ಆರಾಧನೆಯಿಂದ ಸಂಕಷ್ಟಗಳು ದೂರ

15 KAMPLI 03
Published on

ಕಂಪ್ಲಿ: ಪಾಂಡುರಂಗ-ರುಕ್ಮಿಣಿಯನ್ನು ಅನನ್ಯ ಭಕ್ತಿಯಿಂದ ಆರಾಧಿಸಿದಲ್ಲಿ ಸಂಕಷ್ಟಗಳಿಂದ ಪಾರಾಗಲು ಸಾಧ್ಯ ಎಂದು ಪಂಡರಾಪುರದ ಚೈತನ್ಯ ಸದ್ಗುರು ಶ್ರೀಗೋಪಾಲಣ್ಣಾ ವಾಸಕರ ಮಹಾರಾಜ ಹೇಳಿದರು.

ಪಟ್ಟಣದ ಬೆಳಗೋಡ್‌ಹಾಳ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಶಿಲಾ ಮಂದಿರದಲ್ಲಿ ಶ್ರೀರುಕ್ಮಿಣಿ-ಪಾಂಡುರಂಗ ಸೇವಾ ಟ್ರಸ್ಟ್‌ನಿಂದ ಶ್ರೀ ಗಣಪತಿ ಸಮೇತ ಶ್ರೀ ಚಂದ್ರಮೌಳೇಶ್ವರ, ಶ್ರೀ ರುಕ್ಮಿಣಿ ಪಾಂಡುರಂಗ, ಸಂತಶ್ರೇಷ್ಠ ಜ್ಞಾನೇಶ್ವರ ಮಹಾರಾಜರು, ಸಂತ ತುಕರಾಮ ಮಹಾರಾಜರ ನೂತನ ಶಿಲಾಪ್ರತಿಮೆಗಳಿಗೆ ಭಾನುವಾರ ಪ್ರಾಣ ಪ್ರತಿಷ್ಠಾಪನೆಗೊಳಿಸಿ ಆಶೀರ್ವಚನ ನೀಡಿದರು.

ದುಶ್ಚಟಗಳಿಂದ ದೂರವಿದ್ದು, ನಂಬಿದ ಕಾಯಕವನ್ನು ಸತ್ಯ, ನಿಷ್ಠೆಯಿಂದ ನೆರವೇರಿಸಬೇಕು. ಕುಟುಂಬದಲ್ಲಿ ಎಲ್ಲರೊಂದಿಗೆ ಸಾಮರಸ್ಯದಿಂದ ಜೀವಿಸುತ್ತ, ನೆರೆ-ಹೊರೆಯವರೊಂದಿಗೆ ವಿಶ್ವಾಸಿಗರಾಗಿ ನಡೆದುಕೊಳ್ಳಬೇಕು. ಪಾಂಡುರಂಗ-ರುಕ್ಮಿಣಿ ಸತ್ಸಂಗ, ಭಜನೆ, ಕೀರ್ತನೆಗಳಲ್ಲಿ ತೊಡಗಿಕೊಳ್ಳುವಂತೆ ಸದ್ಭಕ್ತರಿಗೆ ಹೇಳಿದರು.

ಪಂಚಾಮೃತ ಅಭಿಷೇಕ, ಪ್ರತಿಷ್ಠಾಹೋಮ, ಸುದರ್ಶನ ಹೋಮ, ಸಾಮೂಹಿಕ ಭಜನಾ, ಸಂಕೀರ್ತನೆ ಸೇರಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಮಸಾಗರದ ಜೋಷಿ ವಾಜೇಂದ್ರಾಚಾರ್ ಪೌರೋಹಿತ್ಯ ನಡೆಸಿದರು. ಸೇವಾ ಟ್ರಸ್ಟ್ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net