ದಾವಣಗೆರೆ ಕೆರೆಗಳಿಗೆ ನೀರು, ಹಣ ಹೊಂದಿಸಲು ಸಿದ್ಧ

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
Inauguration
ಬೆನಕನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಕಟ್ಟಡ ಹಾಗೂ ಸಾಸ್ವೆಹಳ್ಳಿಯಲ್ಲಿ ಶಿವ ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಇತರರು ಇದ್ದರು.Inauguration
Published on: 

ಹೊನ್ನಾಳಿ: ಜಿಲ್ಲೆಯ ಕೆರೆಗಳಿಗೆ ನೀರು ಹರಿಸುವ ಯೋಜನೆಗಳಿಗೆ ಅನಿವಾರ್ಯವಾದರೆ ಸರ್ಕಾರದ ಅನುದಾನಕ್ಕಾಗಿ ಕಾಯದೆ, ನಾವೇ ಹಣ ಹೊಂದಿಸಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಸ್ವೆಹಳ್ಳಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಟ್ಟಡ ಹಾಗೂ ಬೆನಕನಹಳ್ಳಿಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ತರಳಬಾಳು ಆಂಗ್ಲ ಮಾಧ್ಯಮ ಶಾಲಾ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಶ್ರೀಗಳು ಸಿರಿಗೆರೆಯ ತರಳಬಾಳು ಬೃಹನ್ಮಠ ರೈತರ ಬದುಕು ಹಸನಾಗಿಸಲು ಕೆರೆಗಳಿಗೆ ನೀರು ತುಂಬಿಸುವ ವಿಚಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ ಎಂದು ಹೇಳಿದರು.

ರಾಜನಹಳ್ಳಿಯಲ್ಲಿ ಏತ ನೀರಾವರಿ ಯೋಜನೆ ಮೂಲಕ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಲೋಪಗಳನ್ನು ಸರಿಪಡಿಸುವ ಕುರಿತು ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಯೋಜನೆಯ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗಿದೆ. ತರಳಬಾಳು ಮಠ ರೈತರ ಅಭ್ಯುದಯಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತ ಬಂದಿದೆ ಎಂದರು.

ಸಾಧು ಸದ್ಧರ್ಮ ವೀರಶೈವ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿ ರೈತರು ಏತ ನೀರಾವರಿಯ ಜತೆಗೆ ಪಶ್ಚಿಮಘಟ್ಟಗಳನ್ನು ಉಳಿಸುವತ್ತಲೂ ಗಮನಹರಿಸಬೇಕು ಎಂದರು.

ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಡಾ.ಎಚ್.ವಿ. ವಾಮದೇವಪ್ಪ, ಬ್ಯಾಂಕ್ ಅಧ್ಯಕ್ಷ ಎಚ್.ಜಿ. ರುದ್ರೇಶಪ್ಪ ಮಾತನಾಡಿದರು. ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಎಚ್.ಎ. ಗದ್ದಿಗೇಶ್, ಜಿ. ಶಿವಪ್ಪ, ಮುಖ್ಯಶಿಕ್ಷಕ ಬೆನಕಪ್ಪ, ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ಇತರರಿದ್ದರು.

ಹೆಮ್ಮರವಾಗಿ ಬೆಳೆದ ಬ್ಯಾಂಕ್

ತಾಲೂಕಿನಲ್ಲಿ 5 ಶಾಖೆಗಳು, 3 ಸ್ವಂತ ಕಟ್ಟಡಗಳು ಹಾಗೂ 2 ಕಾಯಂ ನಿವೇಶನಗಳನ್ನು ಹೊಂದುವ ಮೂಲಕ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹೆಮ್ಮರವಾಗಿ ಬೆಳೆದಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು. ಬೆನಕನಹಳ್ಳಿಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸ್ವಾಮೀಜಿಗಳು ಶೇ.75ರಷ್ಟು ಹಾಗೂ ಭಕ್ತರು ಶೇ.25ರಷ್ಟು ಅನುದಾನ ನೀಡಿದ್ದಾರೆ. ಈ ಕಟ್ಟಡಕ್ಕೆ ಬಯಲು ರಂಗಮಂದಿರ ನಿರ್ಮಿಸಲು ಸ್ವಾಮೀಜಿಗಳು ಸಹಕರಿಸಿದರೆ, ಮುಂದಿನ ಕೆಲಸವನ್ನು ಸರ್ಕಾರದ ಹಂತದಲ್ಲಿ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಬ್ರಿಟಿಷರು ನಮ್ಮ ದೇಶ ಬಿಟ್ಟು ಹೋಗಿದ್ದರೂ ಅವರು ಬಿಟ್ಟು ಹೋದ ಭಾಷಾ ವ್ಯಾಮೋಹ ಇನ್ನೂ ಕಡಿಮೆಯಾಗಿಲ್ಲ. ಅದನ್ನು ಓಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ . ಇಂಗ್ಲಿಷನ್ನು ಒಂದು ಭಾಷೆಯನ್ನಾಗಿ ಕಲಿಯಬೇಕೇ ಹೊರತು, ಮಾಧ್ಯಮವನ್ನಾಗಿ ಅಲ್ಲ ಎಂದು ಅಭಿಪ್ರಾಯಪಟ್ಟರು.
ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಬೃಹನ್ಮಠ ಸಿರಿಗೆರೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net