

ಕೊಳ್ಳೇಗಾಲ: ಪಟ್ಟಣದ ಮಾನಸಾ ಶಿಕ್ಷಣ ಸಂಸ್ಥೆಯಿಂದ ಕೊಡಮಾಡುವ ಮನಸಾ ಪ್ರಶಸ್ತಿಯನ್ನು ಸರ್ವೋಚ್ಚ ನ್ಯಾಯಾಯದ ವಿಶ್ರಾಂತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರಿಗೆ ಪ್ರದಾನ ಮಾಡಲಾಯಿತು.
ಶಿಕ್ಷಣ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾನಸೋತ್ಸವ-2026 ಉದ್ಘಾಟನಾ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪುಸ್ಕರ ನೀಡಿ ಗೌರವಿಸಲಾಯಿತು.
ನ್ಯಾ.ಎನ್.ಸಂತೋಷ್ ಹೆಗ್ಡೆ ಮಾತನಾಡಿ, ಸಮಾಜದಲ್ಲಿ ಶಾಂತಿ, ಸೌಹರ್ದ ನೆಲೆಸಬೇಕಾದರೆ ತೃಪ್ತಿ ಮತ್ತು ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಲೋಕಾಯುಕ್ತಕ್ಕೆ ಬಂದ ಮೇಲೆಯೇ ನನಗೆ ಸಮಾಜದಲ್ಲಿ ಅನ್ಯಾಯದ ಪಿಡುಗು ಕಂಡಿದ್ದು. ಈ ಬಗ್ಗೆ ಚಿಂತಿಸಿದಾಗ ಇದು ವ್ಯಕ್ತಿಯ ತಪ್ಪಲ್ಲ, ಸಮಾಜದ ತಪ್ಪು ಎಂಬುದು ಅರಿವಾಯಿತು ಎಂದರು.
ಬಾಲ್ಯದಲ್ಲಿ ನಮ್ಮ ಗ್ರಾಮದಲ್ಲಿ ಸಾಮಾಜಿಕ ತಪ್ಪುಗಳನ್ನು ಮಾಡಿದವರನ್ನು ಸಮಾಜ ಬಹಿಷ್ಕರಿಸುತ್ತಿತ್ತು. ಪಾಲಕರು ಶಿಕ್ಷೆಗೆ ಗುರಿಯಾದವರ ಮನೆ ಕಡೆಗೆ ಹೋಗಬೇಡ ಎನ್ನುತ್ತಿದ್ದರು. ಒಂದು ಸಮಾಜ ದುಷ್ಟರನ್ನು ದೂರವಿಟ್ಟರೆ, ಪಕ್ಕದಲ್ಲಿದ್ದ ಮತ್ತೊಂದು ಸಮಾಜವೂಅದನ್ನು ಪಾಲಿಸುತ್ತಿತ್ತು. ಪ್ರಸ್ತುತ ಜೈಲಿಗೆ ಹೋಗಿ ಜಾಮೀನು ಪಡೆದು ಬಂದವರಿಗೆ ಹಾರ ಹಾಕಿ ಜೈಕಾರ ಹಾಕಲಾಗುತ್ತಿದೆ. ಈ ಸಮಾಜವನ್ನು ಬದಲಾಯಿಸಬೇಕು. ಉತ್ತಮ ಸಮಾಜ ಕಟ್ಟಬೇಕು. ಇದು ವಿದ್ಯಾರ್ಥಿಗಳಿಂದ ಸಾಧ್ಯವಾಗಿದೆ. ಕಾನೂನು ಚೌಕಟ್ಟಿನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡಿ ಶ್ರೀಮಂತರಾಗಿ. ಆದರೆ ಬೇರೊಬ್ಬರ ಜೇಬಿಗೆ ಕೈ ಹಾಕಿ ಶ್ರೀಮಂತರಾಗಬೇಡಿ ಎಂದು ಕಿವಿಮಾತು ಹೇಳಿದರು.
ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್ ಶೆಟ್ಟರ್ ಮಾತನಾಡಿ, ಪ್ರಸ್ತುತ ಶಿಕ್ಷಣ ಸಂಸ್ಥೆ ವ್ಯಾಪರೀಕರಣವಾಗಿಬಿಟ್ಟಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಮಾನಸಾ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ ವ್ಯಾಸಾಂಗ ಮಾಡುವ ಮಕ್ಕಳು ರಾಜ್ಯ ಮಟ್ಟದಲ್ಲಿ ರ್ಯಾಂಕ್ಗಳನ್ನು ಪಡೆಯುತ್ತಿರುವುದು ಗುಣಮಟ್ಟ ಶಿಕ್ಷಣಕ್ಕೆ ಸಾಕ್ಷಿ ಎಂದರು.
ಶಿಕ್ಷಣ ಸಂಸ್ಥೆಯ ಎಸ್.ದತ್ತೇಶ್ ಕುಮಾರ್ ಮಾತನಾಡಿ, ಸಂಸ್ಥೆಯ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುತ್ತಿದೆ. ಶಿಕ್ಷಣ ಉದ್ಯೋಗ, ಅಂಕಗಳಿಸಲು ಮಾತ್ರವಲ್ಲ. ಜೀವನ ದೃಷ್ಟಿ ಕೋನ, ಚಿಂತನೆ, ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂಬುದನ್ನು ಸಂಸ್ಥೆ ಕಲಿಸುತ್ತಿದೆ ಎಂದರು.
ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಶೀರ್ಚಚನ ನೀಡಿದರು. ಮೈಸೂರು ಧರ್ಮ ಪ್ರಾಂತ್ಯ ಬಿಷಪ್ ಅತಿ ವಂದನೀಯ ಬಿಷಪ್ ಡಾ.ಎಸ್.ಜೆ ಫ್ರಾನ್ಸಿಸ್ ಸೆರಾವೊ, ಸಾಹಿತಿ ಡಾ.ಹಂ.ಪ ನಾಗರಾಜಯ್ಯ, ಮಾಜಿ ಸಚಿವ ಎನ್.ಮಹೇಶ್ ಮಾತನಾಡಿದರು.
ಮೈ.ವಿ.ವಿ. ಪ್ರಾಚ್ಯ ವಿದ್ಯಾ ಸಂಶೋಧನಾಲಯ ವಿಶ್ರಾಂತ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ, ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು ಇದ್ದರು.