ಬಣ್ಣಗಳ ಚಿತ್ತಾರದಲ್ಲಿ ಮನಸೂರೆಗೊಂಡ ಕಲಾಲೋಕ

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ದಸರಾ ಚಿತ್ರಸಂತೆ ಗಮನ ಸೆಳೆಯಿತು.
ಮೈಸೂರಿನ ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ದಸರಾ ಚಿತ್ರಸಂತೆ ಗಮನ ಸೆಳೆಯಿತು.
Published on: 

ಮೈಸೂರು: ಪ್ರಕೃತಿ ಸೌಂದರ್ಯ, ದೈವಿಕ ಭಾವ, ಗ್ರಾಮೀಣ ಬದುಕಿನ ಸೊಗಡು ಹಾಗೂ ಬಾಲ್ಯದ ಮಧುರ ನೆನಪುಗಳಿಗೆ ಬಣ್ಣ ತುಂಬಿದ ದಸರಾ ಚಿತ್ರಸಂತೆ ಕಲಾಪ್ರೇಮಿಗಳ ಮನಸೂರೆಗೊಂಡಿತು. ನಾಡಹಬ್ಬ ದಸರಾ ಪ್ರಯುಕ್ತ ಚಿತ್ರಸಂತೆ ಉಪ ಸಮಿತಿಯು ಶುಕ್ರವಾರ ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ಚಿತ್ರಸಂತೆಯು ಕಲಾವಿದರ ಕಲ್ಪನೆ ಮತ್ತು ಸೃಜನಶೀಲತೆಗೆ ವೇದಿಕೆಯಾಗುವುದರ ಜತೆಗೆ ಕಲಾಕೃತಿಗಳನ್ನು ಆಸಕ್ತಿಯಿಂದ ಆಸ್ವಾದಿಸಿದ ಜನರ ಸಂಭ್ರಮದ ತಾಣವಾಗಿಯೂ ಕಂಗೊಳಿಸಿತು.

ಈ ಕಲಾಮೇಳದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಚಿತ್ರಕಲಾವಿದರು ತಮ್ಮೊಳಗಿನ ಭಾವನೆಗಳಿಗೆ ಬಣ್ಣ ತುಂಬಿ, ಕಲಾಕೃತಿಗಳ ರೂಪದಲ್ಲಿ ಜನರ ಮುಂದಿಟ್ಟರು. ಒಂದೆಡೆ ದೇವರುಗಳು ಮತ್ತು ದೇವಾಲಯಗಳ ದಿವ್ಯ ಸೌಂದರ್ಯ, ಮತ್ತೊಂದೆಡೆ ಪ್ರಕೃತಿಯ ಹಸಿರು ಸೊಬಗು, ಇನ್ನೊಂದೆಡೆ ಗ್ರಾಮೀಣ ಬದುಕಿನ ಆತ್ಮೀಯತೆ, ಮಗದೊಂದೆಡೆ ಬಾಲ್ಯದ ಮುಗ್ಧ ನೆನಪುಗಳು... ಹೀಗೆ ಪ್ರತಿಯೊಂದು ಚಿತ್ರವೂ ತನ್ನದೇ ಆದ ಕತೆಯನ್ನು ಹೇಳುತ್ತಿತ್ತು. ಕೆಲವು ಚಿತ್ರಗಳು ಕಣ್ಮನ ಸೆಳೆದರೆ, ಇನ್ನು ಕೆಲವು ಹೃದಯವನ್ನು ಸ್ಪರ್ಶಿಸಿದವು.

