ಸೈನೈಡ್ ಮೋಹನ್‌ಗೆ ಜೀವಾವಧಿ ಸಜೆ

CyanideMohan
Published on

ಮಂಗಳೂರು: ಯುವತಿಯರ ಸರಣಿ ಹಂತಕ ಸೈನೈಡ್ ಮೋಹನ್‌ನಿಗೆ 20ನೇ ಹಾಗೂ ಕೊನೆಯ ಪ್ರಕರಣದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 55 ಸಾವಿರ ರೂ. ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ.

ಕೇರಳದ ಕಾಸರಗೋಡಿನ ಕುಂಟಾರು ಗ್ರಾಮದ 25 ವರ್ಷದ ಯುವತಿಯನ್ನು ಮದುವೆ ಆಗುವುದಾಗಿ ನಂಬಿಸಿ ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಸೈನೈಡ್ ಮಾತ್ರೆ ನೀಡಿ ಕೊಲೆ ಮಾಡಿದ ಪ್ರಕರಣ ನ್ಯಾಯಾಲಯದಲ್ಲಿ ಜೂ.20 ರಂದು ಸಾಬೀತಾಗಿತ್ತು. ಶಿಕ್ಷೆ ಪ್ರಮಾಣವನ್ನು ಬುಧವಾರ ನ್ಯಾಯಾಧೀಶರಾದ ಸಯೀದುನ್ನಿಸಾ ಅವರು ಘೋಷಿಸಿದರು.

ಶಿಕ್ಷೆ ವಿವರ: ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 25,000 ರೂ.ದಂಡ, ಅಪಹರಣ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು 5000 ರೂ.ದಂಡ, ಅತ್ಯಾಚಾರ ಅಪರಾಧಕ್ಕೆ 7 ವರ್ಷ ಸಜೆ ಮತ್ತು 5000 ರೂ. ದಂಡ, ವಿಷ ಪದಾರ್ಥ ಉಣಿಸಿದ ಅಪರಾಧಕ್ಕೆ 10 ವರ್ಷ ಶಿಕ್ಷೆ ಮತ್ತು 5000 ರೂ. ದಂಡ, ಚಿನ್ನಾಭರಣ ಸುಲಿಗೆ ಅಪರಾಧಕ್ಕೆ 5 ವರ್ಷ ಕಠಿನ ಸಜೆ ಮತ್ತು 5000 ರೂ. ದಂಡ, ವಿಷ ಉಣಿಸಿ ಸುಲಿಗೆ ಮಾಡಿದ ಅಪರಾಧಕ್ಕೆ 10 ವರ್ಷ ಕಠಿನ ಸಜೆ ಮತ್ತು 5,000 ರೂ. ದಂಡ, ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ ಅಪರಾಧಕ್ಕೆ 1 ವರ್ಷ ಶಿಕ್ಷೆ, ಸಾಕ್ಷ್ಯ ನಾಶ ಅಪರಾಧಕ್ಕೆ 7 ವರ್ಷ ಸಜೆ ಮತ್ತು 5,000 ರೂ. ದಂಡ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ: ಕಾಸರಗೋಡಿನ ಕುಂಟಾರಿನ 25 ವರ್ಷ ಪ್ರಾಯದ ಯುವತಿ ಲೇಡಿಸ್ ಹಾಸ್ಟೆಲ್ ಒಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, 2009ರಲ್ಲಿ ಆಕೆಗೆ ಮೋಹನನ ಪರಿಚಯ ಆಗಿತ್ತು. ತನ್ನನ್ನು ಶಿಕ್ಷಕ ಎಂದು ಪರಿಚಯಿಸಿ ಮದುವೆ ಆಗುವುದಾಗಿ ಭರವಸೆ ನೀಡಿ 3 ಬಾರಿ ಆಕೆಯ ಮನೆಗೆ ಹೋಗಿ ನಂಬಿಸಿದ್ದನು. 2009 ಜುಲೈ 8ರಂದು ಯುವತಿ ಸುಳ್ಯದ ದೇವಸ್ಥಾನಕ್ಕೆಂದು ಮನೆಯಿಂದ ಹೊರಟು ಹೋಗಿದ್ದು, ಸುಳ್ಯದಿಂದ ಮೋಹನ್ ಬೆಂಗಳೂರಿಗೆ ಕರೆದೊಯ್ದಿದ್ದನು. ಅಲ್ಲಿ ಲಾಡ್ಜ್‌ನಲ್ಲಿ ರೂಂ ಮಾಡಿದ್ದ ಆತ ಜು.15ರಂದು ಬೆಳಗ್ಗೆ ಯುವತಿಯನ್ನು ಸಮೀಪದ ಬಸ್ ನಿಲ್ದಾಣಕ್ಕೆ ಕರೆದೊಯ್ದು ಗರ್ಭ ನಿರೋಧಕ ಮಾತ್ರೆ ಎಂದು ಹೇಳಿ ಸೈನೈಡ್ ನೀಡಿ ಕೊಲೆ ಮಾಡಿದ್ದ.

