

ಬೆಳಗಾವಿ: ನಗರದಲ್ಲಿ ಸೈಬರ್, ಡಿಜಿಟಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್ ಠಾಣೆ ಪೊಲೀಸರು ಇಬ್ಬರು ಗುಜರಾತಿ ಆರೋಪಿಗಳನ್ನು ಬಂಧಿಸಿ, ತನಿಖೆ ತೀವ್ರಗೊಳಿಸಿದ್ದಾರೆ ಎಂದು ನಗರದ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಡಿಜಿಟಲ್ ವಂಚನೆಗೊಳಗಾಗಿದ್ದ ಸರ್ಕಾರಿ ನಿವೃತ್ತಿ ಅಧಿಕಾರಿಯೊಬ್ಬರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆಗೆ ವಿಶೇಷ ಎರಡು ತಂಡ ರಚನೆ ಮಾಡಲಾಗಿತ್ತು. ಅದರಲ್ಲಿ ಒಂದು ತಂಡ ಗುಜರಾತಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಇಬ್ಬರನ್ನು ಬಂಧಿಸಿ ಕರೆ ತಂದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.
ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್ ಮತ್ತು ಡಿಜಿಟಲ್ ವಂಚನೆ ಪ್ರಕರಣಗಳಲ್ಲಿ ಬಂಧಿತರು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಮಗ್ರ ಮಾಹಿತಿ ಕಲೆ ಹಾಕಲಾಗುತ್ತಿದೆ. ವಂಚನೆ ಮಾಡಿದ ಆರೋಪಿಗಳಿಂದ ಹಣ ವಾಪಾಸ್ ಮಾಡಿಕೊಡಲಾಗಿದೆ. ಅಲ್ಲದೇ, ಸಿಬಿಐ ಅಧಿಕಾರಿ ಎಂದು ದೂರವಾಣಿ ಕರೆ ಮಾಡಿ ನಿಮ್ಮ ಮೇಲೆ ವಂಚನೆ ಕೇಸ್ ಇದೆ. ನೀವು ಇಂತಿಷ್ಟು ಹಣ ಕೊಡಬೇಕೆಂದು ಬೆದರಿಕೆ ಹಾಕಿ ವಂಚನೆ ಮಾಡಿದವರನ್ನು ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವಾಗ ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರಬೇಕು. ಧರ್ಮ, ವ್ಯಕ್ತಿಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಪೋಸ್ಟ್ ಹಾಕಿದರೆ ತಕ್ಷಣವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕನ್ನಡಿಗರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದ ಶುಭಂ ಶೆಳಕೆಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಹೇಳಿದರು.