ಕೆ.ಎಸ್. ಪ್ರಣವಕುಮಾರ್, ಚಿತ್ರದುರ್ಗ
ಬಿಸಿಲಿನ ಝಳ, ಬರದ ಛಾಯೆ ನಡುವೆಯೂ ಐತಿ ಹಾಸಿಕ ಮತ್ತು ಧಾರ್ಮಿಕ ತಾಣಗಳ ತವರೂರಾದ ಕೋಟೆನಾಡು ಚಿತ್ರದುರ್ಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಜನವರಿಯಿಂದ ಅಕ್ಟೋಬರ್ವರೆಗಿನ 10 ತಿಂಗಳ ಅವಧಿಯಲ್ಲಿ ಜಿಲ್ಲೆಯ 22 ಪ್ರವಾಸಿ ತಾಣಗಳಿಗೆ 31 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿ, ಇಲ್ಲಿನ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಇದುವರೆಗೆ 31,33,859 ಭಾರತೀಯರು ಹಾಗೂ 1,059 ವಿದೇಶಿಗರು ಸೇರಿ ಒಟ್ಟು 31,34,918 ಪ್ರವಾಸಿಗರು ಕೋಟೆನಾಡಿಗೆ ಲಗ್ಗೆ ಇಟ್ಟಿದ್ದಾರೆ. ಕಳೆದ 10 ವರ್ಷಗಳ ವಾರ್ಷಿಕ ಸರಾಸರಿ ಗಮನಿಸಿದರೆ, 2022ರಲ್ಲಿ 50 ಲಕ್ಷಕ್ಕೂ ಹೆಚ್ಚು ಹಾಗೂ 2024ರಲ್ಲಿ 49,72,248 ಮಂದಿ ಭೇಟಿ ನೀಡಿದ್ದರು. 2023ರಲ್ಲಿ ದಾಖಲೆಯ 83,89,349 ಪ್ರವಾಸಿಗರು ಆಗಮಿಸುವ ಮೂಲಕ ಇತಿಹಾಸ ಸೃಷ್ಟಿಯಾಗಿತ್ತು. ಬೇಸಿಗೆ ಹಾಗೂ ಬರದ ಕಾರಣದಿಂದ ಆರಂಭದಲ್ಲಿ ಪ್ರವಾಸಿಗರ ಸಂಖ್ಯೆ ತುಸು ಇಳಿಕೆಯಾಗಿದ್ದರೂ, ವರ್ಷಾಂತ್ಯದೊಳಗೆ ಮತ್ತೆ 50 ಲಕ್ಷದ ಗಡಿ ದಾಟುವ ಭರವಸೆಯನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.
ಕೋವಿಡ್ ಪೂರ್ವದ ಐದಾರು ವರ್ಷ ಮತ್ತು ನಂತರದ ಐದು ವರ್ಷಗಳ ಅಂಕಿ-ಅಂಶಗಳನ್ನು ತುಲನೆ ಮಾಡಿದರೆ, ಇತ್ತೀಚೆಗೆ ಜಿಲ್ಲೆಗೆ ಹರಿದುಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ವಿಶ್ವವಿಖ್ಯಾತ ಏಳುಸುತ್ತಿನ ಕಲ್ಲಿನ ಕೋಟೆಯ ಗತವೈಭವವನ್ನು ಕಣ್ತುಂಬಿಕೊಳ್ಳಲೆಂದೇ ವಿದೇಶಿ ಪ್ರವಾಸಿಗರು ಪ್ರತಿ ವರ್ಷ ತಂಡೋಪತಂಡವಾಗಿ ಆಗಮಿಸುತ್ತಾರೆ. 2018 ಮತ್ತು 2019ರಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಸಾವಿರ ದಾಟಿತ್ತು. 2022ರಲ್ಲಿ 500ರ ಗಡಿ ತಲುಪದಿದ್ದರೂ, 2024ರಲ್ಲಿ 1,445 ಹಾಗೂ ಪ್ರಸಕ್ತ ಸಾಲಿನಲ್ಲಿ ಈಗಾಗಲೇ 1,059 ವಿದೇಶಿಗರು ಭೇಟಿ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಗೌರಸಮುದ್ರ ಮಾರಮ್ಮ ಸನ್ನಿಧಾನಕ್ಕೆ 11,58,200 ಭಕ್ತರು ಭೇಟಿ ನೀಡಿದ್ದು, ಜಿಲ್ಲೆಯಲ್ಲೇ ಅಗ್ರಸ್ಥಾನದಲ್ಲಿದೆ. ಉಳಿದಂತೆ ರಾಮಗಿರಿಗೆ 5,60,001, ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಾನಕ್ಕೆ 5,35,223, ಐತಿಹಾಸಿಕ ಕಲ್ಲಿನ ಕೋಟೆಗೆ 2,97,574, ಆಡುಮಲ್ಲೇಶ್ವರಕ್ಕೆ 1,37,351 ಹಾಗೂ ವಾಣಿವಿಲಾಸ ಸಾಗರಕ್ಕೆ 43 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದಾರೆ. ವಿ.ವಿ. ಸಾಗರ ಜಲಾಶಯಕ್ಕೆ ಬಿಗಿ ಭದ್ರತೆ ಒದಗಿಸಿದ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ತುಸು ಇಳಿಕೆಯಾಗಿದೆ.
ಈ ಬಾರಿ ಐತಿಹಾಸಿಕ ಸ್ಮಾರಕಗಳಿಗಿಂತ ಮಿಗಿಲಾಗಿ ಧಾರ್ಮಿಕ ಕ್ಷೇತ್ರಗಳಿಗೆ ಭಕ್ತಸಾಗರವೇ ಹರಿದುಬಂದಿದೆ. ಗೌರಸಮುದ್ರ ಮಾರಮ್ಮ ದೇವಿ ಜಾತ್ರೋತ್ಸವ, ರಾಮಗಿರಿಯ ಶ್ರೀ ಕರಿಸಿದ್ದೇಶ್ವರ ಸ್ವಾಮಿ ಬೆಟ್ಟದ ಉತ್ಸವಗಳು ಹಾಗೂ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಿದ್ದಾರೆ. ಪ್ರವಾಸಿಗರನ್ನು ಸೆಳೆಯುವಲ್ಲಿ ಈ ಮೂರು ಪುಣ್ಯಕ್ಷೇತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ.
ಜಿಲ್ಲೆಯ ಪ್ರವಾಸೋದ್ಯಮಕ್ಕೆ ಕಳಶಪ್ರಾಯ ವಾಗಿರುವ 22 ಪ್ರಮುಖ ತಾಣಗಳ ವಿವರ ಇಲ್ಲಿದೆ.
ಐತಿಹಾಸಿಕ ಮತ್ತು ನಿಸರ್ಗ ತಾಣಗಳು: ಏಳುಸುತ್ತಿನ ಕಲ್ಲಿನ ಕೋಟೆ, ಜೋಗಿಮಟ್ಟಿ ಗಿರಿಧಾಮ, ಆಡುಮಲ್ಲೇಶ್ವರ ಕಿರು ಮೃಗಾಲಯ, ಚಂದ್ರವಳ್ಳಿ, ರಾಷ್ಟ್ರನಾಯಕ ನಿಜಲಿಂಗಪ್ಪ ಸ್ಮಾರಕ ಭವನ, ಚಳ್ಳಕೆರೆಯ ದೊಡ್ಡಗುಡ್ಡ (ಹೊಸಗುಡ್ಡ), ಹಿರಿಯೂರಿನ ವಾಣಿವಿಲಾಸ ಸಾಗರ (ಮಾರಿಕಣಿವೆ), ಬ್ರಹ್ಮಗಿರಿ, ಮೊಳಕಾಲ್ಮೂರು ತಾಲೂಕಿನ ಬಿಳಿನೀರು ಚಿಲುಮೆ, ಗಾಯತ್ರಿ ಜಲಾಶಯ ಹಾಗೂ ಜಾನಕಲ್ಲು.
ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು: ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಾನ, ಗೌರಸಮುದ್ರ ಶ್ರೀ ಮಾರಮ್ಮ ಸನ್ನಿಧಾನ, ರಾಮಗಿರಿ ಶ್ರೀ ಕರಿಸಿದ್ದೇಶ್ವರ ಬೆಟ್ಟ, ದೊಡ್ಡಹೊಟ್ಟೆ ಶ್ರೀ ರಂಗಪ್ಪಸ್ವಾಮಿ ಬೆಟ್ಟ, ನುಂಕಿಮಲೆ ಶ್ರೀ ಸಿದ್ದೇಶ್ವರ, ಬಾಗೂರು, ಹೆಗ್ಗೆರೆ, ಜಟಂಗಿ ಶ್ರೀ ರಾಮೇಶ್ವರ, ಹೊಳಲ್ಕೆರೆಯ ಶ್ರೀ ಗಣೇಶ ದೇಗುಲ ಹಾಗೂ ಹೊಸದುರ್ಗದ ಶ್ರೀ ಹಾಲುರಾಮೇಶ್ವರ ದೇಗುಲ.