ಬಿಜೆಪಿಯಲ್ಲಿ ವಿಪಕ್ಷ ನಾಯಕರ ಬದಲಾವಣೆಯಂತೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

07_01_Mdy_03(A(Minister N.Cheluvarayaswamy)
Published on

ಮಂಡ್ಯ: ಕೆ.ಎನ್.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಏಕೆ ಕೈಬಿಡಲಾಗಿದೆ ಎಂಬುದು ನಮ್ಮ ಪಕ್ಷಕ್ಕೆ ಗೊತ್ತಿದೆ. ರಾಜಣ್ಣ ನಾವು ಎಲ್ಲರೂ ಚೆನ್ನಾಗಿ ಇದ್ದೇವೆ. ಜತೆಗೆ ನಮ್ಮ ಹೈಕಮಾಂಡ್ ಚೆನ್ನಾಗಿದೆ. ಬಿಜೆಪಿಯವರು ಮೊದಲು ಅವರ ಒಳ ಜಗಳ ಸರಿಪಡಿಸಿಕೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ರಾಜಣ್ಣ ವಿಚಾರವನ್ನೇ ಬಿಜೆಪಿ ಅಸ್ತ್ರ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಪರಿಸ್ಥಿತಿ ಸಧ್ಯಕ್ಕೆ ಚೆನ್ನಾಗಿಲ್ಲ. ಅವರಿಗೆ ತೆಗೆದುಕೊಳ್ಳಲು ಗಂಭೀರ ಪ್ರಕರಣ ಯಾವುದು ಇಲ್ಲ. ಅದಕ್ಕಾಗಿ ರಾಜಣ್ಣ ವಿಚಾರ ತೆಗೆದುಕೊಂಡಿದ್ದಾರೆ. ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕರನ್ನು ಬದಲಾವಣೆ ಮಾಡುತ್ತಾರಂತೆ. ಮೊದಲು ಅವರು ಸರಿ ಪಡಿಸಿಕೊಳ್ಳಲಿ ಎಂದರು.

ಕೆ.ಎನ್.ರಾಜಣ್ಣ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನ ಯಾರಿಗೆ ಕೊಡುತ್ತಾರೋ ಗೊತ್ತಿಲ್ಲ. ಹೈಕಮಾಂಡ್ ಎಲ್ಲ ತೀರ್ಮಾನ ಮಾಡಲಿದೆ. ಮಂಡ್ಯ ಜಿಲ್ಲೆಗೆ ಸಿಗಲಿ ಎಂಬುದು ನಮಗೆ ಆಸೆ ಇದೆ. ಪಿ.ಎಂ.ನರೇಂದ್ರಸ್ವಾಮಿ ಅವರು ಸಚಿವರಾಗಬೇಕೆಂದು ನಾವು ಕೇಳಿದ್ದೇವೆ. ಅಂತೆಯೇ ನರೇಂದ್ರಸ್ವಾಮಿ ಸಚಿವರಾಗಬೇಕೆಂದು ಆಸೆ ಪಡುತ್ತೇವೆ ಎಂದು ಹೇಳಿದರು.

