ಸಣ್ಣಪುಟ್ಟ ನೂನ್ಯತೆಗಳಿದ್ದರೆ ಸರಿಪಡಿಸಿಕೊಳ್ತೇವೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿಕೆ

07_01_Mdy_03(A(Minister N.Cheluvarayaswamy)
Published on

ಮಂಡ್ಯ: ಎಲ್ಲ ಸಮಾಜಕ್ಕೂ ನ್ಯಾಯ ಕೊಡಿಸುವ ಕೆಲಸ ಜಾತಿಗಣತಿಯಿಂದ ಆಗಲಿದೆ. ಒಬ್ಬರಿಗೆ ನ್ಯಾಯ, ಮತ್ತೊಬ್ಬರಿಗೆ ಅನ್ಯಾಯವಾಗುವ ಪ್ರಶ್ನೆ ಇಲ್ಲ. ಒಂದು ವೇಳೆ ಸಣ್ಣಪುಟ್ಟ ನೂನ್ಯತೆ ಇದ್ದರೇ ಸಚಿವ ಸಂಪುಟದಲ್ಲಿಯೇ ತೀರ್ಮಾನಿಸಿ ಸರಿಪಡಿಸಿಕೊಳ್ಳುತ್ತೇವೆ. ವಿರೋಧ ಪಕ್ಷದವರು ರಾಜಕೀಯವಾಗಿ ಈ ವಿಷಯವನ್ನು ಬಳಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಾರೂ ಕೋಟಿ ರೂ ಖರ್ಚು ಮಾಡಿ ಜಾತಿ ಗಣತಿ ಮಾಡಿದೆ. ಆದರೂ ವರದಿ ಬಿಡುಗಡೆ ಮಾಡಲಿಲ್ಲವೆಂದು ಜೆಡಿಎಸ್ ಮತ್ತು ಬಿಜೆಪಿ ದೂರುತ್ತಿದ್ದರು. ಈಗ ನಮ್ಮ ಸರ್ಕಾರ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡಿಸಲಿದೆ. ನಮಗೆ ಒಂದು ಪ್ರತಿಯನ್ನೂ ಕೊಟ್ಟಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಆ ಕುರಿತು ಚರ್ಚೆ ಮಾಡುತ್ತೇವೆ. ಅದಕ್ಕಿಂತ ಮುಂಚೆಯೇ ಬಿಜೆಪಿ ಮತ್ತು ಜೆಡಿಎಸ್ ವಿರೋಧ ಸರಿಯಲ್ಲ. ಇದು ಮಗು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತೆ ಬಿಜೆಪಿ ಮಾತಾನಾಡುತ್ತಿದೆ ಎಂದರು.

ಜಾತಿಗಣತಿಯಿಂದ ಸಮಾಜ ಒಡೆಯುವ ಕೆಲಸವನ್ನು ರಾಜ್ಯಸರ್ಕಾರ ಮಾಡುತ್ತಿದೆ ಎನ್ನುವ ಜೆಡಿಎಸ್, ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಸಿಆರ್‌ಎಸ್, ಪಾಪ ಅವರಿಗೆ ಏನೂ ಸಿಗುತ್ತಿಲ್ಲ, ಇನ್ನೇನೂ ಮಾಡುತ್ತಾರೆ. ಮೀನು ಕೈ ಜಾರಿ ಹೋದಂತೆ ಬಿಜೆಪಿಗೆ ಯಾವ ವಿಚಾರವೂ ಸಿಗುತ್ತಿಲ್ಲ. ಬಿಜೆಪಿಯವರನ್ನ ನೋಡಿದರೆ ನನಗೆ ಹೊಟ್ಟೆ ಉರಿಯುತ್ತದೆ. ಸ್ವಾಮೀಜಿಗಳಿಗೆ ವರದಿ ಕೈ ತಲುಪಿಲ್ಲ. ಜಾತಿಗಣತಿ ವರದಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಊಹಾಪೋಹದಿಂದ ಕೆಲವರು ಮಾತನಾಡುತ್ತಿದ್ದಾರೆ. ನಮ್ಮ ಸರ್ಕಾರ, ನಮ್ಮ ಪಕ್ಷ ಯಾವ ಸಮುದಾಯಕ್ಕೂ ಅನ್ಯಾಯವಾಗಲು ಬಿಡಲ್ಲ. ವರದಿ ಸಚಿವ ಸಂಪುಟದಲ್ಲಿ ಮಂಡನೆ ಆಗಿದೆ, ಇನ್ನೂ ಅಂಗೀಕಾರವಾಗಿಲ್ಲ. ಬಳಿಕ ಎಲ್ಲರೂ ಅದರ ಬಗ್ಗೆ ಚರ್ಚೆ ಮಾಡಲಿ ಎಂದು ಹೇಳಿದರು.

