

ಎನ್.ಡಿ. ಶಾಂತಕುಮಾರ ದಾವಣಗೆರೆ
ಬೆಳಗಾವಿ ಅಧಿವೇಶನದ ವೇಳೆಯಲ್ಲೇ ಡಿ. 4ರಂದು ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿದ್ದು, ಸಭೆಯ ನಿರ್ಧಾರದ ಬಗ್ಗೆ ಜಿಲ್ಲೆಯ ಅಚ್ಚುಕಟ್ಟು ರೈತರಲ್ಲಿ ಆತಂಕ ಮತ್ತು ಕುತೂಹಲ ಮನೆ ಮಾಡಿದೆ. ಜಲಾಶಯದಲ್ಲಿ ಇರುವ ನೀರು ಬೇಸಿಗೆ ಬೆಳೆಗೆ ಸಾಕಾಗಬಹುದೇ? ಮುಂಗಾರು ಬೆಳೆ ತ್ಯಾಗ ಮಾಡಿದ್ದಾಗಿದೆ. ಬೇಸಿಗೆ ಬೆಳೆಗೂ ಅದೇ ಸ್ಥಿತಿ ನಿರ್ಮಾಣವಾದರೆ ಹೇಗೆ ? ಎಂಬುದೇ ಅವರ ಆತಂಕಕ್ಕೆ ಕಾರಣ.
ಈ ವರ್ಷ ಭದ್ರಾ ಅಚ್ಚುಕಟ್ಟು ರೈತರು ಎದುರಿಸಿದ ಸಮಸ್ಯೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇನ್ನು ಪ್ರತಿ ವರ್ಷ ನೀರಿಗಾಗಿ ಸಂಘರ್ಷ ಅನಿವಾರ್ಯವೇ? ಭವಿಷ್ಯದ ದಿನಗಳಲ್ಲಿ ನಮ್ಮ ಹಕ್ಕಿನ ನೀರಿನಲ್ಲಿ ಇನ್ನೂ ಎಷ್ಟು ಪಾಲು ಹಂಚಿಕೆಯಾಗುವ ಪರಿಸ್ಥಿತಿ ಬರಬಹುದು? ಭವಿಷ್ಯದ ದಿನಗಳಲ್ಲಿ ಸಮೃದ್ಧ ಮಳೆಯಾಗದಿದ್ದರೆ ಒಂದು ಬೆಳೆ ತ್ಯಾಗ ಮಾಡುವುದು ಅನಿವಾರ್ಯವೇ? ಭದ್ರಾ ಮೇಲ್ದಂಡೆ ಯೋಜನೆಗೆ ಪ್ರಾಯೋಗಿಕವಾಗಿ ನೀರು ಹರಿಸಿರುವುದರಿಂದ ಇನ್ನು ಮುಂದೆ ನೀರು ಹರಿಸಲೇಬೇಕು. ಆದರೆ ತುಂಗಾ ಜಲಾಶಯದಿಂದ 7 ಟಿಎಂಸಿ ನೀರನ್ನು ಭದ್ರಾ ಜಲಾಶಯಕ್ಕೆ ಲಿಫ್ಟ್ ಮಾಡುವ ಯೋಜನೆ ವಿಳಂಬವಾಗಿ ಭದ್ರಾ ಜಲಾಶಯದಿಂದ ಮೇಲ್ದಂಡೆ ಯೋಜನೆಗೆ ನೀರು ಕೊಡುವ ಅನಿವಾರ್ಯತೆ ಬಂದಾಗ ಅಚ್ಚುಕಟ್ಟು ರೈತರ ಪ್ರಶ್ನೆ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾದರೆ ಸಮಸ್ಯೆಯ ಮೂಲಕ್ಕೆ ಹೋಗಬೇಕು. ಆದರೆ ಸಮಸ್ಯೆಯ ಮೂಲಕ್ಕೆ ಹೋಗಿ ಶಾಶ್ವತ ಪರಿಹಾರ ಕಂಡುಕೊಳ್ಳುವ ದೂರಾಲೋಚನೆಯನ್ನು ಯಾರೂ ಮಾಡುತ್ತಿಲ್ಲ. ಸದ್ಯದ ಸಮಸ್ಯೆ ಪರಿಹಾರವಾದರೆ ಸಾಕು ಎನ್ನುವ ಭಾವನೆಯೇ ಹೆಚ್ಚಾಗಿದೆ. ವೋಟ್ ಬ್ಯಾಂಕ್ ರಾಜಕಾರಣವೂ ಇದಕ್ಕೆ ಕಾರಣ ಇರಬಹುದು. ಇದರ ಪರಿಣಾಮ ಅಚ್ಚುಕಟ್ಟು ರೈತರು ಎದುರಿಸಬೇಕಾಗಿದೆ.
