

ಮೊಳಕಾಲ್ಮೂರು: ಬರದ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆ ಹುಟ್ಟಿದ್ದೇ ಮೊಳಕಾಲ್ಮೂರಲ್ಲಿ. ಆದರೆ, ಅದಕ್ಕೆ ಪೂರಕವಾಗಿ ಈ ಕ್ಷೇತ್ರಕ್ಕೆ ನೀರು ಪ್ರವೇಶ ಮಾಡಿಲ್ಲ ಎಂದು ಪಪಂ ಮಾಜಿ ಅಧ್ಯಕ್ಷ ಜಿ. ಪ್ರಕಾಶ್ ಅಸಮಾಧಾನ ಹೊರ ಹಾಕಿದರು.
ಇಲ್ಲಿನ ನುಂಕೆಮಲೆ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಾಕಾರಕ್ಕಾಗಿ ಸಾಧಕ- ಬಾಧಕ ಕುರಿತು ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಅತ್ಯಂತ ಬರಪೀಡಿತ ಪ್ರದೇಶ ಎಂದು ಗುರುತಿಸಿಕೊಂಡಿರುವ ಮೊಳಕಾಲ್ಮೂರು ತಾಲೂಕಿನ ಕೆರೆಗಳಿಗೆ ಶಾಶ್ವತ ನೀರು ತುಂಬಿಸುವ ಕಾರ್ಯಕ್ಕೆ ಹೋರಾಟದ ನಿಲುವು ಇಲ್ಲಿಂದಲೇ ಪ್ರಾರಂಭವಾಗಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ಕೆರೆಗಳಿಗೆ ಒಂದು ಹನಿಯೂ ನೀರು ಹರಿದಿಲ್ಲ. ಇನ್ನಾದರೂ ಸಾಮಾಜಿಕ ನ್ಯಾಯ ಪಡೆಯಲು ರೈತ ಸಮುದಾಯ ಸನ್ನದ್ಧರಾಗಬೇಕಿದೆ ಎಂದರು. ಭದ್ರಾ ಮೇಲ್ದಂಡೆ ಸಮಗ್ರ ನೀರಾವರಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಡಿ.ಸಿ. ನಾಗರಾಜ, ಪ್ರಧಾನ ಕಾರ್ಯದರ್ಶಿ ರವಿಕುಮಾರ, ಎಚ್.ಟಿ. ನಾಗರಡ್ಡಿ, ಈಚಗಟ್ಟ ಸಿದ್ದವೀರಪ್ಪ, ಅರುಣಕುಮಾರ, ಚಂದ್ರಶೇಖರ ಗೌಡ್ರು, ತಿಪ್ಪಯ್ಯ, ಪ್ರಭಾಕರ ಮ್ಯಾಸನಾಯಕ ಸಂಜೀವಪ್ಪ, ಡಿ.ಎಂ. ಮಲಿಯಪ್ಪ, ನಿಂಗಣ್ಣ, ಈರಣ್ಣ, ನಾಗರಾಜ, ರಮೇಶ, ಶ್ರೀನಿವಾಸ, ರಾಮಾಂಜಿನಿ ಇತರರಿದ್ದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬೇಡರಡ್ಡಿಹಳ್ಳಿ ಬಸವರಡ್ಡಿ ಮಾತನಾಡಿ, ಬರದ ನಾಡಿಗೆ ಶಾಶ್ವತ ನೀರಾವರಿ ಮೂಲಕ್ಕಾಗಿ 30 ವರ್ಷಗಳ ಅವಿರತ ಹೋರಾಟಕ್ಕೆ ನಮಗೆ ಸಿಕ್ಕ ಜಯ ಕಾಲಿ ಚೊಂಬು. ಸರ್ಕಾರ ಮಾಡಿದ ಪರಮ ಮೋಸ. ನಾವು ಗಲಾಟೆ, ಗದ್ದಲ ಮಾಡುವವರಲ್ಲ ಎಂಬ ಮನೋಭಾವದಲ್ಲಿ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಮೊಳಕಾಲ್ಮೂರನ್ನು ಗಡೆಗಣಿಸಿರುವುದು ಬೇಸರದ ಸಂಗತಿ ಎಂದರು. ಯಾವುದೇ ನದಿ ಮೂಲಗಳ ಆಶ್ರಯ ಇಲ್ಲದೆ ಮಳೆ ನಂಬಿ ಜೀವನ ನಡೆಸುತ್ತಿರುವ ಇಲ್ಲಿನ ಜನರ ಸಂಕಷ್ಟದ ಬವಣೆ ಸರ್ಕಾರಕ್ಕೆ ಗೊತ್ತಿದ್ದರೂ ರಾಜಕೀಯ ಪ್ರಭಾವದ ಕೊರತೆಯಿಂದ ಇವತ್ತಿಗೂ ನಮ್ಮೂರ ಕೆರೆಗೆ ಒಂದು ಹನಿ ನೀರು ಹರಿದಿಲ್ಲ. ಸಾಮಾಜಿಕ ಹಕ್ಕನ್ನು ನ್ಯಾಯ ಬದ್ಧವಾಗಿ ಪಡೆಯಲು ನಾವು ಗಟ್ಟಿ ದನಿಯಾಗಬೇಕು. ಸರ್ಕಾರದ ಕಿವಿ ಹಿಂಡಲು ಯಾವ ತ್ಯಾಗಕ್ಕೂ ಸಿದ್ಧರಿದ್ದೇವೆ ಎಂಬ ಸಂದೇಶ ರವಾನೆಯಾದರೆ ಮಾತ್ರ ಸರ್ಕಾರ ಇಲ್ಲಿಗೆ ಬಂದು ನಮ್ಮ ಸಮಸ್ಯೆ ಆಲಿಸುತ್ತದೆ. 29 ವರ್ಷಗಳ ಅವಿರತ ಹೋರಾಟಕ್ಕೆ ಫಲವಾಗಿ ತಾರ್ಕಿಕ ಅಂತ್ಯ ಕಾಣಲು ಪ್ರಗತಿಪರ ಸಂಘಟನೆಗಳು ಹಾಗೂ ರೈತ ಬಾಂಧವರು ಕೈ ಜೋಡಿಸಬೇಕು ಎಂದರು.
ಬಯಲು ಸೀಮೆ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಹೂಗಾರ್ ಮಾತನಾಡಿ, ಬಯಲುಸೀಮೆ ಜಿಲ್ಲೆಯ ಎಲ್ಲ ತಾಲೂಕಿನ ಕೆರೆಗಳಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ನೀರು ಹರಿಸಬೇಕೆಂಬುದು ನಮ್ಮೆಲ್ಲರ ಹಕ್ಕೊತ್ತಾಯ. ಇದರಲ್ಲಿ ಆಳುವ ಸರ್ಕಾರಗಳು ಎಡವಿರುವುದು ವಿಪರ್ಯಾಸದ ಸಂಗತಿ. ಅದನ್ನು ಸರಿಪಡಿಸಿ ಮೊಳಕಾಲ್ಮೂರಿಗೆ ಮೊದಲು ನೀರು ಹರಿಸಬೇಕು. ಬರದ ತಾಪದಲ್ಲಿ ಜಲ ಸಂಘರ್ಷಕ್ಕೆ ಆಸ್ಪದ ಕೊಡಬಾರದು. ಪೂರಕವಾಗಿ ಸ್ಥಳೀಯ ರಾಜಕಾರಣಿಗಳು ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಸದನದಲ್ಲಿ ದೊಡ್ಡ ಮಟ್ಟದಲ್ಲಿ ಧ್ವನಿಯಾಗದೆ ಮೌನ ತಾಳಿರುವುದು ದೌರ್ಭಾಗ್ಯದ ಸಂಗತಿ. ಇನ್ನಾದರೂ ಎಚ್ಚೆತ್ತುಕೊಂಡು ಕ್ಷೇತ್ರದ ಜನರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.