ಚಿತ್ರಸಂತೆಯ ಮಳಿಗೆಗಳಲ್ಲಿ ಹೆಜ್ಜೆ ಹಾಕುತ್ತಿದ್ದ ಕಲಾಪ್ರೇಮಿಗಳಿಗೆ ಬಣ್ಣಗಳ ಜತೆಗೆ ಭಾವನೆಗಳ ಪರಿಚಯವೂ ಆಯಿತು. ಕಲಾವಿದರ ಕಲ್ಪನೆಯಲ್ಲಿ ಮೂಡಿಬಂದ ದೃಶ್ಯಗಳು ಕ್ಯಾನ್ವಾಸ್‌ನಲ್ಲಿ ಜೀವಂತವಾದಂತೆ ಭಾಸವಾಗುತ್ತಿದ್ದವು. ಚಿತ್ರಸಂತೆಯಲ್ಲಿ ಪುಟಾಣಿ ಶಿವ, ಹನುಮಂತ, ಕೃಷ್ಣ ಮೊದಲಾದ ದೇವರುಗಳ ಆಕರ್ಷಕ ಚಿತ್ರಗಳೂ ಗಮನ ಸೆಳೆದವು. ದೇವರ ಬಾಲರೂಪಗಳ ಮುಗ್ಧತೆ ಮತ್ತು ಚೆಲುವನ್ನು ಬಣ್ಣಗಳಲ್ಲಿ ಸೆರೆಹಿಡಿದಿದ್ದ ಚಿತ್ರಗಳು ವಿಶೇಷವಾಗಿ ಆಕರ್ಷಿಸಿದವು.

ಕಂಬಳದ ಕ್ರೀಡೋತ್ಸಾಹ, ವನ್ಯಜೀವಿಗಳ ಸಹಜ ಸೌಂದರ್ಯ, ಪ್ರಕೃತಿಯ ಹಸಿರು ವೈಭವ, ಸಿನಿಮಾ ಕಲಾವಿದರ ಮುಖಭಾವಗಳು ಹಾಗೂ ಕಡಲತೀರದಲ್ಲಿ ಮುಳುಗುವ ಸೂರ್ಯನ ಸಂಜೆಯ ದೃಶ್ಯಗಳು ಕಲಾವಿದರ ಕುಂಚದಲ್ಲಿ ಮನಮೋಹಕವಾಗಿ ಮೂಡಿಬಂದಿ ದ್ದವು. ಒಂದೊಂದು ಚಿತ್ರವೂ ಒಂದೊಂದು ಜಗತ್ತನ್ನು ತೆರೆದಿಟ್ಟಿತ್ತು. ಪ್ರಕೃತಿಯ ಮಡಿಲಿಗೆ ಕರೆದೊಯ್ಯುವ ಚಿತ್ರಗಳಿದ್ದರೆ, ಮತ್ತೊಂದೆಡೆ ಸಂಸ್ಕೃತಿ ಮತ್ತು ಪರಂಪರೆಯ ನೆನಪುಗಳನ್ನು ಮೆಲುಕು ಹಾಕಿಸುವ ಕಲಾಕೃತಿಗಳಿದ್ದವು.

ಬಾಲ್ಯಕ್ಕೆ ಕರೆದೊಯ್ದ ಕಪ್ಪು-ಬಿಳುಪಿನ ಚಿತ್ರಗಳು:

