ಪ್ರೇಮ ಪ್ರಕರಣದಲ್ಲಿ ತಂದೆ ಬಲಿ ಪ್ರಕರಣ: ಯುವಕ ಸೇರಿ ಮೂವರ ಬಂಧನ

ಒಟ್ಟು ಏಳು ಜನರ ವಿರುದ್ಧ ಪ್ರಕರಣ
protest
ಅಂತ್ಯಕ್ರಿಯೆಯನ್ನು ಪ್ರೀತಿಸಿದ್ದ ಯುವಕನ ಮನೆಯಲ್ಲೇ ಮಾಡಲು ಯುವತಿಯ ಕಡೆಯವರು ಪ್ರಯತ್ನಿಸಿದಾಗ ವಾಗ್ವಾದ ನಡೆದ ದೃಶ್ಯ.protest
Published on: 

ಚನ್ನಗಿರಿ: ತಾಲೂಕಿನ ಸಾರಥಿ ಹೊಸೂರು ಗ್ರಾಮದ ಪ್ರೇಮಿಗಳ ಮದುವೆ ವಿಚಾರದಲ್ಲಿ ಹುಡುಗನ ಕಡೆಯವರ ಬೆದರಿಕೆಗೆ ಮನನೊಂದು ಹುಡುಗಿ ತಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಪ್ರೀತಿಸಿ ಕೈಕೊಟ್ಟ ಆರೋಪಕ್ಕೆ ಗುರಿಯಾಗಿರುವ ಹುಡುಗ ಮತ್ತು ಆತನ ತಂದೆ- ತಾಯಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಹೊಸೂರು ಸಾರಥಿ ಗ್ರಾಮದ ಮೃತ ಹನುಮಂತಪ್ಪ ಅವರ ಕುಟುಂಬದವರು ನೀಡಿದ ದೂರಿನ ಮೇರೆಗೆ ಒಟ್ಟು ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನವೀನ್, ಆತನ ತಂದೆ ರವಿನಾಯ್ಕ ಹಾಗೂ ತಾಯಿ ಬೇಬಿಬಾಯಿ ಅವರನ್ನು ಬಂಧಿಸಲಾಗಿದೆ. ನಾಪತ್ತೆಯಾಗಿರುವ ಇತರ ನಾಲ್ವರು ಆರೋಪಿಗಳ ಶೋಧ ಕಾರ್ಯ ನಡೆದಿದೆ. ಹುಡುಗಿಯ ತಂದೆ ಹನುಮಂತಪ್ಪ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮದಲ್ಲಿ ಹನುಮಂತಪ್ಪ ಅವರ ಸಂಬಂಧಿಕರು ಆರೋಪಿಗಳ ಬಂಧನಕ್ಕೆ ಆಗ್ರಹಪಡಿಸಿ ಸಾರಥಿ ಗಾಣದಕಟ್ಟೆ ಗ್ರಾಮದಲ್ಲಿ ಪ್ರತಿಭಟನೆ ಮಾಡಿದ್ದರು.

ಈ ಸಂದರ್ಭದಲ್ಲಿ ಮೃತನ ಕುಟುಂಬದವರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ಡಿಎಸ್ಪಿ ರುದ್ರೇಶ್ ಅವರು ಮೃತನ ಸಂಬಂಧಿಕರನ್ನು ಸಮಾಧಾನಪಡಿಸಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟಿದ್ದರು.

ಹುಡುಗನ ಮನೆಯಲ್ಲಿ ಅಂತ್ಯಕ್ರಿಯೆಗೆ ಯತ್ನ

ಮಗಳನ್ನು ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಹನುಮಂತಪ್ಪ ಅವರ ಶವ ಸಂಸ್ಕಾರವನ್ನು ಪ್ರೀತಿಸಿ ಕೈಕೊಟ್ಟ ಹುಡುಗನ ಮನೆಯಲ್ಲೇ ಮಾಡಲು ಯತ್ನಿಸಿದ್ದು, ಪೊಲೀಸರ ಮಧ್ಯ ಪ್ರವೇಶದಿಂದ ಬಿಕ್ಕಟ್ಟು ನಿವಾರಣೆಯಾಯಿತು. ಚನ್ನಗಿರಿ ಪೊಲೀಸ್ ಠಾಣೆ ಬಳಿ ಶವ ಇಟ್ಟು ಪ್ರತಿಭಟನೆ ಮಾಡುತ್ತಿದ್ದವರ ಮನವೊಲಿಸಿ ಆಂಬುಲೆನ್ಸ್‌ನಲ್ಲಿ ಶವವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದ ನಂತರ ಪೊಲೀಸರೂ ಶವದೊಂದಿಗೆ ಗ್ರಾಮಕ್ಕೆ ತೆರಳಿದ್ದರು. ಗ್ರಾಮಕ್ಕೆ ಶವ ತಲುಪುತ್ತಿದ್ದಂತೆ ಹುಡುಗಿಯ ಕುಟುಂಬದವರು ಹಾಗೂ ಸಂಬಂಧಿಕರು ಆರೋಪಿಯ ತಂದೆ ರವಿನಾಯ್ಕ ಅವರ ಮನೆಯಲ್ಲೇ ಶವಸಂಸ್ಕಾರ ಮಾಡಲು ಯತ್ನಿಸಿದರು. ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿ ಮನವೊಲಿಸಿ ಗ್ರಾಮದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವಂತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net