

ಎಂ.ಬಿ. ರಾಜಪ್ಪ, ಬಸವಾಪಟ್ಟಣ
ಮುಂಗಾರು ಮಳೆಯ ಕೊರತೆಯಿಂದ ಭತ್ತದ ಕೃಷಿ ಪ್ರದೇಶ ಅರ್ಧಕ್ಕರ್ಧ ಕುಸಿದಿರುವ ಬೆನ್ನಲ್ಲೇ, ಉತ್ತಮ ಬೆಲೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಮಾರುಕಟ್ಟೆಯ ದರ ಕುಸಿತ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಟಾವು ಆರಂಭವಾಗುತ್ತಿದ್ದಂತೆ ವರ್ತಕರು ಹಾಗೂ ಮಧ್ಯವರ್ತಿಗಳು ಖರೀದಿ ದರವನ್ನು ದಿಢೀರ್ ಇಳಿಸಿದ್ದು, ಪ್ರತಿ ಕ್ವಿಂಟಾಲ್ಗೆ 3,100 ರಿಂದ 3,700 ರೂ. ವರೆಗೆ ಮಾತ್ರ ಖರೀದಿಸುತ್ತಿದ್ದಾರೆ. ಕಟಾವು ಪೂರ್ವದಲ್ಲಿ 4,300 ರಿಂದ 4,600 ರೂ. ಬೆಲೆ ಸಿಗಬಹುದು, ಕಟಾವು ಮುಕ್ತಾಯದ ವೇಳೆಗೆ 5,000 ರಿಂದ 5,200 ರೂ. ತಲುಪಬಹುದು ಎಂದು ನಿರೀಕ್ಷಿಸಿದ್ದ ರೈತರಿಗೆ ತೀವ್ರ ನಿರಾಸೆಯಾಗಿದೆ.
ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ಬೆಳೆ ಸಮೀಕ್ಷೆ ಪ್ರಕಾರ, 2025ರಲ್ಲಿ 2,042 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. ಆದರೆ 2026ರಲ್ಲಿ ಕೇವಲ 991 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಭತ್ತದ ಕೃಷಿ ನಡೆದಿದ್ದು, ಬರೋಬ್ಬರಿ 1,051 ಹೆಕ್ಟೇರ್ (ಶೇ. 51.47) ಪ್ರದೇಶದಲ್ಲಿ ಇಳಿಕೆಯಾಗಿದೆ.
ಮಳೆಯಾಶ್ರಿತ ಬೆದ್ದಲು ಭೂಮಿಗಳಲ್ಲಿ ಮಳೆಯಿಲ್ಲದೆ ಅನೇಕ ರೈತರು ಬಿತ್ತನೆ ಮಾಡದೆ ಜಮೀನುಗಳನ್ನು ಪಾಳು ಬಿಟ್ಟಿದ್ದಾರೆ. ಆರಂಭದ ಅಲ್ಪಮಳೆಯನ್ನು ನಂಬಿ ಬಿತ್ತನೆ ಮಾಡಿದವರು, ಕಾಳು ಕಟ್ಟುವ ಹಂತದಲ್ಲಿ ಮಳೆಯಿಲ್ಲದೆ ಬೆಳೆ ಒಣಗಿ ನಷ್ಟ ಅನುಭವಿಸಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲೂ ನೀರಿನ ಅಭಾವದಿಂದ ಬಹುತೇಕ ಜಮೀನುಗಳಲ್ಲಿ ನಾಟಿ ಸಾಧ್ಯವಾಗಿಲ್ಲ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಕೆಲ ರೈತರು ಪಂಪ್ಸೆಟ್ ಹಾಗೂ ಸೂಳೆಕೆರೆ ಹಳ್ಳದ ನೀರಿನ ಆಶ್ರಯದಲ್ಲಿ ಬೆಳೆ ಉಳಿಸಿಕೊಂಡಿದ್ದಾರೆ. ಬಸವಾಪಟ್ಟಣ ವ್ಯಾಪ್ತಿಯಲ್ಲಿ ಆರ್ಎನ್ಆರ್ ತಳಿಯ ಭತ್ತವನ್ನು ಹೆಚ್ಚಾಗಿ ಬೆಳೆಯಲಾಗಿದೆ.
