ರಸಗೊಬ್ಬರ ಕಾಯ್ದಿರಿಸಲು ಆ್ಯಪ್​

App for booking fertilizers
App for booking fertilizers
App for booking fertilizers
Published on: 

ರಸಗೊಬ್ಬರ ಕಾಯ್ದಿರಿಸಲು ಆ್ಯಪ್​

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ರಸಗೊಬ್ಬರ ವಿತರಣೆ ವಿಷಯವಾಗಿ ಪ್ರತಿ ಬಾರಿಯೂ ರೈತರಿಂದ ಅನೇಕ ದೂರು ಕೇಳಿಬರುತ್ತದೆ, ರಸಗೊಬ್ಬರ ಸಿಗುತ್ತಿಲ್ಲ, ಕೃತಕ ಅಭಾವ ಸೃಷ್ಟಿ ಮಾಡಲಾಗಿದೆ ಎಂಬ ಆರೋಪಗಳು ಸಾಮಾನ್ಯವಾಗಿವೆ. ಇಂಥ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಡಿಜಿಟಲ್​ ವ್ಯವಸ್ಥೆ ಜಾರಿಗೆ ಮುಂದಾಗಿದೆ.

ಮುಂಗಾರು ಅವಧಿಯಲ್ಲಿನ ರಸಗೊಬ್ಬರಕ್ಕೆ ದಿಢೀರ್​ ಬೇಡಿಕೆ ಸೃಷ್ಟಿಯಾಗುತ್ತದೆ, ರಸಗೊಬ್ಬರ ಮಾರಾಟ ಮಳಿಗೆಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ರೈತರು ಕಾಯುವ ಪರಿಸ್ಥಿತಿ ಕಂಡುಬರುತ್ತದೆ ಪ್ರತಿ ಬಾರಿಯೂ ಇಂಥ ಸಮಸ್ಯೆ ಪುನಾವರ್ತನೆಯಾಗುತ್ತಿದ್ದು ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಡಿ.1ರಿಂದ ರೈತರು ಮನೆಯಲ್ಲೇ ಕುಳಿತು ಮೊಬೈಲ್​ ಆ್ಯಪ್​ ಮೂಲಕ ರಸಗೊಬ್ಬರ ಕಾಯ್ದಿರಿಸುವ ವ್ಯವಸ್ಥೆ ಜಾರಿಗೆ ಸಿದ್ದತೆ ನಡೆಸಿದೆ.

ಅತಂಕ ದೂರ: ರಾಜ್ಯದ ಕೆಲವು ಜಿಲ್ಲೆಗಳ ಜತೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಈ ವ್ಯವಸ್ಥೆ ಜಾರಿಗೆ ಮುಂದಾಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹಾಗೂ ಅರ್ಹರಿಗೆ ಸಬ್ಸಿಡಿ ದೊರಕಿಸಿಕೊಡುವ ನಿಟ್ಟಿನಲ್ಲಿ ಫರ್ಟಿಲೈಸರ್​ ಸೇಲ್​ ಅಪ್ಲಿಕೇಶನ್​ ಸಿಸ್ಟಮ್​ (ಎಫ್​ಎಫ್​ಎಸ್​) ಹಾಗೂ ಪ್ರೇಟ್ವರ್ಕ್​ ಫಾರ್​ ಫರ್ಟಿಲೈಸರ್​ ಎಂಬ ಆ್ಯಪ್​ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರೈತರು ಈ ಮೂಲಕ ಗೊಬ್ಬರವನ್ನು ಬುಕಿಂಗ್​ ಮಾಡಬಹುದು, ಇದರಿಂದ ಸರದಿಸಾಲಿನಲ್ಲಿ ಕಾಯುವ ಅಥವಾ ಗೊಬ್ಬರದ ಕೊರತೆಯ ಆತಂಕದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ದುರುಪಯೋಗ ತಡೆಯಲು ಸಾಧ್ಯ: ತಂತ್ರಾಂಶದ ಮೂಲಕ ರೈತರ ಆಧಾರ್​ ಸಂಖ್ಯೆ, ಜಮೀನಿನ ವಿವರ ಹಾಗೂ ರೈತರ ಗುರುತಿನ ಮಾಹಿತಿ ಸಂಯೋಜಿಸಲಾಗುತ್ತದೆ. ಇದರಿಂದ ರಸಗೊಬ್ಬರ ಮಾರಾಟದಲ್ಲಿ ನಿಖರತೆ ಮತ್ತು ದುರುಪಯೋಗ ತಡೆಯಲು ಸಾಧ್ಯವಾಗುತ್ತದೆ. ರಸಗೊಬ್ಬರ ಮಾರಾಟ ಕೇಂದ್ರಗಳಲ್ಲಿ ಕಸ್ಟಮರ್​ ಸರ್ವೀಸ್​ ಸೆಂಟರ್​, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಸಹಕಾರ ಸೊಸೈಟಿಗಳು ಹಾಗೂ ರಸಗೊಬ್ಬರ ಅಂಗಡಿಗಳ ಮೂಲಕ ರೈತರಿಗೆ ಸಹಾಯ ಮಾಡಲಾಗುತ್ತದೆ. ಅಲ್ಲದೆ, ಫರ್ಟಿಲೈಸರ್​ ಸೇಲ್​ ಅಪ್ಲಿಕೇಶನ್​ ಸಿಸ್ಟಮ್​ ಮೂಲಕ ರಸಗೊಬ್ಬರ ದಾಸ್ತಾನು, ವಿತರಣೆ, ಸಾಗಣೆ, ಸರಬರಾಜು, ಸಂಪೂರ್ಣ ನಿರ್ವಹಣೆ ಸಾಧ್ಯವಾಗಲಿದೆ.ರಸಗೊಬ್ಬರ ಖರೀದಿಗಾಗಿ ರೈತರು ಸಮಸ್ಯೆ ಅನುಭವಿಸುತ್ತಿರುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮೊಬೈಲ್​ ಆ್ಯಪ್​ ಮೂಲಕ ತಮ್ಮ ರಸಗೊಬ್ಬರ ಕಾಯ್ದಿರಿಸುವ ವ್ಯವಸ್ಥೆ ಹೆಚ್ಚು ಅನುಕೂಲವಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಅಂದಾಜು 74 ಸಾವಿರ ಹೆಕ್ಟೇರ್​ ಬಿತ್ತನೆ:

