ಜಾತಿ ಜನಗಣತಿ ಮರು ಸಮೀಕ್ಷೆ: ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸಂತಸ

Census
Published on

ಬೆಂಗಳೂರು: ಅವೈಜ್ಞಾನಿಕ ಜಾತಿ ಜನಗಣತಿ ವರದಿಯನ್ನು ತಿರಸ್ಕರಿಸಿ ಮರು ಸರ್ವೇಗೆ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಸ್ವಾಗತಿಸಿದೆ.

ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯರಾಗಿದ್ದ ಕಾಂತರಾಜು ಅವಧಿಯಲ್ಲಿ ಸಿದ್ದಪಡಿಸಲಾಗಿದ್ದ ಈ ವರದಿ ಅವೈಜಾನಿಕವಾಗಿತ್ತು. ವರದಿ ತಯಾರಿಸಿ 9 ವರ್ಷವಾಗಿತ್ತು. 10 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸಬೇಕೆಂಬ ನಿಯಮ ಇರುವುದರಿಂದ ವರದಿ ಅಪ್ರಸ್ತುತವಾಗಿತ್ತು. 9 ವರ್ಷದಲ್ಲಿ ಸಮಾಜದಲ್ಲಿ ಹಲವು ಬದಲಾವಣೆಗಳಾಗಿತ್ತು. ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಯ ನೈಜ ಸ್ಥಿತಿಗತಿಯನ್ನು ವರದಿ ಬಿಂಬಿಸುವುದಿಲ್ಲ. ಆದ್ದರಿಂದ, ನಿಖರ ದತ್ತಾಂಶ ಪಡೆದು ಹೊಸದಾಗಿ ಜಾತಿಗಣತಿ ವರದಿ ತಯಾರಿಸುವುದು ಸೂಕ್ತ ಎಂದು ರಾಜ್ಯ ಒಕ್ಕಲಿಗರ ಸಂಘ ಸೇರಿ ಸಮಿತಿ ನಿರಂತರವಾಗಿ ಹೋರಾಟ ನಡೆಸಿತ್ತು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂಥನಾಥ ಸ್ವಾಮೀಜಿ, ತುಮಕೂರಿನ ಸ್ಫಟಿಕಪುರಿ ಮಹಾಸಂಸ್ಥಾನದ ಶ್ರೀ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಿರಂತರವಾಗಿ ಹೋರಾಟ ಮಾಡಲಾಗಿತ್ತು. ಹೋರಾಟ ಫಲವಾಗಿ ಸರ್ಕಾರ ಮರು ಸರ್ವೇ ಮಾಡುವುದಕ್ಕೆ ಮುಂದಾಗಿರುವುದು ನಮಗೆ ಸಂದ ಜಯವಾಗಿದೆ. ಹೀಗಾಗಿ, ಸಮುದಾಯದ ಮಂತ್ರಿಗಳಿಗೆ, ಜನಪ್ರತಿನಿಧಿಗಳಿಗೆ, ಸಂಘ ಸಂಸ್ಥೆಗಳಿಗೆ ಸಮಿತಿ, ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net