

ಶಿವಮೊಗ್ಗ: ಹುಬ್ಬಳ್ಳಿ ಗಲಭೆ ಆರೋಪಿಗಳನ್ನು ಅಮಾಯಕರೆಂದು ಕೇಸ್ ಹಿಂಪಡೆದಿರುವುದು ಸರಿಯಲ್ಲ. ರಾಜ್ಯ ಸರ್ಕಾರ ಮುಸ್ಲಿಮರ ತುಷ್ಟೀಕರಣಕ್ಕೆ ಮುಂದಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.
2022ರಲ್ಲಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕಲ್ಲು ತೂರಿ, ವಾಹನಗಳಿಗೆ ಮತ್ತು ಠಾಣೆಗೆ ಬೆಂಕಿ ಹಚ್ಚಿದ್ದ ಗಲಭೆಕೋರರಿಗೆ ಸುಪ್ರೀಂ ಕೊರ್ಟ್‌ನಲ್ಲೂ ಜಾಮೀನು ಸಿಗದಂತೆ ಪ್ರಕರಣ ದಾಖಲಿಸಲಾಗಿತ್ತು. ಆದರೆ ಇದೀಗ ಕೇಸ್‌ಗಳನ್ನು ಹಿಂಪಡೆದಿರುವ ಕಾಂಗ್ರೆಸ್ ಸರ್ಕಾರಕ್ಕೆ ಭಯೋತ್ಪಾದಕರು ಅಮಾಯಕರಂತೆ ಕಾಣುತ್ತಿದ್ದಾರೆ. ಅಮಾಯಕರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಒಂದು ಕಾನೂನು ಇದ್ದರೆ, ಉಳಿದವರಿಗೊಂದು ಕಾನೂನಾಗಿದೆ. ವಿಧ್ವಂಸಕಾರಿ ಕೃತ್ಯಗಳನ್ನು ನಡೆಸಿದ ಎರಡು ವರ್ಷಗಳ ನಡುವೆ ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಕಾನೂನು ವಿರೋಧಿ ಕಾರ್ಯ ಮಾಡುತ್ತಿರುವುದು ಅಕ್ಷಮ್ಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡ ಮೇಲೆ ಸಚಿವ ಸಂಪುಟ ಗಲಭೆ ಪ್ರಕರಣವನ್ನೇ ರದ್ದುಗೊಳಿಸುತ್ತದೆ ಎಂದರೆ ರಕ್ಷಣಾ ಇಲಾಖೆ ಯಾಕೆ ಬೇಕು ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವದ ವಿರೋಧಿ ಕ್ರಮವನ್ನು ಸಂಪುಟದಲ್ಲಿ ಮತ್ತೊಮ್ಮೆ ಪರಿಶೀಲಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಉಗ್ರ ಹೋರಾಟಕ್ಕೆ ಅಣಿಯಾಗಲಿದೆ. ಠಾಣೆಗೆ ಬೆಂಕಿ ಹಚ್ಚಿ ಪೊಲೀಸರಿಗೆ ಥಳಿಸುವವರನ್ನು ಅಮಾಯಕರೆಂದು ತೀರ್ಮಾನಿಸಿದರೆ ಪೊಲೀಸ್ ಇಲಾಖೆಗೆ ಬೀಗ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೂಡಾ ಮಾಜಿ ಅಧ್ಯಕ್ಷ ಎಸ್.ಜ್ಞಾನೇಶ್ವರ್, ಎನ್.ಜೆ.ನಾಗರಾಜ್, ಕಾರ್ಯಕರ್ತ ಶ್ರೀನಾಗ ಬೊಮ್ಮನಕಟ್ಟೆ ಸುದ್ದಿಗೋಷ್ಠಿಯಲ್ಲಿದ್ದರು.