

ದಾವಣಗೆರೆ: ಬಾಕಿ ಶಿಷ್ಯವೇತನ ಬಿಡುಗಡೆಗೆ ಆಗ್ರಹಿಸಿ ಜೆಜೆಎಂ ಕಾಲೇಜಿನ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನವಾದ ಮಂಗಳವಾರವೂ ಮುಂದುವರಿಯಿತು.
‘ಕರೊನಾ ಸೇನಾನಿಗಳಿಗೆ ಬರೀ ಚಪ್ಪಾಳೆ ಹೊಡಿತಾರೆ, ಶಿಷ್ಯವೇತನ ಮಾತ್ರ ಇಲ್ಲ. ಬೇಕೇ ಬೇಕು ಶಿಷ್ಯವೇತನ ಎಂದು ಘೋಷಣೆ ಕೂಗಿದರು. ಪ್ರತಿಭಟನಾ ನಿರತ ವಿದ್ಯಾರ್ಥಿನಿಯೊಬ್ಬರು ಬಿಸಿಲಿಗೆ ಅಸ್ವಸ್ಥ ರಾದರು.
ಸ್ಥಳಕ್ಕಾಗಮಿಸಿದ ಡಿಸಿ - ಎಸ್ಪಿ ಎದುರು ಅಳಲು ಹೇಳಿಕೊಂಡ ವಿದ್ಯಾರ್ಥಿಗಳು ಮೇ ತಿಂಗಳಲ್ಲಿ ಸಚಿವ ಸುಧಾಕರ್ ಅವರು ಸಭೆ ನಡೆಸಿ ನೀಡಿದ್ದ ಭರವಸೆ ಈಡೇರಿಲ್ಲ ನಾವು ಎಲ್ಲಿಯವರೆಗೆ ಸಹನೆಯಿಂದ ಕಾಯಬೇಕು ಎಂದು ಪ್ರಶ್ನಿಸಿದರು.
ಸರ್ಕಾರವೇ ಶಿಷ್ಯವೇತನ ನೀಡಬೇಕು. ಮಧ್ಯಮ ವರ್ಗದ ವಿದ್ಯಾರ್ಥಿಗಳು ಶುಲ್ಕ ಪಾವತಿಸಲಾಗದ ಸ್ಥಿತಿ ಇದೆ ಎಂದು ಗಮನಸೆಳೆದರು.
ಕೋವಿಡ್ ನಿರ್ವಹಣೆಯ ವೈದ್ಯರಿಗೆ ವೇತನ ನೀಡಲು ಸುಪ್ರೀಂಕೋರ್ಟ್ ಆದೇಶಿಸಿದ್ದರೂ ನಮ್ಮನ್ನು ನಿರ್ಲಕ್ಷಿಸಲಾಗಿದೆ. ವಾರದೊಳಗೆ ಸಮಸ್ಯೆ ಬಗೆಹರಿಸುವ ಲಿಖಿತ ಭರವಸೆ ನೀಡಿದರೆ ಪ್ರತಿಭಟನೆ ಹಿಂಪಡೆಯುವುದಾಗಿ ವಿದ್ಯಾರ್ಥಿಗಳು ಹೇಳಿದರು.
ಡಿಸಿ ಮಹಾಂತೇಶ ಬೀಳಗಿ ಮಾತನಾಡಿ, ಕೋವಿಡ್ ಯುದ್ಧದಲ್ಲಿ ಅಡಚಣೆಯಾಗದಂತೆ ಕಾರ್ಯ ನಿರ್ವಹಿಸಿದ್ದಕ್ಕೆ ಧನ್ಯವಾದಗಳು. ಜಿಲ್ಲಾಡಳಿತ ನಿಮ್ಮ ಜತೆಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಕೂಡ ಮಾತನಾಡುತ್ತಿದ್ದಾರೆ, ಸಂಸದರು, ಶಾಸಕರು, ಮಾತನಾಡಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಪ್ರತಿಭಟನೆ ಮುಂದುವರಿದ್ರೆ ಕಾನೂನು ಕ್ರಮ: ಕೋವಿಡ್ ಸಂದರ್ಭದಲ್ಲಿ ಪ್ರತಿಭಟಿಸುವುದು ಸರ್ಕಾರ, ಜಿಲ್ಲಾಡಳಿತಕ್ಕೆ ಮುಜುಗರ ತರಿಸಲಿದೆ. ಬೇಡಿಕೆಗಳ ಕುರಿತು ನಾವೂ ಮಾತನಾಡುತ್ತಿದ್ದೇವೆ. ಪ್ರತಿಭಟನೆ ಮುಂದುವರಿಸಿದರೆ ಕಾನೂನು ಕ್ರಮ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
ಎಸ್ಪಿ ಹನುಮಂತರಾಯ ಮಾತನಾಡಿ, ತಡವಾದರೂ ನಿಮ್ಮ ಹಣ ಬರಲಿದೆ. ನಾವು ಬಾಯಿ ಮಾತಲ್ಲಿ ಹೇಳುವುದಿಲ್ಲ. ಕಾನೂನು ಜಾರಿ ಮಾಡುತ್ತೇವೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ಹೊರಟರು.