ಚಿತ್ರಸಂತೆಯಲ್ಲಿ ಬಣ್ಣಗಳ ವೈಭವದ ನಡುವೆ ಕಪ್ಪು-ಬಿಳುಪಿನ ಚಿತ್ರಗಳೂ ತಮ್ಮದೇ ಆದ ಭಾವಲೋಕವನ್ನು ತೆರೆದಿಟ್ಟವು. ಗ್ರಾಮೀಣ ಜನಜೀವನ ಹಾಗೂ ಬಾಲ್ಯದ ನೆನಪುಗಳನ್ನು ಚಿತ್ರಗಳ ಮೂಲಕ ಕಟ್ಟಿಕೊಟ್ಟಿದ್ದ ಕಲಾವಿದರೊಬ್ಬರು ನೋಡುಗರ ಗಮನ ಸೆಳೆದರು. ತಂದೆಯ ಕೈಹಿಡಿದು ನಡೆಯುವ ಪುಟ್ಟ ಮಗು, ಕತ್ರಿಕಾಲಿನಲ್ಲಿ ಸೈಕಲ್ ಸವಾರಿ ಮಾಡುವ ಬಾಲಕರು, ತಾಯಿ-ಮಗುವಿನ ನಡುವಿನ ಸಂವಾದ, ಗಿಲ್ಲಿದಾಂಡು ಆಟ, ಬುಗುರಿ ತಿರುಗಿಸುವ ಸಂಭ್ರಮ, ಗಾಳಿಪಟ ಹಾರಿಸುವ ಮಕ್ಕಳ ಉಲ್ಲಾಸ... ಇವೆಲ್ಲವೂ ಒಂದು ಕಾಲಘಟ್ಟದ ಬದುಕನ್ನು ಕಣ್ಣಮುಂದೆ ತಂದು ನಿಲ್ಲಿಸಿದವು. ಈ ಚಿತ್ರಗಳನ್ನು ನೋಡುತ್ತಿದ್ದಂತೆ ಹಲವರ ಮನಸ್ಸು ತಮ್ಮ ಬಾಲ್ಯದತ್ತ ಜಾರಿತು.

ಸ್ಥಳದಲ್ಲೇ ಮೂಡಿದ ಚಿತ್ರಗಳು:

ಚಿತ್ರಸಂತೆಯ ಮತ್ತೊಂದು ಆಕರ್ಷಣೆ ವ್ಯಂಗ್ಯಚಿತ್ರ ಕಲಾವಿದರು. ತಮ್ಮ ಕೈಚಳಕದಿಂದ ವ್ಯಕ್ತಿಗಳ ಮುಖಭಾವಗಳನ್ನು ಹಾಸ್ಯಮಯವಾಗಿ ಚಿತ್ರಿಸುತ್ತಿದ್ದ ಕಲಾವಿದರು ಸುತ್ತ ನೆರೆದಿದ್ದ ಜನರಲ್ಲಿ ಕುತೂಹಲ ಮೂಡಿಸಿದರು. ಕೆಲವರು ಸ್ಥಳದಲ್ಲಿಯೇ ಸಾರ್ವಜನಿಕರ ವ್ಯಂಗ್ಯಚಿತ್ರಗಳನ್ನು ಬಿಡಿಸಿಕೊಟ್ಟರೆ, ಇನ್ನು ಕೆಲವರು ಅವರ ಭಾವಚಿತ್ರಗಳನ್ನು ರಚಿಸಿಕೊಟ್ಟರು. ಪಾಲಕರು ತಮ್ಮ ಮಕ್ಕಳ ಚಿತ್ರಗಳನ್ನು ಕಲಾವಿದರ ಮೂಲಕ ಬಿಡಿಸಿಕೊಳ್ಳಲು ಹೆಚ್ಚಿನ ಆಸಕ್ತಿ ತೋರಿದರು. ಮಕ್ಕಳ ಮುಗ್ಧ ನಗು, ಮುಖದ ಭಾವಗಳು ಹಾಗೂ ಬಾಲ್ಯದ ಚೆಲುವನ್ನು ಚಿತ್ರರೂಪದಲ್ಲಿ ಉಳಿಸಿಕೊಳ್ಳುವ ಅವಕಾಶವನ್ನು ಪಾಲಕರು ಬಳಸಿಕೊಂಡರು.

ಮಣ್ಣಿನಲ್ಲಿ ರೂಪುಗೊಂಡ ಕಲೆಯ ಸೊಬಗು:

