ಮೈಸೂರಿನಲ್ಲಿ ಕರಾವಳಿಯ ಕಂಬಳ


ಮೈಸೂರಿನಲ್ಲಿ ಗುರುವಾರ ಆಯೋಜಿಸಿದ್ದ ದಸರಾ ಕಂಬಳ ಪ್ರಾಯೋಗಿಕ ಓಟದ ರೋಚಕ ಕ್ಷಣ
ಮೈಸೂರಿನಲ್ಲಿ ಗುರುವಾರ ಆಯೋಜಿಸಿದ್ದ ದಸರಾ ಕಂಬಳ ಪ್ರಾಯೋಗಿಕ ಓಟದ ರೋಚಕ ಕ್ಷಣ
Published on: 

ಸದೇಶ್ ಕಾರ್ಮಾಡ್ ಮೈಸೂರು

ಕರಾವಳಿ ಭಾಗದ ಸಾಂಪ್ರದಾಯಿಕ ಜಾನಪದ ಕ್ರೀಡೆ ಕಂಬಳದ ರೋಮಾಂಚನಕಾರಿ ಲೋಕವನ್ನು ಕಣ್ತುಂಬಿಕೊಳ್ಳಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ನಾಡಹಬ್ಬ ಮೈಸೂರು ದಸರಾ ಉತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ಕಂಬಳ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಅ.18 ಮತ್ತು 19ರಂದು ನಗರದ ಸಾತಗಳ್ಳಿಯ ವಿಟಿಯು ಕಾಲೇಜು ಬಳಿಯ ಕಂಬಳದ ಕಣದಲ್ಲಿ ಕೋಣಗಳ ಓಟದ ಅಬ್ಬರ ಅನುರಣಿಸಲಿದೆ.

ಕರಾವಳಿಯ ಮಣ್ಣಿನಲ್ಲಿ ತಲೆಮಾರುಗಳಿಂದ ಬೆಳೆದು ಬಂದಿರುವ ಕಂಬಳದ ಸಂಭ್ರಮ ಇದೇ ಮೊದಲ ಬಾರಿಗೆ ದಸರೆಯ ಸಾಂಸ್ಕೃತಿಕ ವೈಭವದೊಂದಿಗೆ ಬೆರೆತುಕೊಳ್ಳಲಿದೆ. ಕರಾವಳಿಯ ರೈತಾಪಿ ಜನರ ಬದುಕು, ಜಾನುವಾರುಗಳ ಮೇಲಿನ ಪ್ರೀತಿ, ಶ್ರಮ ಮತ್ತು ಸಂಪ್ರದಾಯದ ಪ್ರತೀಕವಾಗಿರುವ ಈ ಕ್ರೀಡೆಯನ್ನು ಮೈಸೂರಿನ ಜನರು ಕಣ್ತುಂಬಿಕೊಳ್ಳುವ ಅವಕಾಶ ಒದಗಿಬಂದಿದೆ.

ದಸರೆಯ ವೈವಿಧ್ಯಮಯ ಕಾರ್ಯಕ್ರಮಗಳ ಸಾಲಿಗೆ ಸೇರ್ಪಡೆಯಾಗಿರುವ ಕಂಬಳ, ಕರಾವಳಿಯ ಸಂಸ್ಕೃತಿಯ ಸೊಗಡನ್ನು ಮೈಸೂರಿನ ನೆಲದಲ್ಲಿ ಅನಾವರಣಗೊಳಿಸಲಿದೆ. ಕೋಣಗಳ ಓಟದ ವೇಗ, ಸ್ಪರ್ಧಿಗಳ ಉತ್ಸಾಹ ಮತ್ತು ಪ್ರೇಕ್ಷಕರ ಸಂಭ್ರಮದೊಂದಿಗೆ ಸಾತಗಳ್ಳಿಯ ಕಂಬಳದ ಕಣ ಎರಡು ದಿನಗಳ ಕಾಲ ಕ್ರೀಡಾ ಸಡಗರಕ್ಕೆ ಸಾಕ್ಷಿಯಾಗಲಿದೆ.

150 ಜೋಡಿ ಕೋಣಗಳ ಭರ್ಜರಿ ಪೈಪೋಟಿ:

ನಗರದಲ್ಲಿ ನಡೆಯಲಿರುವ ಕಂಬಳ ಸ್ಪರ್ಧೆಯಲ್ಲಿ ಕರಾವಳಿ ಭಾಗದ ಒಟ್ಟು 150 ಜೋಡಿ ಕೋಣಗಳು ಭಾಗವಹಿಸಲಿವೆ. ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಒಟ್ಟು 172 ಅರ್ಜಿಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ಬಳಿಕ ಅಂತಿಮವಾಗಿ 150 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಾಗವಹಿಸಲಿರುವ ಎಲ್ಲ ಕೋಣಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದ ಎದುರಿನಿಂದ ಬೆಳಗ್ಗೆ ಹೊರಟು ಸಂಜೆ ಮೈಸೂರು ತಲುಪಿವೆ.

