿವಮೊಗ್ಗ ರಸ್ತೆ ವಿಸ್ತರಣೆ ಮತ್ತು ಪಾದಚಾರಿ ಮಾರ್ಗ ಮುಕ್ತಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎನ್ನುವಷ್ಟರಲ್ಲಿ ಹಬ್ಬದ ನೆಪ ಮುಂದೆ ಬಂತು. ಗಣೇಶ ಚತುರ್ಥಿ, ಈದ್ ಮಿಲಾದ್ ಮುಂತಾದ ಹಬ್ಬಗಳ ವೇಳೆ ವ್ಯಾಪಾರಕ್ಕೆ ತೊಂದರೆಯಾಗಬಾರದು ಎಂದು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಆದರೆ ಈಗ ಹಬ್ಬಗಳು ಮುಗಿದಿದ್ದರೂ ಅಧಿಕಾರಿಗಳು ತೆರವು ಕಾರ್ಯಾಚರಣೆ ಆರಂಭಿಸದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಭಾವಿಗಳ ಒತ್ತಡಕ್ಕೆ ಮಣಿಯಿತೇ?

ಶಿವಮೊಗ್ಗ ರಸ್ತೆಯ ಇಕ್ಕೆಲಗಳಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳ ಬೆಂಬಲಿಗರು ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡಿ ಕೊಂಡಿರುವುದು ಅಂಗೈ ಹುಣ್ಣಿನಂತೆ ಸ್ಪಷ್ಟವಾಗಿದೆ. ಹಳೇ ಪಿಬಿ ರಸ್ತೆಯ ಸಣ್ಣ ವ್ಯಾಪಾರಿಗಳ ಮೇಲೆ ಮುಗಿಬಿದ್ದ ಅಧಿಕಾರಿಗಳು, ಶಿವಮೊಗ್ಗ ರಸ್ತೆಯ ಪ್ರಭಾವಿಗಳ ಕಟ್ಟಡ ತೆರವು ಮಾಡಲು ಹಿಂಜರಿಯುತ್ತಿರುವುದು ಸಾರ್ವ ಜನಿಕರ ಕಣ್ಣು ಕೆಂಪಾಗಿಸಿದೆ.

ಒತ್ತುವರಿ ತೆರವು ಕೇವಲ ಬಡವರಿಗಷ್ಟೇ ಸೀಮಿತವೇ? ಶ್ರೀಮಂತರು ಮತ್ತು ಪ್ರಭಾವಿಗಳಿಗೆ ನಗರಸಭೆ ಮಣಿದಿದೆಯೇ? ಎಂಬ ಪ್ರಶ್ನೆ ಈಗ ಹರಿಹರ ನಗರದ ಪ್ರತಿಯೊಂದು ಚಹಾ ಅಂಗಡಿಯಲ್ಲೂ ಚರ್ಚೆಯಾಗುತ್ತಿದೆ.

ಗೋಳು ಕೇಳುವವರಾರು?

ಶಿವಮೊಗ್ಗ ರಸ್ತೆಯಲ್ಲಿ ಪಾದಚಾರಿ ಮಾರ್ಗ ಗಳು ಸಂಪೂರ್ಣ ಒತ್ತುವರಿಯಾಗಿವೆ. ರಸ್ತೆಯ ವರೆಗೂ ಅಂಗಡಿಗಳ ಬೋರ್ಡ್‌ಗಳು, ಮೆಟ್ಟಿಲು ಗಳು ಹಾಗೂ ವಾಹನಗಳ ಪಾರ್ಕಿಂಗ್ ಆಕ್ರಮಿಸಿ ಕೊಂಡಿರುವುದರಿಂದ ಶಾಲಾ ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದು ರಸ್ತೆಯ ಮಧ್ಯದಲ್ಲೇ ನಡೆಯಬೇಕಾದ ಅನಿವಾರ್ಯತೆ ಇದೆ. ಸಂಚಾರ ದಟ್ಟಣೆ ಇಲ್ಲಿ ನಿತ್ಯದ ನರಕ ಸೃಷ್ಟಿಸುತ್ತಿದ್ದರೂ ನಗರಸಭೆ ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶವನ್ನು ಇಮ್ಮಡಿಗೊಳಿಸಿದೆ.

ಸಾರ್ವಜನಿಕರ ಪ್ರಶ್ನೆಗಳು?
  1. ಹಬ್ಬದ ನೆಪದಲ್ಲಿ ಕಾರ್ಯಾಚರಣೆ ನಿಲ್ಲಿಸಿದ್ದು ಒತ್ತುವರಿದಾರರಿಗೆ ಕಾಲಾವಕಾಶ ನೀಡಲೆಂದೇ? ಅಥವಾ ಒತ್ತಡಕ್ಕೆ ಮಣಿದು ಕಡತ ಮುಚ್ಚಿ ಹಾಕಲೆಂದೇ?

  2. ಹಳೇ ಪಿಬಿ ರಸ್ತೆಯಲ್ಲಿ ತೆರವುಗೊಳಿಸಲು ಇದ್ದ ಕಾನೂನು ಮತ್ತು ನಿಯಮಗಳು ಶಿವಮೊಗ್ಗ ರಸ್ತೆಯ ಒತ್ತುವರಿದಾರರಿಗೆ ಅನ್ವಯಿಸುವುದಿಲ್ಲವೇ?

  3. ನಗರದ ಪ್ರಮುಖ ರಸ್ತೆಯ ಈ ದುಸ್ಥಿತಿಯ ಬಗ್ಗೆ ಮತ್ತು ಅರ್ಧಕ್ಕೆ ನಿಂತ ಕಾರ್ಯಾಚರಣೆಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಮೌನ ವಹಿಸಿರುವುದರ ಹಿಂದಿನ ರಹಸ್ಯವೇನು?

ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಮನವಿ ಮೇರೆಗೆ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಶೀಘ್ರದಲ್ಲಿಯೇ ಮತ್ತೆ ತೆರವು ಕಾರ್ಯಾಚರಣೆ ಆರಂಭವಾಗಲಿದೆ. ಅನುಮಾನ ಬೇಡ.
ಬಿ.ಪಿ. ಹರೀಶ್ ಶಾಸಕ

ಬೀದಿ ಬದಿ ವ್ಯಾಪಾರಸ್ಥರ ಸಂರಕ್ಷಣೆ ಹಾಗೂ ಜೀವನೋಪಾಯ ಕಾಯ್ದೆ 2014ನೇ ಅನ್ವಯ ಪರ್ಯಾಯ ವ್ಯವಸ್ಥೆ ಮಾಡಿದ ನಂತರ ತೆರವು ಕಾರ್ಯಾಚರಣೆ ಮಾಡಬೇಕು ಎನ್ನುವುದು ಕಾನೂನು. ಅಧಿಕಾರಿಗಳು ಇದನ್ನು ಪಾಲನೆ ಮಾಡಬೇಕು.

ಮಂಜಮ್ಮ ತಾಲೂಕು ಕಾರ್ಯದರ್ಶಿ, ಬೀದಿ ಬದಿ ವ್ಯಾಪಾರಸ್ಥರ ಒಕ್ಕೂಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net