

ಲಿಂಗಸುಗೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ವಿಕಲಚೇತನರ ಟಾಸ್ಕ್‌ಫೋರ್ಸ್ ಹಾಗೂ ವಿಕಲಚೇತನರ ಸಂಘ ಸಂಸ್ಥೆಗಳ ಒಕ್ಕೂಟದಿಂದ ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಗ್ರಾಮೀಣ ಅಂಗವಿಕಲರ ಪುನರ್ವಸತಿ ಯೋಜನೆಯಡಿ ಎಲ್ಲ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಿಗೆ ಕಚೇರಿಯಲ್ಲಿ ಶೇ.5ರ ಅನುದಾನದಡಿ ಟೇಬಲ್, ಕುರ್ಚಿ, ಕಂಪ್ಯೂಟರ್ ಒದಗಿಸಬೇಕು. ವಾರ್ಷಿಕ 12 ಸಾವಿರ ರೂ. ಪ್ರಯಾಣ ಭತ್ಯೆ ನೀಡಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರ ಆದೇಶದಂತೆ ಅಂಗವಿಕಲ ಕುಟುಂಬಗಳ ಸಮೀಕ್ಷೆ ನಡೆಸಬೇಕು. ಪ್ರತಿ ವರ್ಷ ಡಿಸೆಂಬರ್‌ನಲ್ಲಿ ಕಡ್ಡಾಯವಾಗಿ ಗ್ರಾಮಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಅಂಗವಿಕಲರ ಮಕ್ಕಳು ಶಾಲೆಗಳಿಗೆ ಹೋಗಿ ಬರಲು ಗ್ರಾಪಂಗಳಿಂದ ಮೂರು ಅಥವಾ ನಾಲ್ಕು ಚಕ್ರಗಳ ಲಘು ವಾಹನಗಳ ವ್ಯವಸ್ಥೆ ಮಾಡಬೇಕು. ನಿರುದ್ಯೋಗಿ ಅಂಗವಿಕಲರಿಗೆ ಉದ್ಯೋಗ ನೀಡಿ ಪ್ರಯಾಣ ಭತ್ಯೆ ನೀಡಬೇಕು.
ತಾಪಂ ಆವರಣದಲ್ಲಿ ನಿರ್ಮಿಸಲಾದ ವಿಕಲಚೇತನ ಸ್ನೇಹಿ ಶೌಚಗೃಹ ಕಳಪೆಯಾಗಿದ್ದು, ಪರಿಶೀಲಿಸಿ ಸೂಕ್ತ ವ್ಯವಸ್ಥೆ ಮಾಡಬೇಕು. ಕೆಡಿಪಿ, ಮಾಸಿಕ, ತ್ರೈಮಾಸಿಕ ಪರಿಶೀಲನಾ ಸಭೆಗಳಲ್ಲಿ ಶೇ. 5ರ ಅನುದಾನದ ಬಳಕೆ ಮತ್ತು ಲಭ್ಯತೆಯ ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಶರಣಪ್ಪ ಟಿ., ಸಂಗಮೇಶ, ವಿಜಯಲಕ್ಷ್ಮೀ ಹಿರೇಮಠ, ಬಸಮ್ಮ, ಶರಣಪ್ಪ ಬಡಿಗೇರ ಇತರರಿದ್ದರು.