ಜಿಲ್ಲಾಡಳಿತಭವನ ಆವರಣದಲ್ಲಿ ರಾಯಣ್ಣ ಪ್ರತಿಮೆ

kanakadasa jayanti
kanakadasa jayanti
kanakadasa jayanti
Published on: 

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಜಾಗ ಗುರುತಿಸಲಾಗಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು.ದೇವನಹಳ್ಳಿ ಟೌನ್​ನ ಅಂಬೇಡ್ಕರ್​ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕನಕದಾಸ ಜಯಂತಿಯಲ್ಲಿ ಮಾತನಾಡಿದರು. ಜಿಲ್ಲಾಡಳಿತ ಭವನದ ಆವರಣದಲ್ಲಿ ರಾಯಣ್ಣ ಪ್ರತಿಮೆ ನಿರ್ಮಿಸಲು ಜಾಗ ಗುರುತಿಸಿ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ರಾಯಣ್ಣರ ಪ್ರತಿಮೆ ನಿಮಾರ್ಣ ಕಾರ್ಯ ಸಂಘದ ವತಿಯಿಂದ ಆಗುತ್ತದೆ. ಪ್ರತಿಮೆಗೆ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.

ಭವನಗಳಿಗೆ ಅನುದಾನ ಭರವಸೆ:

ಯಾವೆಲ್ಲ ಸಮುದಾಯದವರು ಸಂಘದ ಮೂಲಕ ಸಮುದಾಯ ಭವನ ನಿಮಾರ್ಣಕ್ಕೆ ಮನವಿ ಸಲ್ಲಿಸುತ್ತಾರೆ ಅಂತವರಿಗೆ ಬಯಪ ಪ್ರಾಧಿಕಾರ ವತಿಯಿಂದ ಸಿಎ ನಿವೇಶನ ಮಂಜೂರು ಮಾಡಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು, ಆ ಭವನಗಳಿಗೆ ತಗಲುವ ಅನುದಾನ ಬಿಡುಗಡೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಮಾರ್ಗದರ್ಶನದಲ್ಲಿ ಸಾಗೋಣ:

ಕನಕದಾಸರು 15 ನೇ ಶತಮಾನದ ಸಮಾಜದ ಸುಧಾರಕರು, ದಾಸರು ಸಮಾನತೆ, ಭ್ರಾತೃತ್ವ ಸೌಹಾರ್ದತೆಯನ್ನು ಸಮಾಜಕ್ಕೆ ಸಾರಿದರು. ಧ್ಯಾನ, ಭಕ್ತಿಯಿಂದ ದೇವರನ್ನು ಪ್ರತ್ಯಕ್ಷವಾಗಿ ಕಂಡ ಮಹಾನ್​ ಸಂತ ಕನಕದಾಸರು. ಅವರ ಕೀರ್ತನೆಗಳು, ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜ ಸುಧಾರಣೆಗೆ ಅವರ ಕೊಡುಗೆ ಅಪಾರವಾದದ್ದು ಕನಕದಾಸರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಗೋಣ ಎಂದು ಮುನಿಯಪ್ಪ ಕರೆ ನೀಡಿದರು.

ಸಂದೇಶ, ಉಪನ್ಯಾಸ:

ದೇವನಹಳ್ಳಿ ತಾಲೂಕು ನಿವೃತ್ತ ಶಿಕ್ಷಕ ರಾಮಯ್ಯ ಉಪನ್ಯಾಸ ನೀಡಿ ಕನಕದಾಸರ ಜೀವನ ಚರಿತ್ರೆ, ಕನಕದಾಸರ ಕೀರ್ತನೆಗಳ ಬಗ್ಗೆ ಮಾತನಾಡಿದರು. ಕನಕದಾಸರು ಜಾತಿ, ಮತ, ಮೇಲು-ಕೀಳು ಎಂಬ ಭೇದವನ್ನು ತಿರಸ್ಕರಿಸಿದರು. ದೇವರ ಮುಂದೆ ಎಲ್ಲರೂ ಒಂದೇ ಎಂಬ ಸತ್ಯವನ್ನು ಸಾರಿದರು ಎಂಬ ಕನಕದಾಸರ ಸಂದೇಶಗಳನ್ನು ತಿಳಿಸಿದರು.ವಿಶೇಷ ಆಹ್ವಾನಿತರಾಗಿ ಬಿಗ್​ ಬಾಸ್​ ಸೀಸನ್​ 12 ರ ವಿಜೇತ, ಕನ್ನಡ ಚಿತ್ರರಂಗದ ಕಲಾವಿದ ಗಿಲ್ಲಿ ನಟ ಕಾರ್ಯಕ್ರಮದಲ್ಲಿ ಪ್ರೇಕ್ಷಕರನ್ನು ರಂಜಿಸಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.