ಎಚ್.ಕೃಷ್ಣಸ್ವಾಮಿ ಸೇವೆ ಅನನ್ಯ

ಬಡ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ ಹೋರಾಟಗಾರ
ಕೊಳ್ಳೇಗಾಲದ ಶ್ರೀ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಎಚ್.ಕೃಷ್ಣಸ್ವಾಮಿ ಅವರ 22ನೇ ವರ್ಷದ ಪುಣ್ಯಸ್ಮರಣೆ  ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರೇಮಲತಾ ಕೃಷ್ಣಸ್ವಾಮಿ, ಎಚ್.ಕೆ.ಮಹಾನಂದ, ರಮೇಶ್ ಕುಮಾರ್, ದೇವೇಂದ್ರ, ಕೆ.ಆರ್.ಶಿವ, ಶಕ್ತಿವೇಲ್, ದಯಾನಂದ್, ನಾಗರಾಜು, ಮಂಜುನಾಥ್ ಇತರರು ಇದ್ದರು.
ಕೊಳ್ಳೇಗಾಲದ ಶ್ರೀ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ಎಚ್.ಕೃಷ್ಣಸ್ವಾಮಿ ಅವರ 22ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರೇಮಲತಾ ಕೃಷ್ಣಸ್ವಾಮಿ, ಎಚ್.ಕೆ.ಮಹಾನಂದ, ರಮೇಶ್ ಕುಮಾರ್, ದೇವೇಂದ್ರ, ಕೆ.ಆರ್.ಶಿವ, ಶಕ್ತಿವೇಲ್, ದಯಾನಂದ್, ನಾಗರಾಜು, ಮಂಜುನಾಥ್ ಇತರರು ಇದ್ದರು.
Published on

ಕೊಳ್ಳೇಗಾಲ: ವಿಶ್ವಚೇತನ ವಿದ್ಯಾಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ದಿ.ಎಚ್.ಕೃಷ್ಣಸ್ವಾಮಿ ಹುಟ್ಟು ಹೋರಾಟಗಾರರಾಗಿ ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಿಕ್ಷಣ ಸಂಸ್ಥೆ ಆರಂಭಿಸಿದರು ಎಂದು ಪ್ರಾಂಶುಪಾಲ ಬಿ.ಸಿ.ಮಹದೇವಯ್ಯ ಹೇಳಿದರು.

ಪಟ್ಟಣದ ಶ್ರೀ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಬುಧವಾರ ದಿ.ಎಚ್.ಕೃಷ್ಣಸ್ವಾಮಿ ಅವರ 22ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಚ್.ಕೃಷ್ಣಸ್ವಾಮಿ ಅವರು ಜೀವನವಿಡೀ ಸಮಾಜಮುಖಿ ಕಾರ್ಯದಲ್ಲೇ ತೊಡಗಿಸಿಕೊಂಡರು. ಬಡವರ, ನೊಂದವರ ಪರವಾಗಿ ಸದಾ ನಿಲ್ಲುತ್ತಿದ್ದರು ಎಂದು ಸ್ಮರಿಸಿದರು.

1985ರಲ್ಲಿ ಕೊಳ್ಳೇಗಾಲದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಆರಂಭದಲ್ಲಿ 75 ಮಕ್ಕಳಿಂದ ಆರಂಭವಾದ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾ ರ್ಥಿಗಳಿಗೆ ಜ್ಞಾನಾರ್ಜನೆ ನೀಡುವ ಮೂಲಕ ಭವಿಷ್ಯವನ್ನು ರೂಪಿಸಿದೆ. ಎಚ್.ಕೃಷ್ಣಸ್ವಾಮಿ ಅವರ ಕೆಲಸಗಳನ್ನು ಪತ್ನಿ ಪ್ರೇಮಲತಾ ಕೃಷ್ಣಸ್ವಾಮಿ, ಪುತ್ರ ಎಚ್.ಕೆ.ಮಹಾನಂದ ಅವರು ನಡೆಸುತ್ತಿದ್ದಾರೆ. ಸಾಮಾಜಿಕವಾಗಿ ಮಾಡಿದ ಕೆಲಸಗಳು ಇಂದಿಗೂ ಅವರನ್ನು ಜೀವಂತವಾಗಿರಿಸಿದೆ ಎಂದು ತಿಳಿಸಿದರು.

