ಬ್ಯಾಡಗಿ ಮೆಣಸು ಬಲು ಖಾರ

ಕಾಡುತ್ತಿದೆ ಮಳೆ ಕೊರತೆ, ಬಂಡವಾಳವೂ ಕೈಸೇರದ ಪರಿಸ್ಥಿತಿ
chilies
ಮೊಳಕಾಲ್ಮೂರು ತಾಲೂಕಿನ ಕರಡಿಹಳ್ಳಿ ಗ್ರಾಮದ ರೈತ ಮಂಜಣ್ಣ ಅವರ ಜಮೀನಿನಲ್ಲಿ ಸಮದ್ಧವಾಗಿ ಬೆಳೆದಿರುವ ಬ್ಯಾಡಗಿ ಮೆಣಸಿನಕಾಯಿ.chilies
Published on: 

ಕೆ.ಕೆಂಚಪ್ಪ ಮೊಳಕಾಲ್ಮೂರು

ಕೋಟ್ಯಂತರ ರೂ. ಬಂಡವಾಳ ಹಾಕಿ ಬ್ಯಾಡಗಿ ಮೆಣಸಿನಕಾಯಿ ಕೃಷಿ ಮಾಡಿದ್ದ ರೈತರು ಮಳೆ ಕೊರತೆಯಿಂದ ಅಂತರ್ಜಲ ಕುಸಿದಿದ್ದರ ಪರಿಣಾಮ ಹಾಕಿದ ಬಂಡವಾಳವೂ ಕೈಗೆ ಸೇರುವುದು ದುಸ್ತರವಾಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ತಾಲೂಕಿನ ದೇವಸಮುದ್ರ ಹೋಬಳಿ ವ್ಯಾಪ್ತಿಯ ತಮ್ಮೇನಹಳ್ಳಿ, ಕರಡಿಹಳ್ಳಿ, ಶಿರೇಕೊಳ, ಕೋನಾಪುರ, ಬೊಮ್ಮದೇವರಹಳ್ಳಿ, ತಿವ್ಮಾಲಾಪುರ ಮತ್ತಿತರ ಗ್ರಾಮಗಳ ರೈತರು 1 ಎಕರೆಯಿಂದ 20 ಎಕರೆವರೆಗೆ ಬ್ಯಾಡಗಿ ಹಾಗೂ ಸಾಂಬಾರು ಕಡ್ಡಿ ಮೆಣಸಿನಕಾಯಿ ಬೆಳೆ ಕೃಷಿ ಕೈಗೊಂಡಿದ್ದಾರೆ.

ಸಾವಿರಾರು ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿರುವ ಬೆಳೆ ಪ್ರಸ್ತುತ ಹೂವು, ಕಾಯಿ ಕಟ್ಟುತ್ತಿದೆ. ಮಳೆ ಅಭಾವದಿಂದ ಕೊಳವೆ ಬಾವಿಗಳಲ್ಲಿ ನೀರಿನ ಪ್ರವಾಣ ಕುಸಿದಿದೆ. ಬೆಳೆಗೆ ಸಮರ್ಪಕ ನೀರುಣಿಸಲು ಸಾಧ್ಯವಾಗದೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗಿದೆ.

ಕೆಲವರು ಬೆಳೆ ಉಳಿಸಿಕೊಳ್ಳಲು ಹೊಸದಾಗಿ ಕೊಳವೆಬಾವಿ ಕೊರೆಸಿದರೂ ಸಮರ್ಪಕ ನೀರು ಸಿಕ್ಕಿಲ್ಲ. ವರುಣ ದೇವನ ಪ್ರಾರ್ಥನೆ ವಾಡುವ ಪರಿಸ್ಥಿತಿ ತಂದೊಡ್ಡಿದೆ.

ಮೂರು ಅಡಿ ಅಂತರದಲ್ಲಿ ಸಾಲು ಬದುಗಳನ್ನು ವಾಡಿ ಮೇ ತಿಂಗಳಲ್ಲಿ ಸಸಿ ನಾಟಿ ವಾಡಿದ್ದರು. ಕೆರೆ ಮಣ್ಣು, ಕೊಟ್ಟಿಗೆ ಗೊಬ್ಬರ, ದುಬಾರಿ ಔಷಧ ಕೊಟ್ಟು ಅಧಿಕ ಇಳುವರಿ ಬರಲೆಂದು ಒಂದು ಎಕರೆಗೆ 7 ಸಾವಿರ ರೂ.ಗಿಂತಲೂ ಅಧಿಕ ಖರ್ಚು ವಾಡಿದ್ದಾರೆ. ಉತ್ತಮ ರೀತಿಯಲ್ಲಿ ಆರೈಕೆ ವಾಡಿದ್ದ ರಿಂದ ಭರ್ಜರಿ ಕಾಯಿ ಕಟ್ಟಿದೆ. ನವೆಂಬರ್ ಮಾಸಾಂತ್ಯದಲ್ಲಿ ಒಣ ಮೆಣಸಿನಕಾಯಿ ಕಟಾವಿಗೆ ಬರಲಿದೆ. ಪ್ರಸ್ತುತ ನೀರಿನ ಅಭಾವ ದೊಡ್ಡ ಮಟ್ಟದ ಗಂಡಾಂತರ ತಂದಿಟ್ಟಿದೆ. ಕೆಲವರು ಐದಾರು ಬೋರ್‌ವೆಲ್ ಕೊರೆಸಿದರೂ ಅಗತ್ಯದಷ್ಟು ನೀರು ಸಿಗದೆ ಬೆಳೆ ಉಳಿಸಿಕೊಳ್ಳುವುದು ಹೇಗೆಂದು ಚಿಂತಿತರಾಗಿದ್ದಾರೆ.

