ಮತದಾರರ ಖರೀದಿಗೆ ಮುಂದಾಗಿದೆ

web 4
Published on

ಮೂಡಿಗೆರೆ: ಸುಳ್ಳನ್ನೇ ಬಂಡವಾಳ ಮಾಡಿಕೊಂಡು ಜನರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಬೆಂಬಲಿತರಿಗೆ ರೈತರು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬುದ್ಧಿ ಕಲಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.

ಕಳೆದ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಬೆಂಬಲಿತ ನಿರ್ದೇಶಕರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪಾರದರ್ಶಕ ಆಡಳಿತ ನೀಡಿದ್ದಾರೆ. ಆದರೆ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆಧಾರ ರಹಿತ ಆರೋಪ ಮಾಡುತ್ತಿದೆ. ಹಣದ ಆಮಿಷವೊಡ್ಡಿ ಮತ ಖರೀದಿಗೆ ಮುಂದಾಗಿದೆ. ಇಂತಹ ಆಮಿಷಗಳನ್ನು ರೈತರು ತಿರಸ್ಕರಿಸಿ ಮತ್ತೆ ಮೈತ್ರಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಚುನಾಯಿಸುವ ವಿಶ್ವಾಸವಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಇತರೆ ಟಿಎಪಿಸಿಎಂಎಸ್ ಪೈಕಿ ಮೂಡಿಗೆರೆ ಸಂಸ್ಥೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಸುಸಜ್ಜಿತ ರೈತ ಭವನ ನಿರ್ವಿುಸಿದೆ. ಇದು ತಾಲೂಕಿನ ಜನತೆಗೆ ಅಗತ್ಯವಾಗಿತ್ತು. ಪಟ್ಟಣದ ಹೃದಯ ಭಾಗದಲ್ಲಿ ಮಳಿಗೆಗಳನ್ನು ನಿರ್ವಿುಸಲಾಗಿದೆ. ರೈತರಿಗಾಗಿ ಗೊಬ್ಬರ, ಯಾಂತ್ರೀಕರಣ ಉಪಕರಣ ಸೇರಿ ವಿವಿಧ ಸಲಕರಣೆಯನ್ನು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ ಎಂದರು.

ಈ ಬಾರಿ ಕಾಂಗ್ರೆಸ್- ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಜತೆ ರೈತರು ಕೈಜೋಡಿಸಲಿದ್ದಾರೆ. ಆದರೆ ಬಿಜೆಪಿ ಸುಳ್ಳು ಆರೋಪ ಹೊರಿಸಿ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net