ಚಿತ್ರಕಲೆಯ ಜತೆಗೆ ಮಣ್ಣಿನ ಕಲಾಕೃತಿಗಳ ರಚನೆಯೂ ಜನರಲ್ಲಿ ಆಸಕ್ತಿ ಮೂಡಿಸಿತು. ಕಲಾವಿದರೊಬ್ಬರು ಮಣ್ಣಿನಿಂದ ವಿವಿಧ ಆಕೃತಿಗಳನ್ನು ರೂಪಿಸುವ ವಿಧಾನವನ್ನು ಸಾರ್ವಜನಿಕರಿಗೆ ತಿಳಿಸಿಕೊಟ್ಟರು. ಕೈಬೆರಳುಗಳ ಸ್ಪರ್ಶಕ್ಕೆ ಮಣ್ಣು ನಿಧಾನವಾಗಿ ರೂಪ ಪಡೆದುಕೊಳ್ಳುವ ಪ್ರಕ್ರಿಯೆಯನ್ನು ಜನರು ಕುತೂಹಲದಿಂದ ವೀಕ್ಷಿಸಿದರು.

ಒಟ್ಟು 88 ಮಳಿಗೆಗಳಲ್ಲಿ ವೈವಿಧ್ಯಮಯ ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟು ಮಾರಾಟ ಮಾಡಲಾಯಿತು. ಚಿತ್ರಸಂತೆಯಲ್ಲಿ ಕಲಾಕೃತಿಗಳ ವೀಕ್ಷಣೆ ಮತ್ತು ಖರೀದಿಯ ಜತೆಗೆ ಹಾಡು ಹಾಗೂ ನೃತ್ಯ ಕಾರ್ಯಕ್ರಮಗಳೂ ಜನರನ್ನು ರಂಜಿಸಿದವು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ಟಿ.ಎಸ್. ಶ್ರೀವತ್ಸ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ರಾಜ್ಯ ಗ್ಯಾರಂಟಿ ಯೋಜನೆಗ ಅನುಷ್ಠಾ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರ್‌ನಾಥ್, ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ ನರೇಂದ್ರ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್ ಕುಮಾರ್, ಅಪರ ಪ್ರಾದೇಶಿಕ ಆಯುಕ್ತ ಡಾ.ಪಿ. ಶಿವರಾಜು ಹಾಗೂ ಇತರರು ಇದ್ದರು.

ಕಲಾಕೃತಿಗಳನ್ನು ಖರೀದಿಸಿದ ಸಚಿವ ಯತೀಂದ್ರ

ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಬೆಳಗಾವಿಯ ಚಿತ್ರಕಲಾವಿದ ಮಲ್ಲಿಕಾರ್ಜುನ ತೋರಣಗಟ್ಟಿ ರಚಿಸಿದ್ದ ಎರಡು ಕಲಾಕೃತಿಗಳನ್ನು ಖರೀದಿಸಿದರು. ಶೃಂಗೇರಿ ಶಾರದೆಯ ದೇಗುಲದ ಕಲಾಕೃತಿಯನ್ನು 25 ಸಾವಿರ ರೂ., ಬಾದಾಮಿಯ ಭೂತನಾಥ ದೇಗುಲದ ಕಲಾಕೃತಿಯನ್ನು 15 ಸಾವಿರ ರೂ.ಗೆ ಖರೀದಿಸಿದರು.

ಸಾಂಸ್ಕೃತಿಕ ನಗರಿ ಮೈಸೂರು ಎಲ್ಲ ಕಲೆಗಳ ತವರೂರಾಗಿದೆ. ದಸರಾ ಉತ್ಸವದಲ್ಲಿ ಕಲೆಗಳಿಗೆ ಪ್ರೋತ್ಸಾಹ ನೀಡಲು ಚಿತ್ರಸಂತೆ ಆಯೋಜನೆ ಮಾಡಲಾಗಿದೆ. ಚಿತ್ರಸಂತೆಯಲ್ಲಿ ಕಲಾವಿದರು ಬಿಡಿಸಿರುವ ಕಲಾಕೃತಿಗಳನ್ನು ಖರೀದಿಸಿ ಪ್ರೋತ್ಸಾಹಿಸಬೇಕು. ದಸರಾ ಕಾರ್ಯಕ್ರಮಗಳಿಗೆ ಮೈಸೂರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.

ಡಾ.ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net