ಆರು ವಿಭಾಗಗಳಲ್ಲಿ ಓಟದ ರೋಚಕತೆ

ಕಂಬಳ ಎಂದರೆ ಕೇವಲ ಕೋಣಗಳ ಓಟವಲ್ಲ. ಓಟದ ವಿಧಾನ, ಕೋಣಗಳ ವಯಸ್ಸು, ಸಾಮರ್ಥ್ಯ ಹಾಗೂ ಸ್ಪರ್ಧೆಯ ನಿಯಮಗಳ ಆಧಾರ ದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. ಮೈಸೂರಿನ ಕಂಬಳದಲ್ಲಿ ಆರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಹಗ್ಗ ಹಿರಿಯ ವಿಭಾಗದಲ್ಲಿ 15 ಜೋಡಿ, ಹಗ್ಗ ಕಿರಿಯ ವಿಭಾಗದಲ್ಲಿ 20 ಜೋಡಿ, ನೇಗಿಲು ಹಿರಿಯ ವಿಭಾಗದಲ್ಲಿ 36 ಜೋಡಿ, ನೇಗಿಲು ಕಿರಿಯ ವಿಭಾಗದಲ್ಲಿ 55 ಜೋಡಿ, ಅಡ್ಡ ಹಲಗೆ ಹಿರಿಯ ವಿಭಾಗದಲ್ಲಿ 13 ಜೋಡಿ ಹಾಗೂ ಕನೆ ಹಲಗೆ ಹಿರಿಯ ವಿಭಾಗದಲ್ಲಿ 11 ಜೋಡಿ ಕೋಣಗಳು ಭಾಗವಹಿಸಲಿವೆ.

ಕಂಬಳದಲ್ಲಿ ಕೋಣಗಳ ವಯಸ್ಸು ಮತ್ತು ಹಲ್ಲುಗಳ ಆಧಾರದಲ್ಲಿಯೂ ವಿಭಾಗಗಳನ್ನು ಗುರುತಿಸಲಾಗುತ್ತದೆ. ಸಾಮಾನ್ಯವಾಗಿ ಓಟದ ಗ್ರೂಪ್‌ಗೆ ಸೇರಲು ಕೋಣಗಳಿಗೆ ಐದು ವರ್ಷ ತುಂಬಿರಬೇಕು. ಎಂಟು ಹಲ್ಲುಗಳು ಬಂದ ಬಳಿಕ ಅವುಗಳನ್ನು ಹಿರಿಯ ವಿಭಾಗಕ್ಕೆ ಸೇರಿಸಲಾಗುತ್ತದೆ. ಈ ನಿಯಮಗಳು ಸ್ಪರ್ಧೆಯಲ್ಲಿ ಕೋಣಗಳ ವಯಸ್ಸು ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವಿಭಾಗಗಳನ್ನು ರೂಪಿಸಲು ನೆರವಾಗುತ್ತವೆ.

ಪ್ರಾಯೋಗಿಕ ಓಟ ಯಶಸ್ವಿ

ಕಂಬಳದ ಸ್ಪರ್ಧೆಗೆ ಸಾತಗಳ್ಳಿಯಲ್ಲಿ ನಿರ್ಮಿಸಿರುವ ಟ್ರಾೃಕ್‌ನಲ್ಲಿ ಗುರುವಾರ ಪ್ರಾಯೋಗಿಕ ಓಟ ಯಶಸ್ವಿಯಾಗಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮುಚ್ಚೂರು ಕಲ್ಕುಡೆಯ ಕುಶಾಲ್ ಲೋಕೇಶ್ ಶೆಟ್ಟಿ ಅವರಿಗೆ ಸೇರಿದ ಎರಡು ಜೋಡಿ ಕೋಣಗಳು ಪ್ರಾಯೋಗಿಕ ಓಟದಲ್ಲಿ ಪಾಲ್ಗೊಂಡವು. ಕಂಬಳಕ್ಕಾಗಿ ಎರಡು ಪ್ರತ್ಯೇಕ ಟ್ರಾೃಕ್‌ಗಳನ್ನು ನಿರ್ಮಿಸಲಾಗಿದ್ದು, ಅವುಗಳಿಗೆ ‘ವಿಜಯ’ ಮತ್ತು ‘ದಶಮಿ’ ಎಂದು ಹೆಸರಿಡಲಾಗಿದೆ. ದಸರೆಯ ಸಂಭ್ರಮದ ನಡುವೆ ಈ ಟ್ರಾೃಕ್‌ನಲ್ಲಿ ಕೋಣಗಳ ಓಟ ನಡೆಯಲಿದ್ದು, ಪ್ರೇಕ್ಷಕರಿಗೆ ಕರಾವಳಿಯ ಕ್ರೀಡೆಯ ನೈಜ ಅನುಭವ ನೀಡಲಿದೆ.

