

ಮೈಸೂರು: ಆಕಾಶದಿಂದ ಜಿನುಗುತ್ತಿದ್ದ ಮಳೆಹನಿಗಳು, ತಾಯಿ ಚಾಮುಂಡೇಶ್ವರಿಯ ನಾಮಸ್ಮರಣೆ, ಮೊಳಗಿದ ಜಯಘೋಷಗಳು, ಭಕ್ತಿಭಾವದಿಂದ ರಥದತ್ತ ಚಾಚಿದ ಕೈಗಳು... ಇಂತಹ ಭಕ್ತಿಪರವಶ ವಾತಾವರಣದಲ್ಲಿ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ರಥೋತ್ಸವವು ಶನಿವಾರ ಚಾಮುಂಡಿಬೆಟ್ಟದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ನೆರವೇರಿತು. ಮಳೆಯನ್ನೂ ಲೆಕ್ಕಿಸದೆ ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ತಾಯಿಯ ದರ್ಶನ ಪಡೆದು ಪುನೀತರಾದರು.
ಅಶ್ವಯುಜ ಶುಕ್ಲ ತ್ರಯೋದಶಿ, ಉತ್ತರಾಭಾದ್ರ ನಕ್ಷತ್ರದ ಶುಭ ಸಂದರ್ಭದಲ್ಲಿ ಬೆಳಗ್ಗೆ 7.55ರಿಂದ 8.15ರೊಳಗಿನ ಶುಭ ಮುಹೂರ್ತದಲ್ಲಿ ರಥೋತ್ಸವ ಜರುಗಿತು. ಮೈಸೂರು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕುಟುಂಬದ ಸದಸ್ಯರು ರಥೋತ್ಸವದಲ್ಲಿ ಭಾಗವಹಿಸಿ ತಾಯಿಯ ದರ್ಶನ ಪಡೆದರು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಥವನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ವೇಳೆ ಭಕ್ತರೂ ರಥದ ಹಗ್ಗ ಹಿಡಿದು ಎಳೆಯುವ ಮೂಲಕ ತಾಯಿಯ ಸೇವೆಯಲ್ಲಿ ಕೈಜೋಡಿಸಿದರು. ರಥೋತ್ಸವದಲ್ಲಿ ಪಾಲ್ಗೊಂಡು ರಥವನ್ನು ಎಳೆಯುವುದು ತಾಯಿಯ ಸೇವೆ ಮಾಡಿದ ಪುಣ್ಯ ಎಂಬ ಭಾವನೆಯೊಂದಿಗೆ ಭಕ್ತರು ಉತ್ಸಾಹದಿಂದ ಭಾಗವಹಿಸಿದರು. ರಥ ಸಾಗುತ್ತಿದ್ದಂತೆ ಮೊಳಗಿದ ‘ಚಾಮುಂಡೇಶ್ವರಿ ತಾಯಿಗೆ ಜಯವಾಗಲಿ’ ಎಂಬ ಜಯಘೋಷಗಳು ಬೆಟ್ಟದ ಪರಿಸರದಲ್ಲಿ ಭಕ್ತಿಯ ಸಂಚಲನ ಮೂಡಿಸಿದವು.
ರಾತ್ರಿಯಿಂದ ಬೆಳಗಿನವರೆಗೆ ನಗರದಲ್ಲಿ ಧಾರಾಕಾರವಾಗಿ ಸುರಿದ ಮಳೆ, ರಥೋತ್ಸವದ ವೇಳೆಯಲ್ಲಿಯೂ ಮುಂದುವರೆಯಿತು. ಆದರೆ, ಮಳೆಯು ಭಕ್ತರ ಉತ್ಸಾಹಕ್ಕೆ ತಡೆಯಾಗಲಿಲ್ಲ. ಕೆಲವರು ಛತ್ರಿ ಹಿಡಿದು ರಥೋತ್ಸವದಲ್ಲಿ ಪಾಲ್ಗೊಂಡರೆ, ಹಲವರು ಮಳೆಯಲ್ಲಿ ನೆನೆಯುತ್ತಲೇ ತಾಯಿಯ ರಥವನ್ನು ಕಣ್ತುಂಬಿಕೊಂಡರು. ಮಳೆಯ ಹನಿಗಳ ನಡುವೆ ಸಾಗಿದ ರಥವನ್ನು ಕಂಡ ಭಕ್ತರ ಮುಖದಲ್ಲಿ ಸಂತೃಪ್ತಿ, ಸಂಭ್ರಮ ಹಾಗೂ ಭಕ್ತಿಯ ಭಾವ ಎದ್ದು ಕಾಣುತ್ತಿತ್ತು.
