ಮಹಿಳಾ ಆಯೋಗದ ಅಧ್ಯಕ್ಷರ ಎದುರು ಸಮಸ್ಯೆಗಳನ್ನು ಹೇಳಿಕೊಂಡ ಜನರು

ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭೇಟಿ ನೀಡಿ ಪರಿಶೀಲಿಸಿದರು.
ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭೇಟಿ ನೀಡಿ ಪರಿಶೀಲಿಸಿದರು.
Published on
ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ವೈದ್ಯರಿಲ್ಲ. ಹೆರಿಗೆಗೆ ಬಂದರೆ ಕಾಸು ಕೇಳ್ತಾರೆ, ಕಾಸು ಕೊಡದಿದ್ರೆ ಕಾಯಿಸಿ ಕಾಯಿಸಿ ಕೊನೆಗೆ ಹೆರಿಗೆ ಮಾಡದೆ ಜಿಲ್ಲಾ ಆಸ್ಪತ್ರೆಗೆ ಹೋಗು ಅಂತಾರೆ, ಸ್ಕ್ಯಾನಿಂಗ್ ತಂತ್ರಜ್ಞರೂ ಇಲ್ಲಿಲ್ಲ...ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಸಮ್ಮುಖದಲ್ಲಿ ಅಳಲು ತೋಡಿಕೊಂಡರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶಿಡ್ಲಘಟ್ಟ ನಗರಕ್ಕೆ ಆಗಮಿಸಿದ್ದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದೇ ವೇಳೆ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡರು.
ಸಮಸ್ಯೆಗಳಿಂದ ಈ ಆಸ್ಪತ್ರೆಗೆ ಹೆರಿಗೆಗೆಂದು ಬರುವವರ ಸಂಖ್ಯೆಯೇ ತೀರಾ ಕಡಿಮೆ ಆಗಿದೆ. ನೂರಾರು ಸಂಖ್ಯೆಯಲ್ಲಿ ಹೆರಿಗೆ ಆಗುತ್ತಿದ್ದ ಇಲ್ಲಿ ಇದೀಗ ತಿಂಗಳಿಗೆ ಹತ್ತಿಪ್ಪತ್ತು ಹೆರಿಗೆಗಳು ಆದರೆ ಹೆಚ್ಚು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ಸರಿಯಾಗಿ ಸವಲತ್ತುಗಳು ಸಿಗದ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮಸ್ಯೆಗಳನ್ನು ಆಲಿಸಿದ ಅಧ್ಯಕ್ಷೆ ಡಾ.ನಾಗಲಕ್ಷೀ ಚೌದರಿ ಈ ಬಗ್ಗೆ ಆಡಳಿತ ವೈದ್ಯಾಧಿಕಾರಿ, ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೂಲು ಬಿಚ್ಚಾಣಿಕೆಯ ಕೂಲಿ ಕಾರ್ಮಿಕರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.‌
ಕುದಿಯುವ ಬಿಸಿ ನೀರಿನಲ್ಲಿ ಕೋಲು ಹಿಡಿದು ನೂಲು ತೆಗೆಯಬೇಕು, ಉರಿಯುವ ಸೌದೆಯ ಬಿಸಿ ಮುಂದೆ ಗಂಟೆ ಗಟ್ಟಲೇ ಕೂರಬೇಕು. ಬಿಸಿ, ಉರುವಿನಿಂದ ಬರುವ ಹೊಗೆ, ಧೂಳಿನಿಂದ ಮತ್ತು ಕುದಿಯುವ ರೇಷ್ಮೆ ಗೂಡಿನಿಂದ ಹೊರಹೊಮ್ಮುವ ಹಬೆಯಿಂದ ಉಸಿರಾಟದ ತೊಂದರೆ, ಕ್ಷಯ, ಆಸ್ತಮಾ, ಚರ್ಮ ರೋಗಗಳು, ರಕ್ತದ ಕೊರತೆಯ ಹತ್ತಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವುದಾಗಿ ಹೇಳಿಕೊಂಡರು. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಅಧ್ಯಕ್ಷರು ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net