ಸಿಂದಗಿಯಲ್ಲಿ ಮನೆಗಳ ತೆರವು ಕಾರ್ಯಾಚರಣೆಗೆ ಖಂಡನೆ, ಬಿಜೆಪಿಯಿಂದ ಪ್ರತಿಭಟನೆ

BJP PROTEST FOR SINDAGI
ವಿಜಯಪುರ ಜಿಲ್ಲಾಡಳಿತಕ್ಕೆ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಚಂದ್ರಶೇಖರ ಕವಟಗಿ, ಸಂಜಯ ಪಾಟೀಲ ಕನಮಡಿ ಮತ್ತಿತರರಿದ್ದಾರೆ.
Published on

ವಿಜಯಪುರ: ಮನೆಗಳನ್ನು ತೆರವುಗೊಳಿಸುವ ಮೂಲಕ ಸಿಂದಗಿ ನಗರದ 84 ಕುಟುಂಬಗಳ ಬದುಕು ಬೀದಿಗೆ ತಳ್ಳಿರುವ ಆರೋಪದ ಮೇರೆಗೆ ಶನಿವಾರ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಕೂಡಲೇ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಲು ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಬಡವರ ಮನೆಗಳನ್ನು ತೆರವುಗೊಳಿಸಿ ನಿರ್ಗತಿಕರನ್ನಾಗಿ ಮಾಡಿರುವುದು ಅತ್ಯಂತ ಖಂಡನೀಯ. ಕೂಡಲೇ ಆ ಎಲ್ಲ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದರು.

ಬಡವರ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ, ತೆರವು ಕಾಮಗಾರಿ ನಡೆಸುವ ಪೂರ್ವದಲ್ಲಿ ಶಾಶ್ವತ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಏಕಾಏಕಿ ಕಾಮಗಾರಿ ನಡೆಸಿದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಸಿಂದಗಿ ನಗರ ವ್ಯಾಪ್ತಿಯ ವಾರ್ಡ್ ನಂ-23 ರಲ್ಲಿನ ಸರ್ವೆ ನಂ- 842/1ಅ ಕ್ಷೇತ್ರ 4.00 ಎಕರೆ ಪುರಸಭೆಯ ಜಮೀನಿನಲ್ಲಿ 2004 ನೇ ಸಾಲಿನಲ್ಲಿ ಅಂದಿನ ಶಾಸಕರು, ಪುರಸಭೆ ಅಧಿಕಾರಿಗಳು ಹಾಗೂ ತಹಸೀಲ್ದಾರ್‌ರ ಸಮ್ಮುಖದಲ್ಲಿ ಸರಿ ಸುಮಾರು 84 ಮುಗ್ಧ, ಕೂಲಿಕಾರ್ಮಿಕ, ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಎಲ್ಲ ಕುಟುಂಬಗಳಿಗೆ ಕಟ್ಟಡ ಪರವಾನಿಗೆ ನೀಡಿ ಪುರಸಭೆಗೆ ತೆರಿಗೆಯೂ ಭರಣಾ ಮಾಡಿದ್ದರು. ಈಗ 20 ವರ್ಷಗಳ ನಂತರ ಅದೇ ಕ್ಷೇತ್ರದ 2 ಎಕರೆ 10 ಗುಂಟೆ ಜಮೀನಿನ 84 ಕುಟುಂಬಗಳನ್ನು ತೆರವುಗೊಳಿಸಿ ಅನ್ಯಾಯವೆಸಿರುವುದು ನೋವು ತಂದಿದೆ ಎಂದರು.

ತೆರವು ಕಾರ್ಯದಿಂದಾಗಿ ಸುಮಾರು 2.5 ಕೋಟಿಗೂ ಹೆಚ್ಚಿನ ನಷ್ಟವಾಗಿದೆ. ದಿನನಿತ್ಯದ ಕಾರ್ಯಗಳು ಸ್ಥಗಿತಗೊಂಡು ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಈ ವಿಷಯವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಚಂದ್ರಶೇಖರ ಕವಟಗಿ, ಸಂಜಯ ಪಾಟೀಲ ಕನಮಡಿ, ಶಿವರುದ್ರ ಬಾಗಲಕೋಟ, ಶಂಕರಗೌಡ ಪಾಟೀಲ, ಈರಣ್ಣ ರಾವೂರ, ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಸಾಬು ಮಾಶ್ಯಾಳ, ಮಲ್ಲಮ್ಮ ಜೋಗೂರ, ಭರತ ಕೋಳಿ, ಬಸವರಾಜ ಹಳ್ಳಿ, ಗೇಸುದರಾಜ್ ಇನಾಮದಾರ, ಶೇಖರ ಬಾಗಲಕೋಟ, ಅಶ್ವಥ ರೆಬಿನಾಳ, ರಾಜೇಶ ತಾವಸೆ, ಸಂತೋಷ ನಿಂಬರಗಿ, ಪಾಪುಸಿಂಗ್ ರಜಪೂತ, ವಿಜಯ ಹಿರೇಮಠ, ರಾಜು ಬಿರಾದಾರ, ಅಪ್ಪು ಕುಂಬಾರ, ಮಹೇಂದ್ರ ನಾಯಕ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net