ಖಾಸಗಿ-ಸಾರಿಗೆ ಬಸ್ ನಡುವೆ ಡಿಕ್ಕಿಯಾಗಿ ಏಳು ಜನರಿಗೆ ಗಾಯ

ಮಲೆಮಹದೇಶ್ವರ ಬೆಟ್ಟ-ತಾಳುಬೆಟ್ಟ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವುದು.
ಮಲೆಮಹದೇಶ್ವರ ಬೆಟ್ಟ-ತಾಳುಬೆಟ್ಟ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿರುವುದು.
Published on
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ತಾಳುಬೆಟ್ಟದ ಮಾರ್ಗದಲ್ಲಿ ಶುಕ್ರವಾರ ಖಾಸಗಿ ಹಾಗೂ ಸಾರಿಗೆ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಚಾಲಕರು, ನಿರ್ವಾಹಕ ಸೇರಿದಂತೆ 7 ಜನರು ಗಾಯಗೊಂಡಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹನುಮಂತಪ್ಪ ಫಕೀರಪ್ಪ (50), ನಿರ್ವಾಹಕ ವೆಂಕಟೇಶ್ (56), ಖಾಸಗಿ ಬಸ್ ಚಾಲಕ ಚಂದ್ರಶೇಖರ್ (36) ಹಾಗೂ ಪ್ರಯಾಣಿಕರಾದ ರಾಮನಗರದ ದತ್ತರಾಜು (37), ಸ್ವಾಮಿ (27) ಅಭಿಷೇಕ್ (20), ತಲಕಾಡಿನ ಕಾಳಿಹುಂಡಿಯ ತಳವಾರ್ (65) ಗಾಯಗೊಂಡವರು.
ಮಧ್ಯಾಹ್ನ ಸುಮಾರು 11.30ರ ವೇಳೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕೊಳ್ಳೇಗಾಲದಿಂದ ಮ.ಬೆಟ್ಟಕ್ಕೆ ತೆರಳುತ್ತಿತ್ತು. ಈ ವೇಳೆ ತಾಳುಬೆಟ್ಟ ಮಾರ್ಗದ ಹಾಲರವಿಹಳ್ಳ ಕಿರು ಸೇತುವೆಯ ತಿರುವಿನಲ್ಲಿ ಎದುರು ಬಂದ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಇಬ್ಬರು ಚಾಲಕರು ಸೇರಿದಂತೆ 7 ಜನರು ಗಾಯಗೊಂಡರು. ಬಳಿಕ ಸ್ಥಳೀಯರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಕೊಳ್ಳೇಗಾಲ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಿಕೊಟ್ಟು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಅಭಿಷೇಕ್, ಸ್ವಾಮಿ, ತಳವಾರ್ ಅವರನ್ನು ಹೊರತುಪಡಿಸಿ ತೀವ್ರವಾಗಿ ಗಾಯಗೊಂಡಿದ್ದ ನಾಲ್ವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕಾಗಮಿಸಿದ ಇನ್‌ಸ್ಪೆಕ್ಟರ್ ಜಗದೀಶ್ ಅವರು ಪರಿಶೀಲನೆ ನಡೆಸಿದರು. ರಾಮಾಪುರ ಇನ್‌ಸ್ಪೆಕ್ಟರ್ ಚಿಕ್ಕರಾಜಶೆಟ್ಟಿ ಹಾಗೂ ಸಿಬ್ಬಂದಿ ಜತೆಗೂಡಿ ಎರಡು ಗಂಟೆಗಳವರೆಗೆ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಮ.ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net