ಬೈಲನರಸಾಪುರ ಶಾಪಗ್ರಸ್ತ ಗ್ರಾಮ

* ಸ್ವಚ್ಛತೆ ಇಲ್ಲಿ ಮರೀಚಿಕೆ * ಚರಂಡಿಗಳ ನಿರ್ವಹಣೆ ಕೊರತೆ * ಮೂಲಸೌಕರ್ಯಗಳಿಗೆ ಪರದಾಟ
ಗ್ರಾಮದಲ್ಲಿ ತುಂಬಿ ತುಳುಕುತ್ತಿರುವ ಚರಂಡಿಗಳ ಭಾವಚಿತ್ರ
ಗ್ರಾಮದಲ್ಲಿ ತುಂಬಿ ತುಳುಕುತ್ತಿರುವ ಚರಂಡಿಗಳ ಭಾವಚಿತ್ರ
Published on: 

ಎಂ.ರಾಮೇಗೌಡ ನಂದಗುಡಿ

ಹೋಬಳಿಯ ಬೈಲನರಸಾಪುರ ಗ್ರಾಪಂ ವ್ಯಾಪ್ತಿಯ ಬೈಲನರಸಾಪುರದಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ನಿರ್ವಹಣೆ ಕೊರತೆಯಿಂದ ಗ್ರಾಪಂ ಶಾಪಗ್ರಸ್ತವೆನಿಸಿದೆ.

ಚರಂಡಿಗಳು ನಿರ್ವಹಣೆ ಇಲ್ಲದೆ ಗ್ರಾಮದ ವಾತಾವರಣ ಕಲುಷಿತಗೊಂಡಿದೆ. ಚರಂಡಿಗಳಲ್ಲಿ ಕಸಡ್ಡಿಗಳಿಂದ ಹೂಳು ತುಂಬಿಕೊಂಡು ಮಲೀನ ನೀರು ಚರಂಡಿಯಲ್ಲಿ ಹರಿಯಲು ಸಾಧ್ಯವಿಲ್ಲದಂತಾಗಿದೆ. ಪರಿಣಾಮವಾಗಿ ಗ್ರಾಮೀಣ ರಸ್ತೆಗಳಲ್ಲಿ ಮಲೀನ ನೀರು ಹರಿಯುತ್ತಿದ್ದು, ಸ್ವಚ್ಛ ಭಾರತ ಪರಿಕಲ್ಪನೆಯ ಉದ್ದೇಶವೇ ಇಲ್ಲದಂತಾಗಿದೆ.

ಅಲ್ಪಸಂಖ್ಯಾತ ಸಮುದಾಯದವರೇ ಹೆಚ್ಚಾಗಿರುವ ಹೋಬಳಿಯ ಬೈಲಾನರಸಾಪುರದಲ್ಲಿ ಸುಮಾರು 1225 ಕುಟುಂಬ ವಾಸವಿದ್ದು, 5300ಕ್ಕೂ ಹೆಚ್ಚು ಜನಸಂಖ್ಯೆ ಇರುವ ಗ್ರಾಮವಾಗಿದೆ. 10 ಗ್ರಾಪಂ ಸದಸ್ಯರು ಒಳಗೊಂಡಿದ್ದರೂ ಇಲ್ಲಿನ ಚರಂಡಿಗಳು ನಿರ್ವಹಣೆ ಕೊರತೆ ಎದುರಿಸುತ್ತಿದೆ. ಚರಂಡಿಗಳ ನಿರ್ವಹಣೆ ಕೊರತೆಯಿಂದ ಗ್ರಾಮದಲ್ಲಿ ದುರ್ನಾತ ಬೀರುತ್ತಿದ್ದು, ಸೊಳ್ಳೆ&ನೊಣಗಳ ಕಾಟ ವಿಪರೀತವಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಗ್ರಾಮಸ್ಥರು ಜೀವನ ನಡೆಸುವಂತಾಗಿದೆ.