ಮುಂಗಾರು ವೈಫಲ್ಯದಿಂದ ಭದ್ರಾ ಜಲಾಶಯ ಭರ್ತಿಯಾಗದಿರುವುದು ಭದ್ರಾ ಅಚ್ಚುಕಟ್ಟು ರೈತರಲ್ಲಿ ಸಂರ್ಷಕ್ಕೆ ಕಾರಣವಾಗಿದೆ. ಮುಂಗಾರು ಭತ್ತದ ಬೆಳೆಗೆ ನಾಲೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಆರಂಭವಾದ ಸಂರ್ಷ ಇನ್ನೂ ಕೊನೆಯಾಗುತ್ತಿಲ್ಲ. ಆರಂಭದಲ್ಲಿ ದಾವಣಗೆರೆ ಜಿಲ್ಲೆಯ ರೈತರಲ್ಲೇ ಸಂರ್ಷ ನಡೆಯಿತು. ನಾಲೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಸೃಷ್ಟಿಯಾದ ಭಿನ್ನ ಅಭಿಪ್ರಾಯಗಳು ಅಡಕೆ ಬೆಳೆಗಾರರು ಮತ್ತು ಭತ್ತದ ಬೆಳೆಗಾರರ ನಡುವಿನ ಸಂರ್ಷದ ಸ್ವರೂಪ ಪಡೆದುಕೊಂಡಿತ್ತು. ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರು, ಮುಂಗಾರು ಬೆಳೆಯ ಸಮಸ್ಯೆ ಮುಗಿಯಿತು, ಬೇಸಿಗೆ ಭತ್ತದ ಬೆಳೆ ಕಡೆ ಗಮನ ಕೊಡೋಣ ಎಂದು ಆಲೋಚನೆ ಮಾಡುವ ಹೊತ್ತಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನೀರಿಗಾಗಿ ರೈತರ ಹೋರಾಟ ಶುರುವಾಗಿದೆ. ಈಗ ಶಿವಮೊಗ್ಗ ಜಿಲ್ಲೆಯ ರೈತರು ತಕ್ಷಣ ತೋಟದ ಬೆಳೆಗೆ ನೀರು ಹರಿಸಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಈಗ ತೋಟದ ಬೆಳೆಗೆ ನೀರು ಕೊಟ್ಟರೆ ಬೇಸಿಗೆ ಭತ್ತದ ಬೆಳೆಗೆ ನೀರು ಸಾಕಾಗುವುದಿಲ್ಲ ಎಂಬ ವಾದ ದಾವಣಗೆರೆ ಜಿಲ್ಲೆಯ ರೈತರದ್ದು.
ಭದ್ರಾ ಎಡದಂಡೆ ನಾಲೆಮೇಲೆ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳು ಅವಲಂಬನೆಯಾಗಿವೆ ಬಲದಂಡೆ ನಾಲೆ ಮೇಲೆ ಶಿವಮೊಗ್ಗ ತಾಲೂಕು, ದಾವಣಗೆರೆ ಜಿಲ್ಲೆ (ಜಗಳೂರು ತಾಲೂಕು ಹೊರತುಪಡಿಸಿ) ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕು ಅವಲಂಬನೆಯಾಗಿವೆ. ಯಾವ ನಾಲೆಗೆ ಎಷ್ಟು ಪ್ರಮಾಣದಲ್ಲಿ ನೀರು ಹರಿಸುವ ತೀರ್ಮಾನ ಮಾಡಲಾಗುತ್ತದೆ ಎಂಬುದು ಜಿಲ್ಲೆಯ ಅಚ್ಚುಕಟ್ಟು ರೈತರ ಬೇಸಿಗೆ ಬೆಳೆಯನ್ನು ನಿರ್ಧರಿಸಲಿದೆ.