ಕಟಾವು ಆರಂಭವಾದ ನಂತರ ಮಾರುಕಟ್ಟೆಗೆ ಹೊಸ ಭತ್ತದ ಆವಕ ಹಂತ ಹಂತವಾಗಿ ಹೆಚ್ಚಾಗುವುದು, ಅಕ್ಕಿ ಗಿರಣಿಗಳ ಖರೀದಿ ಬೇಡಿಕೆ, ವರ್ತಕರ ದಾಸ್ತಾನು ಸಾಮರ್ಥ್ಯ ಹಾಗೂ ಬೇಡಿಕೆ-ಪೂರೈಕೆಯ ಲೆಕ್ಕಾಚಾರಗಳು ದರದ ಮೇಲೆ ಪರಿಣಾಮ ಬೀರುತ್ತಿವೆ. ಜತೆಗೆ ಭತ್ತದ ತೇವಾಂಶ, ಗುಣಮಟ್ಟ, ತಳಿ ಹಾಗೂ ಸ್ವಚ್ಛತೆಯ ಆಧಾರದಲ್ಲೂ ದರ ವ್ಯತ್ಯಾಸವಾಗುತ್ತದೆ. ಆದರೂ, ರೈತರು ನಿರೀಕ್ಷಿಸಿದ್ದಕ್ಕಿಂತ ತೀರಾ ಕಡಿಮೆ ಬೆಲೆಗೆ ಖರೀದಿ ನಡೆಯುತ್ತಿ ರುವುದರಿಂದ ಮಧ್ಯವರ್ತಿಗಳ ದರ ನಿಗದಿ ಕುರಿತು ಪ್ರಶ್ನೆಗಳು ಮೂಡಿವೆ.
ಒಂದೆಡೆ ಕೃಷಿ ಪ್ರದೇಶ ಕುಸಿದಿದ್ದರೆ, ಇನ್ನೊಂದೆಡೆ ಬೆಳೆ ಬೆಳೆದ ರೈತರಿಗೆ ಉತ್ಪಾದನಾ ವೆಚ್ಚ, ಕೂಲಿ, ಕಟಾವು ಯಂತ್ರದ ಬಾಡಿಗೆ ಹಾಗೂ ಸಾಗಣೆ ವೆಚ್ಚದ ಹೊರೆ ಹೆಚ್ಚಾಗಿದೆ. ಉತ್ತಮ ಬೆಲೆ ದೊರೆತರೆ ಮಾತ್ರ ನಷ್ಟವನ್ನು ಸ್ವಲ್ಪಮಟ್ಟಿಗೆ ಸರಿದೂಗಿಸಲು ಸಾಧ್ಯ. ಉತ್ಪಾದನಾ ವೆಚ್ಚ ಹೆಚ್ಚಿರುವ ಈ ಸಂಕಷ್ಟದ ಸಮಯದಲ್ಲಿ ಸರ್ಕಾರ ತಕ್ಷಣವೇ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದು ರೈತರ ಕೈಹಿಡಿಯಬೇಕಾಗಿದೆ.
ಕೃಷಿ ಪ್ರದೇಶ ಕಡಿಮೆಯಾಗಿರುವುದರಿಂದ ಪೂರೈಕೆ ಕುಸಿದು ಬೆಲೆ ಏರಿಕೆಯಾಗಬಹುದು ಎಂಬ ನಿರೀಕ್ಷೆ ರೈತರಲ್ಲಿತ್ತು. ಕಳೆದ ವರ್ಷ ಕ್ವಿಂಟಾಲ್ಗೆ 2,300 ರೂ. ನಿಂದ ಆರಂಭವಾದ ಬೆಲೆ ಕಟಾವು ಅಂತ್ಯದ ವೇಳೆಗೆ 3,200 ರೂ. ತಲುಪಿತ್ತು. ಈ ಬಾರಿ ಆರಂಭದಲ್ಲೇ 4,300 ರಿಂದ 4,600 ರೂ. ವರೆಗೆ ದರ ಸಿಗಬಹುದು ಎಂಬ ಆಶಾಭಾವನೆಯಿತ್ತು. ಆದರೆ ಕಟಾವು ಆರಂಭವಾದ ಬೆನ್ನಲ್ಲೇ ಖರೀದಿ ದರ ಇಳಿದಿದ್ದು, ನಿರೀಕ್ಷಿತ ದರಕ್ಕಿಂತ 700 ರಿಂದ 800 ರೂ. ವರೆಗೆ ವ್ಯತ್ಯಾಸ ಕಂಡುಬಂದಿದೆ.
2025ರ ಬೆಳೆ ವಿಸ್ತೀರ್ಣ-2,042 ಹೆಕ್ಟೇರ್
2026ರ ಬೆಳೆ ವಿಸ್ತೀರ್ಣ- 991 ಹೆಕ್ಟೇರ್
ಕೃಷಿ ಪ್ರದೇಶ ಕುಸಿತ - 1,051 ಹೆಕ್ಟೇರ್ (ಶೇ. 51.47)
ರೈತರ ನಿರೀಕ್ಷೆಯ ದರ- 4,300-4,600 ರೂ.
ಪ್ರಸ್ತುತ ಮಾರುಕಟ್ಟೆ ದರ - 3,100- 3,700 ರೂ.