ಮುಸ್ಲಿಂರಿಗೆ ಮೀಸಲಾತಿ ನೀಡಿ ಉಳಿದ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆನ್ನುವ ಟೀಕೆಗೆ ಉತ್ತರಿಸಿದ ಎನ್.ಚಲುವರಾಯಸ್ವಾಮಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಕೆ ಮುಸ್ಲಿಂರಿಗೆ ಕಿಟ್ ಕೊಟ್ಟರು. ನಮ್ಮದು ಜ್ಯಾತ್ಯಾತೀತ ರಾಷ್ಟ್ರ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು ಕಾಂಗ್ರೆಸ್ ಪಕ್ಷ. ಅದನ್ನ ಬಿಟ್ಟು ಮಾಡಿದರೆ ಮೋದಿ ಮಾಡಲಿ. ಹಿಂದುತ್ವದ ಹೆಸರು ಹೇಳಿ ಜನರನ್ನ ಮರಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಮುಸ್ಲಿಂರಿಗೆ ಶೇ.4ರಷ್ಟು ಮೀಸಲಾತಿ ಕೊಟ್ಟಿದ್ದೆ ದೇವೇಗೌಡರು. ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿಯೇ ಹುಟ್ಟಬೇಕು ಎಂದಿದ್ದರು. ಇವತ್ತು ಮುಸ್ಲಿಂರು ದೂರ ಆಗ್ಬಿಟ್ಟಿದ್ದಾರಾ?. ಇಲ್ಲೊಂದು, ಅಲ್ಲೊಂದು ಮಾತಾಡುತ್ತಾರೆ ಎಂದು ಹರಿಹಾಯ್ದರು.

ಕುಮಾರಸ್ವಾಮಿ ಮತ್ತು ಚಲುವರಾಯಸ್ವಾಮಿ ಆಣೆ ಪ್ರಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಣೆ ಮಾಡಲು ನನ್ನ ಜತೆಯೇ ಬರಬೇಕೆಂದು ನಾನು ಹೇಳಿಲ್ಲ. ಧರ್ಮಸ್ಥಳದ ಮಂಜುನಾಥನಾ ಹೆಸರು ಹೇಳಿ ಅವರು ಏನು ಹೇಳುತ್ತಾರೆ ಹೇಳಲಿ. ಅದಕ್ಕಿಂತ ಹೆಚ್ಚು ಆಣೆ ಏನು ಇಲ್ಲ. ಅವರು ಹಾಗೆ ಹೇಳಿದರೆ ನಾನು ಬದ್ಧನಾಗುತ್ತೇನೆ. ಕುಮಾರಸ್ವಾಮಿ ಅವರು ಹಿಟ್ ಆ್ಯಂಡ್ ರನ್ ರೀತಿ. ಮಾಜಿ ಸಿಎಂ, ಕೇಂದ್ರ ಸಚಿವರು ಗೌರವಯುತವಾಗಿ ನಡೆದುಕೊಳ್ಳಬೇಕು. ಇವರೆಲ್ಲ ನನ್ನ ಮಗನನ್ನು ಸಿಎಂ ಮಾಡಿ ಅಡ್ಡದಾರಿಗೆ ಎಳೆದರೆಂದು ದೇವೇಗೌಡರು ಹೇಳುತ್ತಿದ್ದರು. ಇವರು ನೋಡಿದರೆ ಹೀಗೆ ಹೇಳುತ್ತಿದ್ದಾರೆ. ಆಗಿದ್ದರೆ ನಾವು ಎಳೆ ಮಕ್ಕಳ ಹಾಲು ಕುಡಿತಾ ಇದ್ವಾ?. ಅಧಿಕಾರ ಅನುಭವಿಸುವಾಗ ಚೆನ್ನಾಗಿ ಇತ್ತು, ಈಗ ಚೆನ್ನಾಗಿ ಇಲ್ವಾ ಎಂದು ವ್ಯಂಗ್ಯವಾಡಿದರು.

ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯಲ್ಲಿ ಮತಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ಈ ಬಗ್ಗೆ ಮಾಹಿತಿ ಬಂದಿಲ್ಲ. ಬಲವಂತವಾಗಿ ಯಾರು ಯಾರನ್ನು ಮತಾಂತರ ಮಾಡುವಂತಿಲ್ಲ. ನಾನು ಈ ಬಗ್ಗೆ ಡಿಸಿ, ಎಸ್ಪಿಗೆ ಸೂಚನೆ ನೀಡುತ್ತೇನೆ. ಆ ರೀತಿ ಇದ್ದರೆ ಆ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ವೈಯಕ್ತಿಕವಾಗಿ ಅವರಾಗಿ ಅವರೇ ಮತಾಂತರ ಬೇಕಿದರೆ ಆಗಬಹುದು. ಬಲವಂತವಾಗಿ ಮತಾಂತರ ಮಾಡಲು ಅವಕಾಶವಿಲ್ಲ. ಹಿರಿಯ ನಟ ಬ್ಯಾಂಕ್ ಜನಾರ್ದನ್ ಅವರ ಸಾವಿಗೆ ಸಂತಾಪ ಸೂಚಿಸುತ್ತೇನೆ. ನಟರಾಗಿ ಕನ್ನಡ ಕಲಾಭಿಮಾನಿಗಳ ಹೃದಯ ಗೆದ್ದರು. ಅವರ ಶತ್ಮಕ್ಕೆ ಶಾಂತಿ ದೊರಕಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net