ವಿವಿಧ ಬಣ್ಣಗಳ ಬಾವುಟಗಳಿಂದ ಅಲಂಕರಿಸಲಾಗಿದ್ದ ಬೃಹದಾಕಾರದ ರಥವು ವಿಶೇಷ ಆಕರ್ಷಣೆಯಾಗಿತ್ತು. ರಥದಲ್ಲಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾಯಿತು. ದೇವಿಯ ದರ್ಶನ ಪಡೆಯಲು ಕಾತರದಿಂದ ಕಾಯುತ್ತಿದ್ದ ಭಕ್ತರು ತಮ್ಮ ಬಳಿಗೆ ರಥ ಸಾಗಿ ಬಂದಾಗ ಕೈಮುಗಿದು ನಮಸ್ಕರಿಸಿ ಭಕ್ತಿಭಾವದಿಂದ ಪ್ರಾರ್ಥಿಸಿದರು.
ರಥೋತ್ಸವದ ಪ್ರಮುಖ ಸಂಪ್ರದಾಯವಾದ ತೇರಿನ ಮೇಲೆ ಹಣ್ಣು ಜವನ ಎಸೆಯುವ ಮೂಲಕ ಭಕ್ತರು ತಮ್ಮ ಹರಕೆಗಳನ್ನು ತೀರಿಸಿದರು. ತಾಯಿಯ ಕೃಪೆಯಿಂದ ಒಳಿತಾಗಲಿ, ಕುಟುಂಬದಲ್ಲಿ ಸುಖ-ಶಾಂತಿ ನೆಲೆಸಲಿ, ಕಷ್ಟಗಳು ದೂರವಾಗಿ ಬದುಕಿನಲ್ಲಿ ಸಮೃದ್ಧಿ ಮೂಡಲಿ ಎಂಬ ನಂಬಿಕೆಯೊಂದಿಗೆ ಭಕ್ತರು ಹಣ್ಣು ಜವನ ಅರ್ಪಿಸಿದರು. ರಥದತ್ತ ಹಣ್ಣು ಜವನ ಎಸೆಯುತ್ತಾ ತಾಯಿಗೆ ಕೈಮುಗಿದು ಪ್ರಾರ್ಥಿಸುವ ದೃಶ್ಯಗಳು ಭಕ್ತಿಯ ವಾತಾವರಣವನ್ನು ಮತ್ತಷ್ಟು ಹೆಚ್ಚಿಸಿದವು.
ರಥೋತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣದಲ್ಲಿ ಬೆಳಗ್ಗಿನಿಂದಲೇ ಸಹಸ್ರಾರು ಭಕ್ತರು ಜಮಾಯಿಸಿದ್ದರು. ತಾಯಿಯ ದರ್ಶನ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದರು. ದೇವಿಯ ದರ್ಶನದ ಬಳಿಕ ರಥೋತ್ಸವವನ್ನು ವೀಕ್ಷಿಸಿ, ರಥಕ್ಕೆ ನಮಸ್ಕರಿಸಿ ಭಕ್ತಿಭಾವ ಮೆರೆದರು. ಮಳೆ ಸುರಿಯುತ್ತಿದ್ದರೂ ಭಕ್ತರ ಆಗಮನ ನಿರಂತರವಾಗಿತ್ತು.
21 ಸುತ್ತು ಸಿಡಿಮದ್ದು ಸಿಡಿಸಿ ಗೌರವ:
ರಥ ಸಾಗುವ ಮಾರ್ಗದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ 21 ಸುತ್ತು ಸಿಡಿಮದ್ದು ಸಿಡಿಸಿ ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಗೌರವ ಸಲ್ಲಿಸಲಾಯಿತು. ಸಿಡಿಮದ್ದಿನ ಸದ್ದು, ಭಕ್ತರ ಜಯಘೋಷ, ರಥದ ಮೆರವಣಿಗೆ ಹಾಗೂ ದೇವಿಯ ದರ್ಶನಕ್ಕಾಗಿ ನೆರೆದಿದ್ದ ಜನಸಮೂಹ ಚಾಮುಂಡಿಬೆಟ್ಟದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.
ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದವು. ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ಬೆಳಗ್ಗಿನಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಧಾರ್ಮಿಕ ವಿಧಿವಿಧಾನಗಳ ಬಳಿಕ ರಥೋತ್ಸವ ಸಾಂಪ್ರದಾಯಿಕವಾಗಿ ಜರುಗಿತು.