ರೈತರು ಶೇಂಗಾ ಬದಲು ಮೆಕ್ಕೆಜೋಳ, ಹತ್ತಿ ಬೆಳೆಯಲು ಒಲವು ತೋರಿದ್ದರು. ಕಳೆದ ವರ್ಷ ಹತ್ತಿ ಬೆಲೆ ಕುಸಿದ ಹಿನ್ನೆಲೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯತ್ತ ಮುಖ ವಾಡಿದರು. ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದ ಅದೂ ಕೂಡ ಕೈತಪ್ಪಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಳಕಾಲ್ಮೂರು ಹಿಂದಿನಿಂದಲೂ ಅತೀ ಕಡಿಮೆ ಮಳೆ ಬೀಳುವ ಪ್ರದೇಶವೆಂದೇ ಗುರುತಿಸಿಕೊಂಡಿದೆ. ಪ್ರತಿ ವರ್ಷ ಯಾವ ಬೆಳೆ ಇಟ್ಟರೂ ಒಂದಲ್ಲ ಒಂದು ರೀತಿ ಕೈಕೊಡುತ್ತಿರುವ ಕಾರಣ ಅನೇಕ ರೈತರು ಇರುವ ಜಮೀನು ಉಳುಮೆ ವಾಡುವುದನ್ನೇ ಕೈಬಿಟ್ಟು, ಹೊಟ್ಟೆಪಾಡಿಗೆ ಗುಳೆ ಹೋಗಿರುವುದುಂಟು.

ಮಳೆ ಬಂದರಷ್ಟೆ ರೈತರಿಗೆ ಉಳಿಗಾಲ

ಕಳೆದ ವರ್ಷ ಬ್ಯಾಡಗಿ ಮೆಣಸಿನಕಾಯಿ ಕ್ವಿಂಟಲ್‌ಗೆ 50 ಸಾವಿರ ರೂ. ಗೆ ಏರಿಕೆ ಕಂಡ ಹಿನ್ನೆಲೆಯಲ್ಲಿ ರೈತರು ಹತ್ತಿ ಬದಲು ಮೆಣಸಿನ ಕಾಯಿ ಕೃಷಿ ಮೇಲೆ ಒಲವು ತೋರಿದ್ದಾರೆ. ಕರಡಿಹಳ್ಳಿ ಒಂದೇ ಗ್ರಾಮದಲ್ಲಿ ಸಾವಿರ ಎಕರೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆಯಲಾಗಿದೆ. ಅದೇ ರೀತಿ ಸುತ್ತಲಿನ ಅನೇಕ ಗ್ರಾಮಗಳ ರೈತರೂ ಇದೇ ಕೃಷಿ ಕೈಗೊಂಡಿದ್ದು, ಎಕರೆಗೆ 20 ಕ್ವಿಂಟಾಲ್‌ವರೆಗೂ ಬೆಳೆ ನಿರೀಕ್ಷೆಯಲ್ಲಿದ್ದರು. ನೀರಿನ ಅಭಾವದಿಂದ 8-10 ಕ್ವಿಂಟಾಲ್ ಬೆಳೆ ಕೈಗೆ ಸಿಕ್ಕರೆ ಹೆಚ್ಚು. ಪ್ರಸ್ತುತ ಕ್ವಿಂ.ಗೆ 3540 ರೂ. ಬೆಲೆ ಇದೆ. ತುರ್ತಾಗಿ ಕೆರೆ, ಕಟ್ಟೆಗಳು ತುಂಬುವಷ್ಟು ಮಳೆ ಬಂದರೆ ಉಳಿಗಾಲ. ಇಲ್ಲವಾದರೆ ಹಾಕಿದ ಬಂಡವಾಳವೂ ಕೈಗೆ ಸಿಗದಂತಾಗಲಿದೆ.

40 ವರ್ಷಗಳಿಂದ ಮೆಣಸಿನಕಾಯಿ ಕೃಷಿ ಮಾಡುತ್ತಿದ್ದು, ಈ ವರ್ಷ 10 ಎಕರೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ಬೆಳೆ ಬೆಳೆದಿದ್ದೇವೆ. 5 ಕೊಳವೆಬಾವಿ ಒರೆಸಿದ್ದು, 3 ರಲ್ಲಿ ವಾತ್ರ ಕಡಿಮೆ ಪ್ರಮಾಣದಲ್ಲಿ ನೀರು ಸಿಕ್ಕಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡರೂ ಇಡೀ ಬೆಳೆಗೆ ನೀರು ಸಾಕಾಗುತ್ತಿಲ್ಲ. ದೇವರೇ ನಮ್ಮನ್ನು ಕಾಪಾಡಬೇಕು.
ಮಂಜಣ್ಣ ರೈತ, ಕರಡಿಹಳ್ಳಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net