ಆಸ್ಪತ್ರೆಗೆ ಆಯೋಗದ ಅಧ್ಯಕ್ಷೆ ಭೇಟಿ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಮಗುವೊಂದನ್ನು ಎತ್ತಿಕೊಂಡು, ಮಗುವಿನ ತಾಯಿಯೊಂದಿಗೆ ಮಾತನಾಡಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಮಗುವೊಂದನ್ನು ಎತ್ತಿಕೊಂಡು, ಮಗುವಿನ ತಾಯಿಯೊಂದಿಗೆ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಅಹವಾಲು ಆಲಿಸಿದ ಡಾ. ನಾಗಲಕ್ಷ್ಮಿ ಚೌಧರಿ
  • ವಾರ್ಡ್, ದಾಖಲೆಗಳ ಪರಿಶೀಲನೆ

ದಾವಣಗೆರೆ : ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ನಗರದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಅಲ್ಲಿನ ರೋಗಿಗಳು ಮತ್ತು ಸಿಬ್ಬಂದಿಯ ಅಹವಾಲುಗಳಿಗೆ ಕಿವಿಯಾದರು.

ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ಕೆಲವು ಮಹಿಳೆಯರು ಬಂದು, ನಮ್ಮನ್ನು ಕೆಲಸದಿಂದ ತೆಗೆದಿದ್ದಾರೆ, ಜೀವನ ನಡೆಸುವುದು ಕಷ್ಟವಾಗಿದೆ, ಮತ್ತೆ ನಮಗೆ ಉದ್ಯೋಗ ಕೊಡಿಸಿ ಎಂದು ಮನವಿ ಮಾಡಿದರು.
ಈ ವೇಳೆ ಡಾ. ನಾಗಲಕ್ಷ್ಮಿ ಚೌಧರಿ ಮಾತನಾಡಿ, ಕಳೆದ ಬಾರಿ ನಾನು ಆಸ್ಪತ್ರೆಗೆ ಭೇಟಿ ನೀಡಿದ್ದಾಗ ರೋಗಿಗಳಿಗೆ ಔಷಧ, ರಕ್ತ ಪರೀಕ್ಷೆಗಾಗಿ ಹೊರಗೆ ಕಳಿಸುತ್ತಿದ್ದರು. ಇಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೆ. ಅದರಂತೆ ಕೆಲವು ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಆದರೆ ಔಷಧ ಹೊರಗೆ ತರುವಂತೆ ಚೀಟಿ ಬರೆದುಕೊಟ್ಟ ವೈದ್ಯರದು ತಪ್ಪಿಲ್ಲವೆ? ಅವರ ವಿರುದ್ಧ ಏಕೆ ಕ್ರಮ ಆಗಿಲ್ಲ ಎಂದು ಪ್ರಶ್ನಿಸಿದರು.
ನೀವು ಕಳೆದ ಬಾರಿ ಬಂದು ಹೋದ ನಂತರ ಆಸ್ಪತ್ರೆಯಲ್ಲಿ ಪರಿಸ್ಥಿತಿ ಸುಧಾರಿಸಿದೆ ಎಂದು ಕೆಲವು ಮಹಿಳೆಯರು ತಿಳಿಸಿದರು.
ಅಂಗವಿಕಲ ಮಹಿಳೆಯೊಬ್ಬರು ತನಗೆ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದರು. ನೀವು ಸ್ವಯಂ ಉದ್ಯೋಗ ಮಾಡಲು ಅವಕಾಶಗಳಿವೆ, ಅವುಗಳನ್ನು ಬಳಸಿಕೊಳ್ಳಿ ಎಂದು ಆಯೋಗದ ಅಧ್ಯಕ್ಷೆ ಹೇಳಿದರು.
ಜಗಳೂರಿಗೆ ಇನ್ನೊಂದು ಆಂಬುಲೆನ್ಸ್‌ನ ಅಗತ್ಯವಿದೆ. ರೋಗಿಗಳು ದಾವಣಗೆರೆಗೆ ಬರಲು ತೊಂದರೆಯಾಗಿದೆ ಎಂದು ಆ ತಾಲೂಕಿನ ಆಶಾ ಕಾರ್ಯಕರ್ತೆಯೊಬ್ಬರು ಗಮನ ಸೆಳೆದರು. ಇನ್ನೊಂದು ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಡಿಎಚ್‌ಒಗೆ ಡಾ. ನಾಗಲಕ್ಷ್ಮಿ ಸೂಚನೆ ನೀಡಿದರು.
ಪುರುಷ-ಮಹಿಳೆಯರ ಅನುಪಾತ, ಕುಡಿಯುವ ನೀರಿನ ಗುಣಮಟ್ಟ, ಸೋಂಕು ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಇನ್ನಿತರ ವಿಷಯಗಳ ಬಗ್ಗೆ ಆಸ್ಪತ್ರೆಯ ಅಧಿಕಾರಿಗಳಿಂದ ಮಾಹಿತಿ ಕೇಳಿದರು. ಕೆಲವು ದಾಖಲೆಗಳನ್ನು ಪರಿಶೀಲಿಸಿದರು. ಮಗುವೊಂದನ್ನು ಎತ್ತಿಕೊಂಡು, ಅದರ ತಾಯಿಯ ಜತೆ ಮಾತನಾಡಿದರು. ಕೆಲವು ವಾರ್ಡ್‌ಗಳಿಗೆ ಭೇಟಿ ನೀಡಿ ಒಳ ರೋಗಿಗಳ ಮಾಹಿತಿ ಪಡೆದರು.
ಇದೇ ವೇಳೆ ಎನ್‌ಎಚ್‌ಎಂ ಸಿಬ್ಬಂದಿ ನಮಗೆ 2-3 ತಿಂಗಳಿಗೊಮ್ಮೆ ವೇತನ ದೊರೆಯುತ್ತಿದೆ, ಜೀವನ ನಡೆಸುವುದು ಕಷ್ಟವಾಗುತ್ತಿದೆ ಎಂದು ಅಳಲು ತೋಡಿಕೊಂಡರು. ಇದಕ್ಕೆ ಉತ್ತರಿಸಿದ ಡಿಎಚ್‌ಒ, ಪ್ರತಿ ತಿಂಗಳು ಮೊದಲ ವಾರದಲ್ಲೇ ವೇತನ ದೊರೆಯುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಆಸ್ಪತ್ರೆಗೆ ಬಂದಿದ್ದ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಅವರಿಗೆ ಕೆಲವು ಮಹಿಳೆಯರು ಸೀರೆ, ಹೂವು, ಅರಿಷಿಣ-ಕುಂಕುಮ ನೀಡಿ ಗೌರವಿಸಿದರು. ಕೆಲವರು ಸೆಲ್ಫಿ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net