

ಕೆ. ಕೆಂಚಪ್ಪ, ಮೊಳಕಾಲ್ಮೂರು: ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಬೆಟ್ಟದ ತಪ್ಪಲಿನ ಕೆರೆ ಈ ವರ್ಷದ ಮಳೆಯಿಂದ ಮೈದುಂಬಿಕೊಂಡಿದ್ದು, ಅಲ್ಲಿ ಪ್ರದೇಶ ಆಕರ್ಷಣೀಯವಾಗಿದೆ. ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿಸಿ ಅಭಿವೃದ್ಧಿಪಡಿಸಿದರೆ ಒಂದೊಳ್ಳೆಯ ಪ್ರವಾಸಿ ತಾಣವಾಗಲಿದೆ.
ಮೇಲು ದುರ್ಗದ ಈ ಕೆರೆ ಮೈಸೂರು ಅರಸರ ಕಾಲದಲ್ಲಿ ನಿರ್ವಣಗೊಂಡಿದ್ದು, ಶತಮಾನದ ಇತಿಹಾಸ ಕಂಡಿದೆ. ಭೂಮಿ ಮಟ್ಟಕ್ಕಿಂತ ಎತ್ತರ ಪ್ರದೇಶದಲ್ಲಿರುವ ಕಾರಣ ಬೆಟ್ಟಕ್ಕೆ ಹೋಗುವ ಜನರಿಗೆ, ಜಾನುವಾರು ಹಾಗೂ ಅಡವಿಯ ಜೀವ ಸಂಕುಲದ ದಾಹ ತಣಿಸುತ್ತಿದೆ.
1920 ರಲ್ಲಿ ಮೈಸೂರಿನ ಶ್ರೀ ಕೃಷ್ಣರಾಜ ಒಡೆಯರ್ ಕುಡಿವ ನೀರಿಗಾಗಿ ಈ ಕೆರೆ ಕಟ್ಟಿಸಿದ್ದರು ಎಂಬ ಮಾತಿದೆ. ಇಂತಹ ಇತಿಹಾಸ ಹಿನ್ನೆಲೆಯುಳ್ಳ ಜಲಮೂಲವನ್ನು ಪ್ರವಾಸಿ ತಾಣವಾಗಿಸಲು ಎಲ್ಲ ರೀತಿಯ ಅನುಕೂಲಗಳಿದ್ದರೂ ಈ ಬಗ್ಗೆ ಯಾರೂ ಚಿಂತಿಸುತ್ತಿಲ್ಲ.
ಚಿತ್ರದುರ್ಗದ ಏಳುಸುತ್ತಿನ ಕೋಟೆಗೆ ಸಮೀಪದ ಚಂದ್ರವಳ್ಳಿ ಕೆರೆಯಂತೆ ಈ ಜಲಪಾತ್ರೆ ಒಮ್ಮೆ ಭರ್ತಿಯಾದರೆ ಸದಾ 8-10 ಅಡಿ ಆಳ ನೀರು ಇರುತ್ತದೆ. ಯಾವುದೇ ನದಿ ಮೂಲ, ಕೆರೆ ಕಟ್ಟೆ ಅಥವಾ ಹಳ್ಳಕೊಳ್ಳಗಳ ಸಂಪರ್ಕವಿಲ್ಲದಿದ್ದರೂ ಕಲ್ಲು ಬಂಡೆಗಳ ಮೇಲೆ ಬೀಳುವ ಮಳೆ ನೀರಿನಿಂದಲೇ ತುಂಬಿಕೊಳ್ಳುತ್ತದೆ.
ಪ್ರಸ್ತುತ ಇದು ಮೀನು ಸಾಕಣೆಗೆ ಮಾತ್ರ ಸೀಮಿತವಾಗಿದೆ. ಕೋಟೆ ಬಡಾವಣೆಯಿಂದ ಕೆರೆಗೆ ಹೋಗಲು ಮೆಟ್ಟಿಲುಗಳ ವ್ಯವಸ್ಥೆ ಇದೆ. ಪಾಳೇಗಾರರ ಆಳ್ವಿಕೆ ಕಾಲದಲ್ಲಿ ಮೊಳಕಾಲ್ಮೂರು ಒಂದು ಪ್ರಾಂತ್ಯವಾಗಿತ್ತು. ಬೆಟ್ಟದ ಮೇಲಿರುವ ಮೇಲು ದುರ್ಗದ ಕೋಟೆಯಲ್ಲಿ ಮಾರಮ್ಮ ದೇವಸ್ಥಾನ, ದ್ವಾರ ಮಂಟಪ, ಕಲ್ಲುದೋಣಿ, ಕಂಪಳರಾಯನ ಹೊಂಡ, ದೀಪಾಲೆ ಹಾಗೂ ಸುತ್ತಲೂ ಕೋಟೆಯ ಬತ್ತೇರಿ ಈಗಲೂ ಇವೆ.
ಮೂರು ವರ್ಷಕ್ಕೊಮ್ಮೆ ನಗರದಲ್ಲಿ ನಡೆಯುವ ನುಂಕಪ್ಪನ ಜಾತ್ರೆ ವೇಳೆ ಇಲ್ಲಿಯೂ ಧಾರ್ವಿುಕ ಕಾರ್ಯಗಳನ್ನು ನಡೆಸುವ ಸಂಪ್ರದಾಯ ವಿದೆ. ಅಳಿವಿನ ಅಂಚಿನಲ್ಲಿರುವ ಮೇಲುದುರ್ಗದ ಕೋಟೆ ಸಂರಕ್ಷಣೆ ಮತ್ತು ಕೆರೆಯ ಕಾಯಕಲ್ಪಕ್ಕೆ ಜಿಲ್ಲಾಡಳಿತ ಮುಂದಾಗಬೇಕಾಗಿದೆ.
ಮೇಲುದುರ್ಗದ ಕೋಟೆ ನೋಡುವುದೇ ಒಂದು ಸೊಬಗು. ಈ ಹಿಂದೆ ಊರಿನ ಜನರಿಗೆ ಈ ಕೆರೆಯೇ ಕುಡಿವ ನೀರಿಗೆ ಆಧಾರವಾಗಿತ್ತು. ಮೊಳಕಾಲ್ಮೂರಿಗೆ ಹೊಂದಿಕೊಂಡಿರುವ 482 ಎಕರೆ ಜಾಗವನ್ನು ಪಾಳೇಗಾರ ವಂಶಸ್ಥರಿಗೆ ಕುದುರೆ ಮೇಯಿಸಲೆಂದು ಅಂದಿನ ರಾಜವೀರ ಮದಕರಿನಾಯಕ ದಾನವಾಗಿ ಕಂಚಿನ ಪತ್ರದಲ್ಲಿ ಬರೆದುಕೊಟ್ಟಿದ್ದಾರೆ. ಮೇಲು ದುರ್ಗದ ಕೆರೆ ನಮ್ಮ ಸುಪರ್ದಿಗೆ ಸೇರಿದ ಕಾರಣ ಮೀನು ಸಾಕಾಣಿಕೆ ಮಾಡುತ್ತಿದ್ದೇವೆ. | ಹಣ್ಣಿನ ಸಿದ್ದಣ್ಣ, ಪಾಳೇಗಾರ ವಂಶಸ್ಥರು, ಮೊಳಕಾಲ್ಮೂರು.