

ಹೊಸದುರ್ಗ: ಸಹಕಾರ ಕ್ಷೇತ್ರದ ಸಂಘ, ಸಂಸ್ಥೆಗಳನ್ನು ಬಲಪಡಿಸುವುದರಿಂದ ಕೃಷಿ ಸಮು ದಾಯದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಬಿ.ಜಿ. ಗೋವಿಂದಪ್ಪ ತಿಳಿಸಿದರು.
ಪಟ್ಟಣದ ಜಯದೇವ ಸಭಾಂಗಣದಲ್ಲಿ ಸಹಕಾರ ಇಲಾಖೆ ಹಾಗೂ ವಿವಿಧ ಸಹಕಾರ ಸಂಘಟನೆಗಳು ಶುಕ್ರವಾರ ಆಯೋಜಿಸಿದ್ದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಕರಿಗೆ ನೀಡುತ್ತಿರುವ ಸೌಲಭ್ಯಗಳು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೇ ಕೃಷಿಕರಿಗೆ ತಲುಪುತ್ತಿವೆ. ಸರ್ಕಾರವು ಶೂನ್ಯ, ಅತಿ ಕಡಿಮೆ ಬಡ್ಡಿ ದರದಲ್ಲಿ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಒದಗಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸದೃಢಗೊಳಿಸಬೇಕಾಗಿದೆ ಎಂದರು.
ಕನಿಷ್ಠ ಪ್ರತಿ ಗ್ರಾಪಂಗೆ ಒಂದು ಕೃಷಿ ಪತ್ತಿನ ಸಹಕಾರ ಸಂಘದ ಅಗತ್ಯವಿದೆ. ಆದರೆ, ತಾಲೂಕಿನ ಅನಿವಾಳ, ದೊಡ್ಡಘಟ್ಟ ಹಾಗೂ ಮತ್ತೋಡು ಗ್ರಾಪಂಗಳಲ್ಲಿ ಸಹಕಾರ ಸಂಘಗಳು ಇಲ್ಲದೆ ಸಮಸ್ಯೆಯಾಗಿದೆ. ಅಗತ್ಯವಿರುವ ಕಡೆ ಸಹಕಾರ ಸಂಘಗಳ ಸ್ಥಾಪನೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಬರಗಾಲದ ಛಾಯೆ ತೀವ್ರವಾಗಿದ್ದು ಪ್ರಕೃತಿಯ ಅವಕೃಪೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರವು ಬರ ಪರಿಹಾರ ನೀಡುವ ಕೆಲಸಕ್ಕೆ ಮುಂದಾಗಿದ್ದು ಪರಿಹಾರದ ಹಣ ಬ್ಯಾಂಕ್ ಖಾತೆಗೆ ಪಾವತಿಯಾಗಲಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿ.ಈ. ಅಜ್ಜಪ್ಪ ಅಧ್ಯಕ್ಷತೆ ವಹಿಸಿದ್ದರು. ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಫಾರಿ ಶಿವಲಿಂಗಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ, ನಿರ್ದೇಶಕ ಕೆ.ಅನಂತ, ಎಂ.ಡಿ ಇಲ್ಯಾಸ್ ಶರೀಫ್, ಅಂಜನ್ಮೂರ್ತಿ, ಎಚ್. ರಮೇಶ, ರಾಮು, ಆಗ್ರೋ ಶಿವಣ್ಣ, ದೀಪಿಕಾ ಸತೀಶ ಇತರರಿದ್ದರು.
ಎಂಎಲ್ಸಿ ಕೆ.ಎಸ್. ನವೀನ್ ಮಾತನಾಡಿ, ಭಾರತೀಯರಿಗೆ ಸಹಕಾರಿ ಕಲ್ಪನೆ ಹುಟ್ಟಿನಿಂದಲೇ ಬಂದಿದೆ. ಪರಸ್ಪರ ಸಹಕಾರ ತತ್ವದಿಂದ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬಹುದು. ಸಹಕಾರ ಸಂಸ್ಥೆಗಳ ಬೆಳವಣಿಗೆಯಿಂದ ಸಮುದಾಯದ ಆರ್ಥಿಕ ಅಭಿವೃದ್ಧಿ ಸಾಧ್ಯ. ಈ ವರ್ಷದ ಸಪ್ತಾಹದಲ್ಲಿ ಪರಿಸರ ಸಂರಕ್ಷಣೆಗೆ ಹಾಗೂ ಲಿಂಗ ಸಮಾನತೆಗೆ ಆದ್ಯತೆ ನೀಡಲಾಗಿದೆ. ಸಹಕಾರ ಸಂಘಗಳಲ್ಲಿ ಮಹಿಳೆಯರಿಗೆ ಆಡಳಿತದ ಅಧಿಕಾರ ದೊರೆಯಬೇಕು. ಸಹಕಾರ ತತ್ವಗಳನ್ನು ಸಂಸ್ಥೆಗಳಲ್ಲಿ ಆಳವಡಿಸಿಕೊಂಡರೆ ಯಶಸ್ಸು ಗಳಿಸಬಹುದಾಗಿದೆ ಎಂದರು.
ಕೆಎಂಎಫ್ ನಿರ್ದೇಶಕ ಬಿ.ಬಿ. ರವಿಕುಮಾರ ಮಾತನಾಡಿ, ತಾಲೂಕಿನಲ್ಲಿ 130 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಶಿಮೂಲ್ ವ್ಯಾಪ್ತಿಯ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಂಘ ತಾಲೂಕಿನಲ್ಲಿವೆ. ಡಿಸಿಸಿ ಬ್ಯಾಂಕ್ ಹಸು ಕೊಳ್ಳಲು ರೈತರಿಗೆ ಸಾಲ ಒದಗಿಸಬೇಕು. ಶಿಮುಲ್ನಲ್ಲಿ ನಿತ್ಯ 10 ಲಕ್ಷ ಲೀಟರ್ ಹಾಲು ಸಂಗ್ರಹಣೆ ಯಾಗುತ್ತಿದೆ. ಆದರೆ, ಮಾರಾಟವಾಗುತ್ತಿರುವುದು ಕೇವಲ 5 ಲಕ್ಷ ಲೀಟರ್. ಇಂತಹ ಸ್ಥಿತಿಯಲ್ಲಿ ನಿರ್ಹಹಣೆ ಮಾಡುವುದು ಕಷ್ಟ. ಹಾಲಿನ ದರ ಹೆಚ್ಚಾಗಿರುವ ಕುರಿತು ಟೀಕೆ ಮಾಡುವವರು ವಸ್ತು ಸ್ಥಿತಿ ತಿಳಿದು ಮಾತನಾಡಬೇಕು ಎಂದರು.