ಭದ್ರಾ ಜಲಾಶಯದಲ್ಲಿ ಈಗ 54 ಟಿಎಂಸಿ ನೀರು ಸಂಗ್ರಹ ಇದೆ. ಅದರಲ್ಲಿ 14 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದ್ದು, ಈ ನೀರು ಬಳಕೆಗೆ ಸಾಧ್ಯವಿಲ್ಲ. ಆಗ ಕೇವಲ 40 ಟಿಎಂಸಿ ಮಾತ್ರ ಬಳಕೆಗೆ ಸಾಧ್ಯವಿದೆ. 8.5 ಟಿಎಂಸಿ ನೀರು ಕುಡಿಯುವ ಉದ್ದೇಶಕ್ಕೆ ಮೀಸಲು ಇಡಲೇಬೇಕು. ಎಲ್ಲ ಅಂಶಗಳನ್ನು ಲೆಕ್ಕಾಚಾರ ಮಾಡಿದರೆ ಕೃಷಿಗೆ ಲಭ್ಯವಾಗುವುದು 31.5 ಟಿಎಂಸಿ ಮಾತ್ರ. ರೈತ ಮುಖಂಡರ ಪ್ರಕಾರ ಬೇಸಿಗೆ ಭತ್ತದ ಬೆಳೆಗೆ 32ರಿಂದ 35 ಟಿಎಂಸಿ ನೀರು ಬೇಕು. ಆದರೆ ಬಳಕೆಗೆ ಇರುವ ನೀರಿನ ಪ್ರಮಾಣ 31.5 ಟಿಎಂಸಿ ಮಾತ್ರ. ಬೇಸಿಗೆ ದಿನಗಳಲ್ಲಿ ಕುಡಿಯುವ ನೀರಿನ ಉದ್ದೇಶಕ್ಕೆ ಹೆಚ್ಚಿನ ಬೇಡಿಕೆ ಬರಲಾರದು ಎಂದು ಹೇಳಲಾಗದು. ಬೇಸಿಗೆ ಬೆಳೆಗೆ ನೀರಿನ ಲಭ್ಯತೆ ಪ್ರಮಾಣ ಕಡಿಮೆ ಇರುವಾಗ ಆಫ್ ಆ್ಯಂಡ್ ಆನ್ ಸಿಸ್ಟಂನಲ್ಲಿ ನೀರು ಕೊಡುವ ಪ್ರಸ್ತಾಪ ಬಂದರೂ ಬರಬಹುದು. ಆದರೆ ಆಫ್ ಆ್ಯಂಡ್ ಆನ್ ಸಿಸ್ಟಂ ಪಾಲನೆ ಮಾಡಿದರೆ ಅಚ್ಚುಕಟ್ಟು ಕೊನೆಯ ಭಾಗಕ್ಕೆ ನೀರು ತಲುಪುವುದಿಲ್ಲ ಎಂಬ ಆರೋಪವನ್ನು ತಳ್ಳಿ ಹಾಕಲು ಬರುವುದಿಲ್ಲ.
ಈ ವರ್ಷ ಉದ್ಭವಿಸಿರುವ ಸಮಸ್ಯೆಗಳೊಂದಿಗೆ ಇನ್ನೂ ಹಲವು ಸಮಸ್ಯೆಗಳಿಗೆ ಪರಿಹಾರ ಬೇಕಿದೆ. ಭದ್ರಾ ಯೋಜನೆಯಲ್ಲಿ ಅಗತ್ಯ ಪ್ರಮಾಣದ ಅಧಿಕಾರಿಗಳು ಮತ್ತು ಸಿಬ್ಬಂದಿ ಇಲ್ಲ. ಇದೂ ಕೂಡ ಯೋಜನೆ ನಿರ್ವಹಣೆ ಮೇಲೆ ದುಷ್ಪರಿಣಾಮ ಬೀರಿದೆ. ನಾಲೆಗಳ ನಿರ್ವಹಣೆಗೆ ಪ್ರತಿವರ್ಷ ಅನುದಾನ ಲಭ್ಯವಾಗುತ್ತಿಲ್ಲ. ಹೀಗಾಗಿ ವರ್ಷದಿಂದ ವರ್ಷಕ್ಕೆ ನೀರು ಸೋರಿಕೆ ಪ್ರಮಾಣ ಹೆಚ್ಚುತ್ತಿದೆ. ನೀರುಗಂಟಿಗಳಿಗೆ ಸಮರ್ಪಕವಾಗಿ ವೇತನ ನೀಡುತ್ತಿಲ್ಲ. ಹೀಗಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರನ್ನು ದೂರುವುದು ತಪ್ಪಾಗುತ್ತದೆ. ನೀರುಗಂಟಿಗಳು ಸರಿಯಾಗಿ ಕೆಲಸ ಮಾಡಿದರೆ ದೂರುಗಳ ಸಂಖ್ಯೆ ಕಡಿಮೆಯಾಗಲಿದೆ.
ಸಂಗ್ರಹ ಇರುವ ನೀರು - 54 ಟಿಎಂಸಿ
ಡೆಡ್ ಸ್ಟೋರೇಜ್ - 14 ಟಿಎಂಸಿ
ಕುಡಿಯುವ ನೀರಿಗೆ - 8.5 ಟಿಎಂಸಿ
ಬೇಸಿಗೆ ಬೆಳೆಗೆ ಲಭ್ಯ ನೀರು - 31.5 ಟಿಎಂಸಿ