

ಟಿ.ರಾಮಚಂದ್ರಪ್ಪ ಕೊಂಡ್ಲಹಳ್ಳಿ
ಕೈಮಗ್ಗದ ರೇಷ್ಮೆ ಸೀರೆಗೆ ನಾಡಿನಾಚೆಗೂ ಹೆಸರು ಪಡೆದಿರುವಂತೆ, ರೇಷ್ಮೆ ಗೂಡು ಉತ್ಪಾದನೆಯಲ್ಲೂ ತಮ್ಮದೇ ಛಾಪು ಮೂಡಿಸಿದೆ. ಆದರೆ, ಬರಗಾಲದ ಛಾಯೆ ರೇಷ್ಮೆ ಬೆಳೆಗೂ ಆವರಿಸಿ ರೈತರು ಕಂಗಾಲಾಗಿದ್ದಾರೆ. ಇಲ್ಲಿ ಯಾವುದೇ ಕೆರೆ, ಹಳ್ಳ, ಕೊಳ್ಳಗಳ ನೀರಿನ ಮೂಲಗಳೇ ಇಲ್ಲ. ಮಳೆಯಿಲ್ಲದೆ ಅಂತರ್ಜಲ ಕುಸಿದಿದ್ದು, ಹತ್ತಾರು ಎಕರೆಯಲ್ಲಿ ಹಿಪ್ಪುನೇರಳೆ ಬೆಳೆಯುತ್ತಿದ್ದ ರೈತರು ಈಗ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಬರದ ಹಿನ್ನೆಲೆಯಲ್ಲಿ ಬ್ಯಾಂಕ್ಗೆ ಸಾಲದ ಕಂತು ಕಟ್ಟಲಾಗದ ಸ್ಥಿತಿ ಎದುರಾಗಿದೆ. ಪ್ರಸ್ತುತ ರೇಷ್ಮೆ ಗೂಡಿಗೆ ಉತ್ತಮ ಬೆಲೆ ಇದೆ. ಆದರೆ ಹುಳು ಸಾಕಣೆಗೆ ಹಿಪ್ಪುನೇರಳೆ ಕೊರತೆಯಿಂದ 30 ರಿಂದ -40 ಕಿ.ಮೀ. ದೂರದಿಂದ ಸೊಪ್ಪು ಖರೀದಿಸಿ ತರುತ್ತಿದ್ದಾರೆ. ಕೆಲ ರೈತರು ಹುಳು ಸಾಕಣೆ ನಿಲ್ಲಿಸಿದ್ದಾರೆ. 350 ಮೊಟ್ಟೆ ಸಾಕಣೆ ಮಾಡುತ್ತಿದ್ದವರು ಪ್ರಸ್ತುತ 100&150 ಮೊಟ್ಟೆಗೆ ಸೀಮಿತರಾಗಿದ್ದಾರೆ. ಹುಳು ಸಾಕಣೆ ಮನೆಗಳು ಬರಿದಾಗುತ್ತಿವೆ.
ರೈತರು ಮನೆಯಲ್ಲೇ ಅತ್ಯಾಧುನಿಕ ವಿಧಾನದಿಂದ ಹುಳು ಸಾಕಣೆ ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಜಿಲ್ಲೆ, ರಾಜ್ಯಮಟ್ಟದಲ್ಲಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ರೇಷ್ಮೆ ಕೃಷಿ ಪ್ರತ್ಯ, ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದೆ. ಒಬ್ಬ ರೈತ ವರ್ಷಕ್ಕೆ 5 ರಿಂದ 6 ಬೆಳೆ ಬೆಳೆಯುತ್ತಾರೆ.
ಕೊಂಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 280ಕ್ಕೂ ಅಧಿಕ ರೇಷ್ಮೆ ಕೃಷಿಕರಿದ್ದಾರೆ. 300 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಯಲಾಗುತ್ತಿದೆ. ಹೆಚ್ಚು ಇಳುವರಿ ಪಡೆಯುವಲ್ಲಿ ಇದು ರಾಜ್ಯದಲ್ಲೇ ಹೆಸರುವಾಸಿ. ನೂರು ಮೊಟ್ಟೆಗೆ 150 ಕೆ.ಜಿ.ವರೆಗೆ ಹಾಗೂ ಮಿಶ್ರತಳಿ ಬಿಳಿ ಗೂಡನ್ನು 100 ಕೆಜಿವರೆಗೂ ಉತ್ಪಾದಿಸಲಾಗುತ್ತಿದೆ. ಇಲ್ಲಿನ ರೇಷ್ಮೆ ಗೂಡಿಗೆ ರಾಮನಗರದ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ದಿನವೂ ಇಲ್ಲಿಂದ 2 ಟನ್ಗೂ ಹೆಚ್ಚು ಗೂಡು ರಾಮನಗರಕ್ಕೆ ಪೂರೈಕೆಯಾಗುತ್ತಿದೆ. ಈ ಮೊದಲು ಇಲ್ಲಿ ಸಿಎಸ್ಆರ್ (ಬಿಳಿ ಗೂಡು) ತಳಿಯನ್ನೇ ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಇತ್ತೀಚೆಗೆ ಡ್ರೋನ್ನಿಂದ ಟೊಮ್ಯಾಟೊ, ತೊಗರಿ ಇತರೆ ಬೆಳೆಗಳಿಗೆ ಔಷಧ ಸಿಂಪರಣೆ ಮಾಡುತ್ತಿರುವ ಕಾರಣ ವಾಯುಮಾಲಿನ್ಯ ಉಂಟಾಗುತ್ತಿದೆ. ಇದು ಬಿಳಿಗೂಡು ಉತ್ಪಾದನೆಗೆ ಮಾರಕವಾಗಿದೆ. ಈಗ ಸಂಪೂರ್ಣ ಹಳದಿಗೂಡ(ಸಿಬಿ)ನ್ನೇ ಉತ್ಪಾದಿಸಲಾಗುತ್ತಿದೆ. ಇದಕ್ಕೆ 700 ರಿಂದ -800 ರೂ. ಬೆಲೆ ಸಿಗುತ್ತದೆ.