

ಕೆ. ಕೆಂಚಪ್ಪ ಮೊಳಕಾಲ್ಮೂರು
ತಾಲೂಕಿನ ಅತ್ಯಂತ ಹಿಂದುಳಿದ ನಾಗಸಮುದ್ರ ಗ್ರಾಮದಲ್ಲಿ ಮಕ್ಕಳ ಶೈಕ್ಷಣಿಕ ಸಬಲೀಕರಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಅತ್ಯವಶ್ಯವಾಗಿದ್ದು, ಸ್ಥಾಪನೆಗೆ ಸ್ಥಳೀಯರಿಂದ ಒತ್ತಾಯ ದಿನೇದಿನೆ ಬಲಗೊಳ್ಳುತ್ತಿದೆ.
ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆಯಿದ್ದು, 3 ಪ್ರಾಥಮಿಕ ಶಾಲೆಗಳು, 1 ಪ್ರೌಢಶಾಲೆ, 9 ಅಂಗನವಾಡಿ ಕೇಂದ್ರಗಳಿವೆ. ಜತೆಗೆ ಕಾನ್ವೆಂಟ್ಗಳಿದ್ದು, 1,300ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಪ್ರೌಢಶಿಕ್ಷಣ ಮುಗಿದ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ದೂರದ ಮೊಳಕಾಲ್ಮೂರು, ಚಳ್ಳಕೆರೆ, ಬಳ್ಳಾರಿಗೆ ಹೋಗಬೇಕಾದ ಪರಿಸ್ಥಿತಿ ಇದೆ.
ಸಾರಿಗೆ ಅವ್ಯವಸ್ಥೆ, ಬಡತನ ಕಾರಣಕ್ಕೆ ದೂರದ ಕಾಲೇಜುಗಳಿಗೆ ಹೋಗಿ ಬರಲು ಸಾಧ್ಯವಾಗದೆ ಅನೇಕರು ಕಾಲೇಜು ಶಿಕ್ಷಣ ಮೊಟಕುಗೊಳಿಸಿದ್ದಾರೆ. ಸ್ಥಳೀಯವಾಗಿ ಪಿಯು, ಪದವಿ ಶಿಕ್ಷಣ ಲಭ್ಯವಾದರೆ ಈ ಭಾಗದ ಎಸ್ಸಿ, ಎಸ್ಟಿ ಪಂಗಡದ ಸಮುದಾಯಗಳು ಮುಖ್ಯವಾಹಿನಿಗೆ ಬರಲು ಅನುಕೂಲ ವಾಗಲಿದೆ. ಆದರೆ, ಅನೇಕ ಬಾರಿ ಪಿಯು ಕಾಲೇಜು ಸ್ಥಾಪನೆಗೆ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆದರೂ ಪ್ರಯೋಜವಾಗಿಲ್ಲ ಎನ್ನುತ್ತಾರೆ ಗ್ರಾಮದ ಮುಖಂಡರು.
ಈ ಭಾಗದ ಹುಚ್ಚಂಗಿದುರ್ಗ, ಬೈರಾಪುರ, ಅಶೋಕ ಸಿದ್ದಾಪುರ, ಚಿಕ್ಕೇರಹಳ್ಳಿ, ಅಮುಕುಂದಿ, ಬಟ್ರಹಳ್ಳಿ, ರೊಪ್ಪ, ವಾಚೇನಹಳ್ಳಿ ಇನ್ನಿತರ ಗ್ರಾಮಗಳ ಮಕ್ಕಳು ನಾಗಸಮುದ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದಾರೆ. ನಾಗಸಮುದ್ರ ಗ್ರಾಮವೊಂದರಲ್ಲೇ 6 ಸಾವಿರಕ್ಕೂ ಹೆಚ್ಚು ಎಸ್ಸಿ, ಎಸ್ಟಿ ಜನಸಂಖ್ಯೆ ಇರುವುದು ವಿಶೇಷ. ಹಿಂದುಳಿದ ಸಮುದಾಯಗಳ ಪ್ರಗತಿಗೆ ಶಿಕ್ಷಣವೇ ಅಸ್ತ್ರ. ಜಿಲ್ಲಾಡಳಿತ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಪಿಯು ಕಾಲೇಜು ಮತ್ತು ವಸತಿ ನಿಲಯ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ಭವಿಷ್ಯಕ್ಕೆ ಪ್ರಾಧಾನ್ಯತೆ ಕೊಡಬೇಕಿದೆ.