ಹೊಸದುರ್ಗದಲ್ಲಿ ಅದ್ದೂರಿ ಸಿದ್ದರಾಮೇಶ್ವರ ಅಂಬಿನೋತ್ಸವ

ಬನ್ನಿ ಮುಡಿದು ಸಂಭ್ರಮಿಸಿದ ಭಕ್ತ ವೃಂದ, ದೇವರುಗಳ ಅಡ್ಡಪಲ್ಲಕ್ಕಿ ಉತ್ಸವ
Ambinotsava
ಮಧುರೆಯಲ್ಲಿ ಶ್ರೀಗುರು ಸಿದ್ಧರಾಮೇಶ್ವರ ಸ್ವಾಮಿ ದಸರಾ ಅಂಬಿನೋತ್ಸವ ವಿಜೃಂಭಣೆಯಿಂದ ನೆರವೇರಿತು.Ambinotsava
Published on: 

ಹೊಸದುರ್ಗ: ತಾಲೂಕಿನ ಮಧುರೆ ಗ್ರಾಮದಲ್ಲಿ ಶನಿವಾರ ಶ್ರೀಗುರು ಸಿದ್ಧರಾಮೇಶ್ವರ ಸ್ವಾಮಿ ದಸರಾ ಅಂಬಿನೋತ್ಸವ ವಿಜೃಂಭಣೆ ಯಿಂದ ನೆರವೇರಿತು. ಭಕ್ತರು ಅಂಬಿನೋತ್ಸವದಲ್ಲಿ ಪಾಲ್ಗೊಂಡು ಬನ್ನಿ ಮುಡಿದು ಸಂಭ್ರಮಿಸಿದರು.

ಅಂಬಿನೋತ್ಸವದ ಪೂರ್ವಭಾವಿಯಾಗಿ ಶುಕ್ರವಾರ ರಾತ್ರಿ ಗುರು ಸಿದ್ಧರಾಮೇಶ್ವರ ಸ್ವಾಮಿ ಹೂವಿನ ಪಲ್ಲಕ್ಕಿ ಉತ್ಸವ ಗ್ರಾಮದಲ್ಲಿ ವಿಜೃಂಭಣೆಯಿಂದ ನೆರವೇರಿತು. ಶನಿವಾರ ಬೆಳಗ್ಗೆ ಸಿದ್ಧರಾಮೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದಿಂದ ಸಿದ್ಧರಾಮೇಶ್ವರಸ್ವಾಮಿ, ಆಂಜನೇಯ ಸ್ವಾಮಿ ಹಾಗೂ ಕಾಳಮ್ಮ ದೇವಿಯನ್ನು ಮೆರವಣಿಗೆಯಲ್ಲಿ ಗ್ರಾಮದ ಹೊರವಲಯದ ಅಂಬಿನ ಮಂಟಪಕ್ಕೆ ಕರೆತಂದು ಅಂಬಿನೋತ್ಸವಕ್ಕೆ ಚಾಲನೆ ನೀಡಲಾಯಿತು. ಧಾರ್ಮಿಕ ವಿಧಿ ವಿಧಾನದಂತೆ ಮೊದಲಿಗೆ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸಿದ ನಂತರ ಬಾಳೆಗಿಡಕ್ಕೆ ಪೂಜೆ ಸಲ್ಲಿಸಿ ಅದನ್ನು ಕತ್ತರಿಸಲಾಯಿತು. ಉತ್ಸವದಲ್ಲಿ ಪಾಲ್ಗೊಂಡ ಭಕ್ತರು ಬನ್ನಿ ಮುಡಿದು ದೇವರಿಗೆ ಭಕ್ತಿ ಸಮರ್ಪಿಸಿದರು. ಮಧ್ಯಾಹ್ನ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಿದ್ದರಾಮೇಶ್ವರ ಸ್ವಾಮಿ, ಆಂಜನೇಯ ಸ್ವಾಮಿ ಹಾಗೂ ಕಾಳಮ್ಮ ದೇವಿಯ ಅಡ್ಡಪಲಕ್ಕಿ ಉತ್ಸವ ನಡೆಯಿತು. ಹೂಮಾಲೆಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಗಳು ಮೆರಗು ಹೆಚ್ಚಿಸಿದ್ದವು. ಉತ್ಸವದಲ್ಲಿ ಮಧುರೆ, ನಾಗೇನಹಳ್ಳಿ, ಅರಳಿಹಳ್ಳಿ, ಹೊನ್ನೆಕೆರೆ, ಪಿಲಾಪುರ, ಮಳಲಿ, ಮಾರಭಘಟ್ಟ, ಕೊರಟಿಕೆರೆ, ಶಿವನೇಕಟ್ಟೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net