ಪ್ರತಿ ಶನಿವಾರ, ಭಾನುವಾರ ವಿದ್ಯುತ್ ದೀಪಗಳಿಂದ ಕಂಗೊಳಿಸಲಿವೆ ಮೈಸೂರಿನ ವೃತ್ತಗಳು

dasara lightings
Published on

ಮೈಸೂರು: ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಜಂಬೂಸವಾರಿ ಮೆರವಣಿಗೆ ಸಾಗುವ ಸಯ್ಯಜಿರಾವ್ ರಸ್ತೆಯ ಪಾದಚಾರಿ ಮಾರ್ಗದ ಅಭಿವೃದ್ಧಿ ಹಾಗೂ ನಗರದ ಹೃದಯ ಭಾಗದ ವೃತ್ತಗಳಿಗೆ ಶಾಶ್ವತವಾದ ವಿದ್ಯುತ್ ದೀಪಾಲಂಕಾರ ಮಾಡಲು ಮಂಗಳವಾರ ಮೇಯರ್ ಶಿವಕುಮಾರ್, ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್ ಸ್ಥಳ ಪರಿಶೀಲನೆ ನಡೆಸಿದರು.

ನಾಡಹಬ್ಬ ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜ ವೃತ್ತ, ಕೆ.ಆರ್. ವೃತ್ತ, ಜಯಚಾಮರಾಜೇಂದ್ರ ಒಡೆಯರ್ ವೃತ್ತ, ಪುರಭವನ ಆವರಣದ ಅಂಬೇಡ್ಕರ್ ಪ್ರತಿಮೆ ಹಾಗೂ ಗಾಂಧಿ ವೃತ್ತಕ್ಕೆ ಶಾಶ್ವತವಾದ ದೀಪಾಲಂಕಾರ ಮಾಡಿ ರಜಾ ದಿನವಾದ ಶನಿವಾರ ಮತ್ತು ಭಾನುವಾರ ಅರಮನೆಯಲ್ಲಿ ದೀಪಾಲಂಕಾರ ಇರುವ ಮಾದರಿಯಲ್ಲಿ ವೃತ್ತಗಳಲ್ಲೂ ವಿದ್ಯುತ್ ದೀಪ ಬೆಳಗಲಾಗುವುದು ಎಂದು ಮೇಯರ್ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ರಾಜಪಥ ಅಬಿವೃದ್ದಿ

ಅರಮನೆ ಸುತ್ತ ಹಾಗೂ ಸಯ್ಯಜಿರಾವ್ ರಸ್ತೆಯ ರಾಜಪಥದ ಕಲ್ಲುಕಂಬುಗಳು, ಸ್ಲಾೃಬ್ ಹಾಳಾಗಿರುವುದು ಕಂಡುಬಂತು. ಸಯ್ಯಜಿರಾವ್ ರಸ್ತೆಯಲ್ಲಿ ಜಂಬಸೂವಾರಿ ಮೆರವಣಿಗೆ ಸಾಗುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ರಸ್ತೆ ಬದಿಯಲ್ಲಿ ಕುಳಿತು ಮೆರವಣಿಗೆ ವೀಕ್ಷಿಸುತ್ತಾರೆ. ಹಾಗಾಗಿ ಹಾಳಾಗಿರುವ ಕಲ್ಲುಕಂಬಗಳು ಹಾಗೂ ಸ್ಲಾೃಬ್‌ಗಳನ್ನು ಕೂಡಲೇ ಬದಲಾಯಿಸಲು ಕ್ರಮ ವಹಿಸಬೇಕು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ಶುಚಿಗೊಳಿಸಬೇಕು ಎಂದು ಮೇಯರ್ ಶಿವಕುಮಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನಗರದ ಚಾಮರಾಜ ವೃತ್ತ, ಕೆ.ಅರ್. ವೃತ್ತ, ಜಯಚಾಮರಾಜೇಂದ್ರ ವೃತ್ತವನ್ನು ಅಭಿವೃದ್ಧಿ ಪಡಿಸಲು ಸ್ಥಳ ಪರಿಶೀಲನೆ ನಡೆಸಲಾ ಯಿತು. ಈ ವೃತ್ತಗಳಲ್ಲಿ ವಿದ್ಯುತ್ ದೀಪಗಳು ಹಾಳಾಗಿದ್ದು, ಕೂಡಲೇ ಹೊಸ ವಿದ್ಯುತ್ ದೀಪಗಳನ್ನು ಅಳವಡಿಸಲು ಸೂಚನೆ ನೀಡಲಾ ಯಿತು. ವೃತ್ತಗಳ ಸೌಂದರ್ಯ ಹೆಚ್ಚಿಸಲು ಆಕರ್ಷಕ ದೀಪ ಅಳವಡಿಕೆ, ಸುಣ್ಣ ಬಣ್ಣಗಳನ್ನು ಬಳಿಯುವುದು ಹಾಗೂ ಹೂ ಕುಂಡಗಳನ್ನು ಅಳವಡಿಸಲು ಕ್ರಮ ವಹಿಸುವಂತೆ ಸೂಚಿಸಲಾಯಿತು.

ಪಾರ್ಕಿಂಗ್ ಸಮಸ್ಯೆಗೆ ಮುಕ್ತಿ

ದಸರಾ ಸಂದರ್ಭ ನಗರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸಿಗರು ಹಾಗೂ ಸ್ಥಳೀಯರ ವಾಹನ ನಿಲುಗಡಗೆ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಲು ಪುರಭವನ ಆವರಣದ ಬಹುಮಹಡಿ ಪಾರ್ಕಿಂಗ್ ಕಟ್ಟಡವನ್ನು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಬೇಕು. ಪಾರ್ಕಿಂಗ್ ಕಟ್ಟಡದ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ನಿಲುಗಡೆಗೆ ಕಟ್ಟಡವನ್ನು ಬಳಸಿಕೊಳ್ಳಬಹುದು ಎಂದು ಮೇಯರ್ ಶಿವಕುಮಾರ್ ಹೇಳಿದರು.

ಬಹುಮಹಡಿ ಪಾರ್ಕಿಂಗ್ ಕಟ್ಟಡದ ಬಳಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಬೇಕಾಗಿದೆ. ಈ ಕಾಮಗಾರಿ ಕೈಗೊಳ್ಳಲು ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕಾಗಿದ್ದು, ವಿದ್ಯುತ್ ಮಾರ್ಗವನ್ನು ಬದಲಾಯಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ (ಸೆಸ್ಕ್) ಈಗಾಗಲೇ ಸೂಚನೆ ನೀಡಲಾಗಿದ್ದು, ವಿದ್ಯುತ್ ಮಾರ್ಗ ಬದಲಾವಣೆ ಮಾಡಿಕೊಟ್ಟ ತಕ್ಷಣ ಚರಂಡಿ ಕಾಮಗಾರಿ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net