ಮೂಲಸೌಕರ್ಯಗಳಿಗೆ ಪರದಾಟ : ಗ್ರಾಮದಲ್ಲಿ ಮನೆ ಮುಂಭಾಗದಲ್ಲಿರುವ ವಿದ್ಯುತ್​ ಕಂಬಗಳಲ್ಲಿ ಬೀದಿದೀಪ ಅಳವಡಿಸಿರುವುದಿಲ್ಲ. ಸಂಜೆಯಾಗುತ್ತಲೇ ಗ್ರಾಮ ಕಗ್ಗತ್ತಲಿನಲ್ಲಿ ಮುಳುಗುವಂತಾಗುತ್ತದೆ. ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚರಿಸುವುದೇ ಕಷ್ಟಸಾಧ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವುದೇ ಅನುದಾನದ ಬಳಕೆಯೂ ಇಲ್ಲಿ ಕಾಣುವುದಿಲ್ಲ. ಕುಡಿವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ. ಗ್ರಾಮದಲ್ಲಿನ ಬೆರಳೇಣಿಕೆ ಕೊಳವೆಬಾವಿಗಳಲ್ಲಿ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ವಾರಕ್ಕೊಮ್ಮೆ ಕೊಳಾಯಿಗಳಲ್ಲಿ ನೀರು ಬರುವುದು ಕಷ್ಟ ಎಂಬಂತ ಪರಿಸ್ಥಿತಿ ಇದೆ. ಜಮೀನುಗಳಲ್ಲಿನ ಕೊಳವೆಬಾವಿಗಳಲ್ಲಿ ಜಮೀನು ಮಾಲೀಕರನ್ನು ಕಾಡಿಬೇಡಿ ನೀರು ಪಡೆದು ಹೊತ್ತುತರುವಂತ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಗ್ರಾಪಂಗೆ ಸರ್ಕಾರದಿಂದ 15ನೇ ಹಣಕಾಸು ಯೋಜನೆಯಿಂದ ಹಣ ಬಿಡುಗಡೆ ಆಗಿರುವುದಿಲ್ಲ. 16ನೇ ಹಣಕಾಸು ಯೋಜನೆಯ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಮೋದನೆ ಪಡೆಯಲಾಗಿದೆ. ಕುಡಿಯುವ ನೀರಿಗಾಗಿ ಖಾಸಗಿಕೊಳವೆ ಬಾವಿಗಳನ್ನು ಪಡೆದು ಸರ್ಕಾರಕ್ಕೆ ಹಣ ಬಿಡುಗಡೆ ಮಾಡಲು ಕಳಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಗಳಲ್ಲಿರುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು.

> ಮಧು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.

ಗ್ರಾಮದಲ್ಲಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಗ್ರಾಮಸ್ಥರು ಓಡಾಡುವುದೇ ಕಷ್ಟ ಎಂಬಂತ ಪರಿಸ್ಥಿತಿ ಇದೆ. ನಾಯಿಗಳಿಗೆ ಸಂತಾನಶಕ್ತಿಹರಣ ಶಸ್ತ್ರ ಚಿಕಿತ್ಸೆ ಮಾಡುತ್ತೇವೆ ಎನ್ನುತ್ತಾರೆ, ಹೊರತು ಇಂತ ಯಾವುದೇ ಪ್ರಕ್ರಿಯೆ ನಡೆಸುತ್ತಿಲ್ಲ. ಇದರಿಂದ ದಿನೆದಿನೇ ನಾಯಿಗಳ ಸಂತತಿ ಹೆಚ್ಚುತ್ತಲೆ ಇದೆ. ಮಕ್ಕಳನ್ನು ಧೈರ್ಯವಾಗಿ ಹೊರಗಡೆ ಕಳುಹಿಸಲು ಹೆದರುವಂತಾಗಿದೆ.

> ರಾವನತ್​ ಕಾನಂ ಬೈಲನರಸಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net