2009 ಅಕ್ಟೋಬರ್‌ನಲ್ಲಿ ಮೋಹನ್ ಬಂಧಿತನಾದ ಸಂದರ್ಭ ಯುವತಿಯ ತಂಗಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಳು. ಪ್ರಕರಣದಲ್ಲಿ ಮೃತ ಯುವತಿಯ ವಿಸ್ರಾ ಪರೀಕ್ಷೆಯಲ್ಲಿ ಸೈನೈಡ್ ಅಂಶ ಇರುವುದು ದೃಡಪಟ್ಟಿತ್ತು. 46 ಸಾಕ್ಷಿಗಳ ವಿಚಾರಣೆ, 89 ದಾಖಲಾತಿಗಳನ್ನು ಹಾಗೂ 31 ಸೊತ್ತುಗಳನ್ನು ಹಾಜರು ಪಡಿಸಲಾಗಿತ್ತು.

ಯುವತಿಯಿಂದ ಸುಲಿಗೆ ಮಾಡಿದ್ದ ಚಿನ್ನಾಭರಣಗಳ ಪೈಕಿ ಒಂದು ಪೆಂಡೆಂಟ್ ಮೋಹನನ 2ನೇ ಪತ್ನಿಯ ಮನೆಯಿಂದ ವಶ ಪಡಿಸಿದ್ದು, ಅದನ್ನು ಕುಂಟಾರಿನ ಯುವತಿಯ ತಾಯಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಒ.ಎಂ. ಕ್ರಾಸ್ತಾ ಅವರು ಈ ಮೊದಲು ಹಾಗೂ ಪ್ರಸ್ತುತ ಜಯರಾಮ ಶೆಟ್ಟಿ ವಾದಿಸಿದ್ದರು. ಮೋಹನ್ ಕುಮಾರ್ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ವಿಚಾರಣೆ ನಡೆಸಿತ್ತು.

5ರಲ್ಲಿ ಮರಣ ದಂಡನೆ

ಸೈನೈಡ್ ಮೋಹನನ ವಿರುದ್ಧ ದಾಖಲಾದ ಒಟ್ಟು 20 ಯುವತಿಯರ ಕೊಲೆ ಪ್ರಕರಣಗಳ ಪೈಕಿ 5ರಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ 1ರಲ್ಲಿ ಹೈಕೋರ್ಟ್ ಮರಣದಂಡನೆ ತೀರ್ಪನ್ನು ಎತ್ತಿ ಹಿಡಿದಿದೆ. 1 ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ. ಇನ್ನೊಂದು ಪ್ರಕರಣವನ್ನು ರದ್ದು ಪಡಿಸಿದೆ. ಇನ್ನೆರಡು ಪ್ರಕರಣಗಳು ಹೈಕೋರ್ಟ್‌ನ ತೀರ್ಮಾನಕ್ಕೆ ಬಾಕಿ ಇವೆ. 10 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಯಾಗಿದೆ. 5 ಪ್ರಕರಣಗಳು ಖುಲಾಸೆಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net