ಈರುಳ್ಳಿ ತಂದ ಆನಂದ

ತಾಲೂಕಿನ 190 ಹೆ. ಪ್ರದೇಶದಲ್ಲಿ ಬೆಳೆ
Onion
ಮೊಳಕಾಲ್ಮೂರು ತಾಲೂಕಿನ ಹಾನಗಲ್ ಸೂರಯ್ಯ ತಮ್ಮ ಜಮೀನಿನಲ್ಲಿ ಬೆಳೆದಿರುವ ಈರುಳ್ಳಿ.Onion
Published on: 

ಕೆ. ಕೆಂಚಪ್ಪ, ಮೊಳಕಾಲ್ಮೂರು

ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ಸತತ ಬೆಲೆ ಕುಸಿತದಿಂದ ರೈತರ ಕಣ್ಣಲ್ಲಿ ಬರೀ ಕಣ್ಣೀರು ತರಿಸಿದ್ದ ಈರುಳ್ಳಿ, ಈ ಭಾರಿ ಉತ್ತಮ ಫಸಲಿನ ಜತೆಗೆ ಪ್ರಸ್ತುತ ಬೆಲೆ ಏರಿಕೆಯಿಂದ ಬೆಳೆಗಾರರ ಮೊಗದಲ್ಲಿ ನಗು, ಒಂದಿಷ್ಟು ಆದಾಯದ ಭರವಸೆ ಮೂಡಿಸಿದೆ. ತಾಲೂಕು ಒಣ ಹವೆಯ ಪ್ರದೇಶವಾದರೂ ಈರುಳ್ಳಿ ಬೆಳೆಗೆ ಉತ್ತಮ ವಾತಾವರಣವಿದೆ. ಹಾಗಾಗಿ, ನೀರಾವರಿ ಮೂಲದ ರೈತರು ವರ್ಷದ ಮುಂಗಾರಿನಲ್ಲಿ 260 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿರೀಕ್ಷಿತ ಆದಾಯ ಕಂಡುಕೊಂಡರು. ಅದೇ ಭರವಸೆಯಲ್ಲಿ ಹಿಂಗಾರು ಬೆಳೆಯಲ್ಲಿ ಪ್ರಸ್ತುತ ತಾಲೂಕಿನಲ್ಲಿ 190 ಹೆ. ಪ್ರದೇಶದಲ್ಲಿ ನಾಟಿ ಮಾಡಲಾಗಿದೆ. ಬಹುತೇಕ ಫಸಲು ಕೈಗೆ ಬಂದಿದ್ದು, ಮಾರುಕಟ್ಟೆಯಲ್ಲಿ ಪ್ರಸ್ತುತ ಇರುವ ದರ ಮುಂದುವರಿದರೆ ರೈತರ ಆದಾಯ ಹೆಚ್ಚಾಗಲಿದೆ.

ಮಾರುಕಟ್ಟೆಯಲ್ಲಿ ಗಡ್ಡೆ ಗಾತ್ರದ ಆಧಾರದಲ್ಲಿ ಒಂದು ಕ್ವಿಂಟಾಲ್‌ಗೆ 4 (ಮಧ್ಯಮ ಗಡ್ಡೆ) ಸಾವಿರದಿಂದ ಐದು ಸಾವಿರ ರೂ. ಇದ್ದರೆ, ದೊಡ್ಡ ಗಡ್ಡೆಗೆ 6 ಸಾವಿರ ರೂ. ತನಕ ಬೆಲೆ ಇದೆ. ಕಳೆದ 5 ವರ್ಷಗಳ ಹಿಂದೆ 600 ಹೆಕ್ಕೇರ್‌ಗೂ ಅಧಿಕ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿತ್ತು. ಆದರೆ, ಸತತ ಬೆಲೆ ಕುಸಿತದಿಂದ ಕಂಗಾಲಾದ ರೈತರು ಹಾಕಿದ ಬಂಡವಾಳವೂ ಸಿಗದ ಪರಿಸ್ಥಿತಿಯಲ್ಲಿ ಹತ್ತಿ ಬೆಳೆಯತ್ತ ಒಲವು ತೋರಿದರು. ಅದರಲ್ಲೂ ಕೈಸುಟ್ಟುಕೊಂಡು ಪುನಃ ಈರುಳ್ಳಿ ಬೆಳೆಯತ್ತ ಮುಖ ಮಾಡಿದ್ದಾರೆ. ವರ್ಷದ ಮುಂಗಾರಿನಲ್ಲಿ ಬೆಳೆದ ರೈತರಿಗೆ ಎಕರೆ ಅನುಸಾರ ಲಕ್ಷಾಂತರ ರೂ. ಆದಾಯ ಸಿಗುವ ನಿರೀಕ್ಷೆ ಇದೆ.

ಎಕರೆಗೆ 150ರಿಂದ 200 ಚೀಲ ಇಳುವರಿ

ಒಂದು ಎಕರೆಯಲ್ಲಿ ಈರುಳ್ಳಿ ಬೆಳೆ ತೆಗೆಯಲು ಬಿತ್ತನೆ ಅಥವಾ ನಾಟಿ, ಗೊಬ್ಬರ, ಔಷಧ, ಕಳೆ ಇತ್ಯಾದಿ 60ರಿಂದ 70 ಸಾವಿರ ರೂ. ಖರ್ಚು ಬರುತ್ತದೆ. 4 ತಿಂಗಳ ಕಾಲ ಚೆನ್ನಾಗಿ ಆರೈಕೆ ಮಾಡಿದರೆ ಎಕರೆಗೆ 150ರಿಂದ 200 ಚೀಲದವರೆಗೂ ಇಳುವರಿ ನಿಶ್ಚಿತ. ಜತೆಗೆ, ಕೊಟ್ಟಿಗೆ ಗೊಬ್ಬರ ಹೆಚ್ಚು ಬಳಸಿದರೆ ರೋಗ ರಹಿತ ಬೆಳೆ ತೆಗೆಯಬಹುದು ಎನ್ನುತ್ತಾರೆ ರೈತರು. ಹಾನಗಲ್ ಸೂರಯ್ಯ ತಮ್ಮ 9 ಎಕರೆಯಲ್ಲಿ ನಾಟಿ ತಳಿ ಈರುಳ್ಳಿ ಬೀಜ ಬಿತ್ತನೆ ಮಾಡಿ ಪ್ರಸ್ತುತ ಕಟಾವು ಮಾಡುತ್ತಿದ್ದು, 70 ಕೆಜಿ ತೂಕದ ಬರೋಬ್ಬರಿ 1600 ಪ್ಯಾಕೇಟ್ ಬಂಪರ್ ಬೆಳೆ ತೆಗೆದಿದ್ದಾರೆ. ಇರುವ 2 ಕೊಳವೆಬಾವಿ ನೀರಿಗೆ ಹನಿ ನೀರಾವರಿ ಪದ್ಧ್ದತಿ ಅಳವಡಿಸಿಕೊಂಡ ಕಾರಣ 9 ಎಕರೆಗೂ ಸಮೃದ್ಧ ನೀರು ಸಿಕ್ಕಿದೆ. ಹಾಗಾಗಿ, ಪ್ರಸ್ತುತ ಗಡ್ಡೆ ಸೈಜ್‌ನ ಆಧಾರದಲ್ಲಿ ಒಂದು ಕ್ವಿಂ.ಗೆ 4ರಿಂದ 6 ಸಾವಿರ ರೂ. ತನಕ ಬೆಲೆ ನಿರೀಕ್ಷೆ ಇದೆ.

ತಾಲೂಕಿನಲ್ಲಿ ಈರುಳ್ಳಿ ಬೆಳೆಯುವುದು ಕಡಿಮೆಯಾಗಿದ್ದರೂ ಈಬಾರಿ ಈರುಳ್ಳಿಗೆ ಉತ್ತಮ ಬೆಲೆ ಇದೆ. ಬೆಳೆ ಯಾವುದೇ ಇರಲಿ ರೈತರು ಸೀಸನ್ ಅವಧಿಯಲ್ಲಿ ಬೆಳೆಯುವ ಪದ್ಧ್ದತಿ ರೂಢಿಸಿಕೊಳ್ಳಬೇಕು. ವಿಶೇಷವಾಗಿ ಏಕ ಬೆಳೆ ಪದ್ಧತಿ ಕೈಬಿಟ್ಟು ಮಿಶ್ರ ಬೆಳೆ ಕೈಗೊಂಡರೆ ಲಾಭದ ಭರವಸೆ ಸಾಧ್ಯ.
ಕೃಷ್ಣಮೂರ್ತಿ ಸಹಾಯಕ ತೋಟಗಾರಿಕೆ ನಿರ್ದೇಶಕ.