ಇತ್ತೀಚಿನ ವರ್ಷಗಳಲ್ಲಿ ರಸಗೊಬ್ಬರ ಬಳಕೆ ಪ್ರಮಾಣ ಹೆಚ್ಚಿದೆ, ಬೇಡಿಕೆಗೆ ಅನುಸಾರವಾಗಿ ರಸಗೊಬ್ಬರ ಲಭ್ಯವಾಗುವ ಕಡೆಗಳಲ್ಲಿ ಕಾದು ಗೊಬ್ಬರ ಖರೀದಿಸಬೇಕಾದ ಅನಿವಾರ್ಯತೆ ಇರುತ್ತದೆ. ಜಿಲ್ಲೆಯಲ್ಲೂ ಮುಂಗಾರು ಅವಧಿಯಲ್ಲಿ 74ಸಾವಿರ ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮಾಡಲಾಗುತ್ತದೆ. ಈ ಅವಧಿಯಲ್ಲಿ ಮಳೆ, ಹವಾಮಾನ ಬದಲಾವಣೆ ಆಧಾರದಲ್ಲಿ ರಸಗೊಬ್ಬರ ಬಳಕೆ ನಿರ್ಧಾರವಾಗುತ್ತದೆ. ಈ ಅವಧಿಯಲ್ಲಿ ಹೆಚ್ಚಾಗಿ ಎಲ್ಲ ರೈತರು ರಸಗೊಬ್ಬರ ಖರೀದಿಸುವ ಹಿನ್ನೆಲೆಯಲ್ಲಿ ರೈತರಿಗೆ ಸಮಸ್ಯೆ ಆಗುತ್ತದೆ. ಇದೀಗ ಜಾರಿಗೆ ಮುಂದಾಗಿರುವ ಮುಂಗಡ ಬುಕ್ಕಿಂಗ್​ ವ್ಯವಸ್ಥೆ ರೈತರಿಗೆ ವರದಾನವಾಗಲಿದೆ.

ರೈತರು ತಮಗೆ ಅಗತ್ಯವಿರುವ ರಸಗೊಬ್ಬರಗಳನ್ನು ಎರಡು ದಿನ ಮುಂಚೆಯೇ ಮುಂಗಡವಾಗಿ ಎಫ್​ಎಫ್​ಸ್​ ಆ್ಯಪ್​ ಮೂಲಕ ಕಾಯ್ದಿರಿಸಬಹುದು. ಕಾಯ್ದಿರಿಸಿದ ನಂತರ ಎರಡು ದಿನಗಳೊಳಗೆ ತಾವು ಆಯ್ಕೆ ಮಾಡಿದ ರಸಗೊಬ್ಬರದ ಮಳಿಗೆ ಅಥವಾ ಸೊಸೈಟಿಗೆ ಹೋಗಿ ಕ್ಯೂಆರ್​ ಕೋಡ್​ ಅಥವಾ ಟೋಕನ್​ ನಂಬರ್​ ನೀಡಿ ರಸಗೊಬ್ಬರ ಖರೀದಿಸಬಹುದು. ಇದರಿಂದ ಸರದಿ ಸಾಲಿನಲ್ಲಿ ಕಾಯುವ ಪರಿಸ್ಥಿತಿ ಎದುರಾಗುವುದಿಲ್ಲ. ಜತೆಗೆ ಗೊಬ್ಬರ ಸಿಗುವುದೋ ಇಲ್ಲವೋ ಎಂಬ ಆತಂಕವೂ ಇರುವುದಿಲ್ಲ.

> ಕಲಾವತಿ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ, ಬೆಂ.ಗ್ರಾಮಾಂತರ