ರಸಗೊಬ್ಬರ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯಕ್ಕೆ ರಸಗೊಬ್ಬರ ಕಡಿಮೆ ಸರಬರಾಜು ಆಗಿರುವುದು ಸತ್ಯ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ವಿಡಿಯೋ ಕಾನ್ಫರೆನ್ಸ್ ಮಾಡಿದ್ದರು. ರಾಜ್ಯದ ಎಲ್ಲ ಸಚಿವರು ಭಾಗಿಯಾಗಿದ್ದರು. ದೇಶದ ಎಲ್ಲ ರಾಜ್ಯಗಳಿಗೂ ರಸಗೊಬ್ಬರ ಕಡಿಮೆ ಸರಬರಾಜು ಆಗಿದೆ. ಇದಕ್ಕೆ ನೇರ ಕಾರಣ ಕೇಂದ್ರ ಸರ್ಕಾರ ಆಗಿದೆ. ನಮಗೆ ಕಡಿಮೆ ಸರಬರಾಜು ಆಗಿದ್ದರೂ ನಿರ್ವಹಣೆ ಮಾಡುತ್ತಿದ್ದೇವೆ. ಈ ಹಿಂದೆ ಗೋಲಿಬಾರ್ ಆಗಿದೆ. ಆದರೀಗ ಬಿಜೆಪಿ ಅವರು ಇದನ್ನು ರಾಜಕೀಯವಾಗಿ ಬಳಕೆ ಮಾಡುತ್ತಿದ್ದಾರೆ. ಮುಂಗಾರು ಬೇಗ ಆರಂಭವಾಗಿರುವ ಕಾರಣ ರೈತರು ಗೊಬ್ಬರ ಕೇಳುತ್ತಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾವು ಮನವರಿಕೆ ಮಾಡಿದ್ದೇವೆ ಎಂದರು.

ನಟ ದರ್ಶನ್‌ಗೆ ನೀಡಿದ್ದ ಜಾಮೀನು ರದ್ದು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನ್ಯಾಯಾಲಯದ ತೀರ್ಮಾನಕ್ಕೆ ಎಲ್ಲರೂ ತಲೆ ಭಾಗಬೇಕು. ಮಾಜಿ ಸಂಸದ ಪ್ರಜ್ವಲ್‌ಗೆ ಏನು ಶಿಕ್ಷೆ ಆಗಲ್ಲವೆಂದು ಜನರು ಮಾತನಾಡುತ್ತಿದ್ದರು. ಮಾಜಿ ಪ್ರಧಾನಿ, ಮಾಜಿ ಸಿಎಂ ಕುಟುಂಬದವರಾಗಿರುವುದರಿಂದ ಏನು ಕ್ರಮವಾಗಲ್ಲ ಎನ್ನುತ್ತಿದ್ದರು. ಆದರೀಗ ನ್ಯಾಯಾಲಯ ತೀರ್ಪುನ್ನು ಕೊಟ್ಟಿದೆ. ನಟ ದರ್ಶನ್ ವಿಚಾರದಲ್ಲೂ ಅದೇ ಇತ್ತು. ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದೆ. ಕೊಲೆ ಆಗಿದೆಯೋ, ಇಲ್ಲವೋ ಕೋರ್ಟ್ ತೀರ್ಮಾನ ಮಾಡಲಿದೆ. ಹಿಂದೆ ಜಾಮೀನು ಕೊಟ್ಟಿರುವುದು ಸರಿಯಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ ನ್ಯಾಯಾಲಯದ ಸೂಕ್ತ ತೀರ್ಪು ನೀಡಲಿದೆ ಎನ್ನುವ ಭರವಸೆ ಉಳಿಸಿಕೊಂಡಿದೆ ಎಂದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೋರ್ಟ್ ಆದೇಶದ ಮೇರೆಗೆ ಎಸ್‌ಐಟಿ ತನಿಖೆ ಆಗುತ್ತಿದೆ. ಅನಾಮಿಕನ ದೂರಿನ ಅನ್ವಯ ಈ ತನಿಖೆ ಆಗುತ್ತಿದೆ. ಅಧಿಕಾರದಲ್ಲಿ ಇದ್ದಾಗ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ನಮ್ಮ ಸರ್ಕಾರಕ್ಕೆ ಧರ್ಮಸ್ಥಳ ಹಾಗೂ ಅಲ್ಲಿನ ಮಾಲೀಕರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ನಮಗೆ ಧರ್ಮಸ್ಥಳದ ಬಗ್ಗೆ ಗೌರವವಿದೆ ಎಂದು ಹೇಳಿದರು.

ಶಾಸಕ ರವಿಕುಮಾರ್ ಗಣಿಗ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಶುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಆಹಾರ ಆಯೋಗದ ಅಧ್ಯಕ್ಷ ಡಾ.ಕೃಷ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net