ವಿಜೇತರಿಗೆ ಚಿನ್ನದ ಬಹುಮಾನ

ದಸರಾ ಕಂಬಳದಲ್ಲಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಸ್ಥಾನ ಪಡೆಯುವವರಿಗೆ 16 ಗ್ರಾಂ ಚಿನ್ನ ಹಾಗೂ ದ್ವಿತೀಯ ಸ್ಥಾನ ಪಡೆಯುವವರಿಗೆ 8 ಗ್ರಾಂ ಚಿನ್ನದ ಜತೆಗೆ ಪ್ರಮಾಣಪತ್ರ ನೀಡಲಾಗುತ್ತದೆ. ಇದರೊಂದಿಗೆ ಹಿರಿಯ ವಿಭಾಗದ ಪ್ರತಿ ತಂಡಕ್ಕೆ 65 ಸಾವಿರ ರೂ. ಹಾಗೂ ಕಿರಿಯ ವಿಭಾಗದ ಪ್ರತಿ ತಂಡಕ್ಕೆ 50 ಸಾವಿರ ರೂ. ಗೌರವಧನ ನೀಡಲಾಗುತ್ತದೆ.

ಪರ-ವಿರೋಧದ ಚರ್ಚೆಯ ನಡುವೆಯೇ ಕಂಬಳ

ಮೈಸೂರಿನಲ್ಲಿ ಕಂಬಳ ಆಯೋಜಿಸುವ ಸರ್ಕಾರದ ನಿರ್ಧಾರ ಪ್ರಕಟವಾದಾಗಿನಿಂದಲೇ ಪರ-ವಿರೋಧದ ಚರ್ಚೆಗಳು ಪ್ರಾರಂಭಗೊಂಡಿತು. ಬರಗಾಲದ ಸಂದರ್ಭದಲ್ಲಿ ಕಂಬಳ ಆಯೋಜನೆ ಬೇಡ ಎಂಬ ನಿಲುವು ವ್ಯಕ್ತಪಡಿಸಿದ್ದ ಪರಿಸರವಾದಿಗಳು ಹಾಗೂ ರೈತ ಸಂಘಟನೆಗಳ ಸದಸ್ಯರು, ಕಂಬಳ ನಡೆಯಲಿರುವ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಮೈಸೂರು ರಕ್ಷಣಾ ವೇದಿಕೆ ಹಾಗೂ ವಿವಿಧ ಸಂಘಟನೆಗಳು ಕಂಬಳದ ಪರವಾಗಿ ಧ್ವನಿ ಎತ್ತಿ, ಸ್ಪರ್ಧೆ ನಡೆಸಬೇಕು ಎಂದು ಒತ್ತಾಯಿಸಿದ್ದವು. ಹೀಗಾಗಿ ಈ ಬಾರಿಯ ದಸರೆಯಲ್ಲಿ ಕಂಬಳ ಆಯೋಜನೆ ಕ್ರೀಡಾಕೂಟದ ವಿಚಾರವಷ್ಟೇ ಆಗಿರದೆ, ಸಾರ್ವಜನಿಕ ಚರ್ಚೆಗೂ ಕಾರಣವಾಗಿತ್ತು. ಈ ಎಲ್ಲ ಚರ್ಚೆಗಳ ನಡುವೆಯೇ ಅ.18 ಮತ್ತು 19ರಂದು ಕಂಬಳ ನಡೆಯಲು ಸಿದ್ಧತೆ ಪೂರ್ಣಗೊಂಡಿದ್ದು, ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯನ್ನು ಮೈಸೂರಿನ ಜನತೆಗೆ ಪರಿಚಯಿಸುವ ಈ ಪ್ರಯತ್ನ ಹೇಗೆ ಮೂಡಿಬರಲಿದೆ ಎಂಬ ಕುತೂಹಲವಷ್ಟೇ ಈಗ ಬಾಕಿ ಉಳಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net