ಕರೊನಾ ತಡೆಗೆ ಸಮನ್ವಯತೆ ಅಗತ್ಯ

0101
Published on

ಗೋಕಾಕ: ಗೋಕಾಕ ಹಾಗೂ ಮೂಡಲಗಿ ತಾಲೂಕುಗಳಲ್ಲಿ ಕರೊನಾ ಸೋಂಕು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮ ಹಾಗೂ ರೋಗಿಗಳ ಆರೈಕೆ ಕುರಿತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿರ್ದೇಶನದ ಮೇರೆಗೆ ಇಲ್ಲಿನ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ತಾಲೂಕುಮಟ್ಟದ ಅಧಿಕಾರಿಗಳಿಂದ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

ಗೋಕಾಕ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಆರೋಗ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪಿಎಚ್‌ಸಿಗಳ ವೈದ್ಯಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಭಾಗವಹಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ಕರೊನಾ ಸೋಂಕಿನ ವಿರುದ್ಧ ಹೋರಾಡಲು ಗೋಕಾಕ-ಮೂಡಲಗಿ ತಾಲೂಕುಗಳ ಅಧಿಕಾರಿಗಳು ಜಂಟಿಯಾಗಿ ಕೆಲಸ ನಿರ್ವಹಿಸಬೇಕು. ಅಧಿಕಾರಿಗಳು ಇತರ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರ, ಮಲ್ಲಾಪುರ ಪಿಜಿ ಮತ್ತು ನಾಗನೂರ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಆರೈಕೆ ಕೇಂದ್ರಗಳಿಗೆ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೆಗೆದುಕೊಂಡಿದ್ದು, ಮೂರ‌್ನಾಲ್ಕು ದಿನಗಳಲ್ಲಿ ಸೋಂಕಿತರ ಸಾವಿನ ಪ್ರಮಾಣ ಇಳಿಕೆ ಮಾಡಲು ರೋಗಿಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡುತ್ತಿರುವ ಶಾಸಕರ ಕಾರ್ಯಕ್ಕೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಗೋಕಾಕ ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಆಂಬುಲೆನ್ಸ್ ಹಾಗೂ 108 ವಾಹನಗಳ ಕೊರತೆ ವೇಳೆ ರೋಗಿಗಳ ಸಂಖ್ಯೆಯು ಹೆಚ್ಚಾದರೆ ಅವುಗಳನ್ನು ಬಾಡಿಗೆ ರೂಪದಲ್ಲಿ ಪಡೆಯಬೇಕು. ಸೋಂಕಿತರು ಮೃತಪಟ್ಟರೆ ಅಂತ್ಯಕ್ರಿಯೆಯಲ್ಲಿ ಶಿಷ್ಟಾಚಾರ ಪಾಲಿಸಬೇಕು. ಸ್ಥಳೀಯ ವೈದ್ಯಾಧಿಕಾರಿ, ಪಿಡಿಒ, ಮುಖ್ಯಾಧಿಕಾರಿ, ಗ್ರಾಮ ಲೆಕ್ಕಿಗ, ಪೊಲೀಸರು ಈ ಜವಾಬ್ದಾರಿಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಒಂದು ವೇಳೆ ಸೋಂಕಿತರ ಶವ ಸಂಸ್ಕಾರಕ್ಕೆ ಕುಟುಂಬಸ್ಥರು ಮುಂದೆ ಬಂದರೆ ಅಂತ್ಯಕ್ರಿಯೆಗೆ ತಗುಲುವ ವೆಚ್ಚವನ್ನು ಭರಿಸಬೇಕು. ಸರ್ಕಾರಿ ನಿಯಮಾವಳಿ ಪ್ರಕಾರವೇ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ಅಂತ್ಯ ಸಂಸ್ಕಾರದ ವೇಳೆ ಕೆಲ ಅಧಿಕಾರಿಗಳು ಕುಂಟು ನೆಪ ಹೇಳಿ ಕರ್ತವ್ಯದಿಂದ ಪಾರಾಗಲು ಯತ್ನಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಮೂಡಲಗಿ ತಹಸೀಲ್ದಾರ್ ದಿಲ್‌ಶಾದ್ ಮಹಾತ್, ಹಿರಿಯ ತಜ್ಞ ವೈದ್ಯ ಡಾ. ಆರ್.ಎಸ್. ಬೆಣಚಿನಮರಡಿ, ಮೂಡಲಗಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಬಿ. ಕೋಣಿ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ. ಬಳಗಾರ, ಮೂಡಲಗಿ ಸಿಡಿಪಿಒ ವೈ.ಎಂ. ಗುಜನಟ್ಟಿ, ಸಬ್‌ಇನ್‌ಸ್ಪೆಕ್ಟರ್‌ಗಳಾದ ಮಲ್ಲಿಕಾರ್ಜುನ ಸಿಂಧೂರ, ಎಚ್.ವೈ. ಬಾಲದಂಡಿ, ಎಚ್.ಕೆ. ನರಳೆ, ಅನಿಲ ಅಮ್ಮಿನಬಾವಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ರೋಗಿಗಳಿಗೆ ಗುಣಮಟ್ಟದ ಆಹಾರ ವಿತರಣೆ: ತಾಲೂಕು ಆರೋಗ್ಯಾಧಿಕಾರಿ ಡಾ. ಜಗದೀಶ ಜಿಂಗಿ ಮಾತನಾಡಿ, ಈಗಾಗಲೇ ಅರಬಾವಿ ಕ್ಷೇತ್ರದ ಜನತೆಗೆ ಶಾಸಕರು 2.50 ಲಕ್ಷ ಮಾಸ್ಕ್‌ಗಳನ್ನು ವಿತರಿಸಿದ್ದಾರೆ. ಕ್ಷೇತ್ರದ ನಾಗರಿಕರ ಸುರಕ್ಷತೆಗಾಗಿ ಎರಡನೇ ಬಾರಿಗೆ 2 ಲಕ್ಷ ಮಾಸ್ಕ್ ವಿತರಿಸಲಿದ್ದಾರೆ. ಕೋವಿಡ್‌ಕೇರ್ ಸೆಂಟರ್‌ಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಗುಣಮಟ್ಟದ ಆಹಾರ ವಿತರಿಸಲಾಗುತ್ತಿದೆ. ಜತೆಗೆ ಶಾಸಕ ಬಾಲಚಂದ್ರ ಅವರು ರೋಗಿಗಳಿಗೆ ಕಿಟ್‌ಗಳನ್ನು ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಸೋಂಕಿತರ ಆರೋಗ್ಯ ಕಾಳಜಿ ವಹಿಸಲು ಸೂಚನೆ: ಮೂಡಲಗಿ ಮತ್ತು ಗೋಕಾಕ ತಾಲೂಕುಗಳಲ್ಲಿ ಕರೊನಾ ಸೋಂಕಿತರ ಆರೈಕೆಗಾಗಿ ಕಾಳಜಿ ಪೂರ್ವಕವಾಗಿ ಕೆಲಸ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೋಗಿಗಳಿಗೆ ಗುಣಮಟ್ಟದ ಆಹಾರ ಹಾಗೂ ಅಗತ್ಯ ವೈದ್ಯಕೀಯ ಸೇವೆ ಒದಗಿಸಲು ಸೂಚಿಸಲಾಗಿದೆ. ಕೋವಿಡ್ ಕೇರ್‌ಸೆಂಟರ್‌ಗಳು ರೋಗಿಗಳಿಗೆ ಉತ್ತಮ ವಾತಾವರಣ ಒದಗಿಸಿಕೊಡಬೇಕು. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡರೆ ಸಮಾಜವು ಅವರನ್ನು ಗೌರವದಿಂದ ಕಾಣಬೇಕು. ಈಗಾಗಲೇ ಕರೊನಾ ಸೋಂಕಿತರಿಗೆ ನೀಡುತ್ತಿರುವ ಕಿಟ್‌ಗಳಂತೆಯೇ ಇನ್ನು ಮುಂದೆ ಸೋಂಕಿತರ ಆರೈಕೆ ಮಾಡುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಗೂ ಕಿಟ್‌ಗಳನ್ನು ನೀಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net