ಬೆಂಗಳೂರು ಸಿಸಿಬಿ ವಿಭಾಗದ ಎಸಿಪಿ ಎಚ್.ಕೆ.ಮಹಾನಂದ ಮಾತನಾಡಿ, ನನ್ನ ತಂದೆ ಎಚ್.ಕೃಷ್ಣಸ್ವಾಮಿ ಅವರ ಕನಸಿನಂತೆ ವಿಶ್ವ ಚೇತನ ಸಮೂಹ ಸಂಸ್ಥೆ ಈ ಭಾಗದ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ. ಎಚ್.ಕೆ.ಟ್ರಸ್ಟ್ ವತಿಯಿಂದಲೂ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರತಿ ತಿಂಗಳು ಆರೋಗ್ಯ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಮುಖಂಡ ನಾಗರಾಜು ಮಾತನಾಡಿ, ಎಚ್.ಕೃಷ್ಣಸ್ವಾಮಿ ಅವರು ಬುದ್ಧ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಹೋರಾಟವನ್ನು ನಡೆಸಿದರು. ಅವರು ಕಟ್ಟಿದ ಶಿಕ್ಷಣ ಸಂಸ್ಥೆಯಿಂದ ಭವಿಷ್ಯ ರೂಪಿಸಿಕೊಂಡ ಸಾವಿರಾರು ಜನರು ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮಕ್ಕೂ ಮೊದಲು ದಿವಂಗತ ಎಚ್.ಕೃಷ್ಣಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಲಾಯಿತು. ಬಳಿಕ ಎರಡು ನಿಮಿಷ ಮೌನ ಆಚರಣೆ ಮಾಡುವ ಮೂಲಕ ಸ್ಮರಿಸಲಾಯಿತು.

ಎಚ್.ಕೆ.ಕೃಷ್ಣಸ್ವಾಮಿ ಪತ್ನಿ ಪ್ರೇಮಲತಾ ಕೃಷ್ಣಸ್ವಾಮಿ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್ ಕುಮಾರ್, ಸಂಗೀತ ನಿರ್ದೇಶಕ ಕೆ.ಆರ್.ಶಿವ, ಶಕ್ತಿವೇಲ್, ದಯಾನಂದ್, ಶ್ರೀನಿವಾಸ್, ನಗರಸಭೆ ಮಾಜಿ ಉಪಾಧ್ಯಕ್ಷ ಹರ್ಷ, ಮಾಜಿ ಸದಸ್ಯ ಮಂಜುನಾಥ್, ಶಿವ ಡ್ರಗ್‌ಹೌಸ್ ಮಾಲೀಕ ಶಿವಾನಂದ್, ಅರವಿಂದ ಕಣ್ಣಿನ ಆಸ್ಪತ್ರೆ ಸಂಯೋಜಕ ವಿಜಯ್ ಕುಮಾರ್, ಬಸಲಿಂಗಪ್ಪ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಟರಾಜು, ಮುಖಂಡ ನಾಗರಾಜು, ಪ್ರಭುಸ್ವಾಮಿ, ವಿಶ್ವಚೇತನ ಸಂಸ್ಥೆ ವ್ಯವಸ್ಥಾಪಕ ರವಿತೇಜ, ಸಂಯೋಜಕ ಜಗದೀಶ್, ರಾಜೇಶ್ ಇತರರು ಇದ್ದರು.

ಸ್ವಯಂ ಪ್ರೇರಿತರಾಗಿ 43 ಜನರಿಂದ ರಕ್ತದಾನ

ದಿ.ಎಚ್ ಕೃಷ್ಣಸ್ವಾಮಿ ಅವರ 22ನೇ ಪುಣ್ಯಸ್ಮರಣೆ ಅಂಗವಾಗಿ ಕೊಳ್ಳೇಗಾಲದ ರೋಟರಿ ಮಿಡ್‌ಟೌನ್, ಎಚ್.ಕೆ.ಟ್ರಸ್ಟ್, ವಿಶ್ವ ಚೇತನ ಸಮೂಹ ವಿದ್ಯಾಸಂಸ್ಥೆ, ಬಸವ ರಾಜೇಂದ್ರ ರಕ್ತನಿಧಿ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಬೆಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ದೇವೇಂದ್ರ ಚಾಲನೆ ನೀಡಿದರು. ರಕ್ತ ಶಿಬಿರದಲ್ಲಿ ಸ್ವಯಂ ಪ್ರೇರಿತವಾಗಿ 43 ಜನರು ರಕ್ತದಾನ ಮಾಡಿದರು. ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ 568 ಜನರು ಪರೀಕ್ಷೆಗೆ ಒಳಪಟ್ಟಿದ್ದು ಇವರಲ್ಲಿ 36 ಜನರನ್ನು ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net